ಸರ್ಕಾರಿ ಶಾಲೆಗಳು ಎಂದರೆ ಪ್ರಸ್ತುತ ಕೆಲವೊಂದು ಕಡೆ ನೆನಪಿಗೆ ಬರುವುದೆಂದರೆ, ಖಾಲಿ ಖಾಲಿ ಬೆಂಚುಗಳ ಮದ್ಯೆ ಅಲ್ಲೊಂದು‌ ಇಲ್ಲೊಂದು‌ ಮಗು ಕೂತಿರುವ, ಶಾಲೆಗಳಲ್ಲಿ ಇರುವ ಇಬ್ಬರು‌ ಅಥವಾ ಮೂವರು‌ ಶಿಕ್ಷಕರೆ ಎಲ್ಲ‌ ತರಗತಿಗಳನ್ನು ತೆಗೆದುಕೊಂಡು‌, ತೂಗಿಸಿಕೊಂಡು ಹೋಗಬೇಕಾದ‌ ಅನಿವಾರ್ಯತೆ ಕಾಣುವ ದೃಶ್ಯ ಎನ್ನುವಂತಾಗಿದೆ.

ಒಂದು ಕಾಲವಿತ್ತು. ಸರ್ಕಾರಿ ಶಾಲೆಗಳಲ್ಲಿ ಕೊಠಡಿ ತುಂಬಾ ಮಕ್ಕಳು ಮತ್ತು ಅವರ ನಗು, ಗದ್ದಲದ ಸದ್ದು ತುಂಬಿ ತುಳುಕುತ್ತಿತ್ತು. ಮದ್ಯಾಹ್ನದ ಬಿಸಿ ಊಟಕ್ಕೆ ಸಾಲಾಗಿ ಕೂತು ತಟ್ಟೆಗೆ ಆಹಾರ ಸೇರಿದೊಡನೆ ಎಲ್ಲ ವಿದ್ಯಾರ್ಥಿಗಳು ಒಟ್ಟಿಗೆ ಸೇರಿ ಶಾಂತಿ ಮಂತ್ರ ಹೇಳಿ "ಅನ್ನದಾತೋ ಸುಖಿ ಭವ" ಎನ್ನುತ್ತಾ ತುತ್ತನ್ನು ಬಾಯಿಗಿಡುತ್ತಿದ್ದೆವು. ಈ ನಿಯಮದಿಂದ, ಮಕ್ಕಳ ನಡುವೆ ಪರಸ್ಪರ ಹಂಚಿ ತಿನ್ನುವ ಸಾಮರಸ್ಯ, ಮತ್ತು ಅನ್ನ ನಮ್ಮ ತಟ್ಟೆಗೆ ಬಂದು ಸೇರುವವರೆಗೆ ಅದರ ಹಿಂದೆ ಯಾರ ಯಾರ ಶ್ರಮವಿದೆಯೋ ಅವರೆಲ್ಲರಿಗೂ ಒಂದು ಧನ್ಯವಾದ / ಕೃತಜ್ಞತೆ ಅರ್ಪಿಸುವ ಹಾಗೂ "ಅನ್ನಂ ಪರಬ್ರಹ್ಮ ಸ್ವರೂಪಂ" ಎನ್ನುವಾಗ ಅನ್ನವು ದೈವ ಸ್ವರೂಪ, ಹಾಗಾಗಿ ಅದನ್ನು ಹೇಗೆ ಗೌರವಿಸಬೇಕು ಎನ್ನುವ ಸಂಸ್ಕಾರ ದೊರೆಯುತ್ತಿತ್ತು. ಶಾಲಾ ಅಂಗಳದಲ್ಲಿ ಎಲ್ಲಾ ಮಕ್ಕಳು ಒಟ್ಟಿಗೆ ಆಟವಾಡುವಾಗ, ನಕ್ಕು ನಲಿಯುವಾಗ ದೈಹಿಕ ಚಟುವಟಿಕೆಯೊಟ್ಟಿಗೆ ಜಾತಿ ಭೇದ ಮರೆತು ಎಲ್ಲರೊಂದಿಗೆ ಬೆರೆತು ಬಾಳಿದರೆ ಹೇಗೆ ಅಗಣಿತ ಖುಷಿ ದಕ್ಕುತ್ತಿತ್ತು ಎನ್ನುವ ಮಾನಸಿಕ ಶಿಕ್ಷಣವು ಉದಾಹರಣೆ ಸಮೇತ ಮಕ್ಕಳಿಗೆ ತಿಳಿಯುತ್ತಿತ್ತು. ಸಾಲಾಗಿ ನಿಂತು ರಾಷ್ಟಗೀತೆ, ನಾಡಗೀತೆ ಹಾಡುವಾಗ, ನಮ್ಮ ನಾಡು ನುಡಿ ಮತ್ತು ದೇಶಕ್ಕೆ ಸಲ್ಲಿಸಬೇಕಾದ ಗೌರವದ ಸಂಸ್ಕಾರ ಸಿಗುತ್ತಿತ್ತು.

ಗುರುಗಳು ಬೈದು ಬುದ್ದಿ ಹೇಳುವಾಗ, ತಪ್ಪಿಗೆ ಸಣ್ಣಪುಟ್ಟ ಶಿಕ್ಷೆ ಕೊಟ್ಟು ತಿದ್ದಿ ಹೇಳುವಾಗ ಮತ್ತೆಂದೂ ಆ ತಪ್ಪು ಮರುಕಳಿಸದಂತೆ ಎಚ್ಚರ ವಹಿಸುವ ಬುದ್ಧಿವಂತಿಕೆ ಮತ್ತು ಗಟ್ಟಿತನ ಅಭ್ಯಾಸವಾಗುತ್ತಿತ್ತು. ಆಟ ಪಾಠಗಳ ಜೊತೆಗೆ ಬದುಕಿಗೆ ಚೈತನ್ಯ ತುಂಬುವ ನೈತಿಕ ಮೌಲ್ಯಗಳು ಸುಲಭವಾಗಿ ದಕ್ಕುತ್ತಿದ್ದವು. ಬಡತನವಿದ್ದರೂ ಕುಗ್ಗದೆ ಸಿರಿತನ ಬಂದರೆ ಕುಗ್ಗದೆ ಹೇಗೆ ಸಮಚಿತ್ತದಿಂದ ಬಾಳುವುದು ಎಂಬುದು ವಿವಿಧರ ನಡುವೆ ಬೆರೆತ ಅನುಭವ ಕಲಿಸುತ್ತಿತ್ತು. ಬೆಳಿಗ್ಗೆ ಶಾಲೆಯ ಬೆಲ್ ಸದ್ದಿಗೆ ಜೋಳಿಗೆಯಂತ ಬ್ಯಾಗ್ ನೇತುಹಾಕಿಕೊಂಡು ಸಂಭ್ರಮದಿಂದ ಓಡಿ ಬರುತ್ತಿದ್ದವರು, ಸಂಜೆ ಶಾಲೆ ಮುಗಿದ ಬೆಲ್ ಸದ್ದಿಗೂ ಅಷ್ಟೇ ಖುಷಿಯಾಗಿ ಮನೆ ಕಡೆ ಓಡುತ್ತಿದ್ದೆವು. ಪೇಪರ್ ದೋಣಿ, ಕಾಡೋ ಮಳೆಗೆ ಕೊಡೆ ಹಿಡಿದು ಹೋಗುವಾಗ, ನದಿ ಹೊಳೆ ಹೀಗೆ ಪ್ರಕೃತಿ ಜೊತೆ ಬಾಂಧವ್ಯ ಬೆಳೆಸಿಕೊಳ್ಳುವಾಗ ಎಲ್ಲವೂ ಸುಂದರ ಎನಿಸುತ್ತಿತ್ತು. ಅದೆಷ್ಟು ಚೆಂದದ ದಿನಗಳು ಅವು. ಈಗಿನ ಮಕ್ಕಳ ಸ್ಥಿತಿ ಹೇಗಿದೆ? ಬೆಳಗ್ಗೆ ಸಂತಸದಿಂದ ಶಾಲೆಗೆ ಹೋದ ಮಕ್ಕಳು ಸಂಜೆ ಯಾವುದೊ ಭಾರವನ್ನೆಲ್ಲ ತಲೆ ಮೇಲೆ ಹೊತ್ತುಕೊಂಡಂತೆ ಮುಖ ಇಳಿಬಿಟ್ಟು ಬರುತ್ತಿರುವ ಎಷ್ಟೋ ಮಕ್ಕಳನ್ನು ನೋಡಿರುತ್ತೇವೆ. ಆಧುನಿಕ ಶಿಕ್ಷಣ ಪದ್ಧತಿ, ಅತಿಯಾದ ಶಿಸ್ತು ಮಕ್ಕಳ ಚೈತನ್ಯ ಮತ್ತು ಕ್ರಿಯಾಶೀಲತೆಯನ್ನು ಕಿತ್ತುಕೊಳ್ಳುತ್ತಿದೆಯ..?

ಆದರೆ ಇಂದಿನ ಮಕ್ಕಳು ಎಷ್ಟೋ ಸವಲತ್ತುಗಳಿಂದ ವಂಚಿತರಾಗುತ್ತಿರುವುದಂತು ಸತ್ಯ..! ಕಾರಣ, ಬದಲಾದ ಕಾಲವೋ ? ಅಥವಾ ಅತಿಯಾದ ಆಧುನೀಕರಣದ ಮನೋಭಾವವೋ ?. ಇಂದಿನ ತಂದೆ ತಾಯಿಯರಿಗೆ ತಮ್ಮ ಮಕ್ಕಳು ಏನು ಕಲಿಯುತ್ತಾರೋ ಬಿಡುತ್ತಾರೋ, ಆದರೆ ಹೆಚ್ಚು ಅಂಕ ಪ್ರತಿಷ್ಟಿತ ಕೆಲಸಗಳು ಎಲ್ಲ ಕಡೆ ಹೇಳಿಕೊಂಡು ತಿರುಗುವಂತಿರಬೇಕು. ಮಕ್ಕಳ ಆಸಕ್ತಿ ಏನು? ಯಾವ ದಾರಿಯಲ್ಲಿ ಸಾಗುತ್ತಿದ್ದಾರೆ ಎನ್ನುವುದಕ್ಕಿಂತ ತಮ್ಮ ಸ್ವ ಪ್ರತಿಷ್ಠೆಗಳೇ ಮುಖ್ಯ..! ಅದಕ್ಕಾಗಿ ಅವರ ಚಿತ್ತ ಹೊರಳುವುದು ಮೊದಲು ಖಾಸಗಿ ಶಾಲೆ ಸಂಸ್ಥೆಗಳತ್ತ. ಅವು ಖಾಸಗಿ ಶಾಲೆಗಳೋ ಅಥವಾ ಕಾಸಿಗಾಗಿ ಆಗಿರುವ ಶಾಲೆಗಳೋ ತಿಳಿಯದಾಗಿದೆ..!? ನಿಸ್ವಾರ್ಥತೆಯೇ ಮರೆಯಾದ ವಾತಾವರಣದಲ್ಲಿ ಸಿಗುವ ಶಿಕ್ಷಣ ಯಾವ ತೆರೆನದ್ದೋ ? ಅಂಕಗಳು ಹೆಚ್ಚು ಹೆಚ್ಚು ಸಿಗುತ್ತಿವೆ, ವಿದ್ಯಾವಂತರು ಎನ್ನುವ ಸರ್ಟಿಫಿಕೇಟ್ಗಳು ಹೆಚ್ಚಾಗುತ್ತಿವೆ. ಅಂತೆಯೇ ಸಮಾಜದಲ್ಲಿ ಅಪರಾಧಗಳು ಹೆಚ್ಚುತ್ತಿರುವುದು ಸತ್ಯ. ಸಾಕಷ್ಟು ವಿದ್ಯಾವಂತರು ಎನ್ನಿಸಿಕೊಂಡವರೇ ಅಪರಾಧಿಗಳಾಗುತ್ತಿರುವುದು ಕೂಡ ಸತ್ಯ..! ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ ಎಂಬಂತೆ..! ಅಲ್ಲವೇ? ಹಾಗಿದ್ದರೆ ಈಗಿನ ಶಿಕ್ಷಣ ನೀತಿ ಎಂತದ್ದು? ಯಾವ ದಿಕ್ಕಿನಲ್ಲಿ ಅದು ಸಾಗುತ್ತಿದೆ ? ಮತ್ತು ಸಮಾಜವನ್ನು ಸಾಗಿಸುತ್ತಿದೆ ? ದುರ್ಬಲ ಮನಸ್ಥಿತಿಗಳು ಹೆಚ್ಚಾಗುತ್ತಿರುವುದು ಯಾಕೆ ?

ಗುರು ಶಿಷ್ಯ ಪರಂಪರೆ ಮಾಯವಾಗಿ, ಕೇವಲ ಶಿಕ್ಷಕ ಮತ್ತು ವಿದ್ಯಾರ್ಥಿ ಅನ್ನುವ ಮನೋಭಾವ, ಸೀಮಿತ ಕಲಿಕೆಯೆಡೆಗೆ ಹೊರಳಿಸುತ್ತಿದೆ ಎನಿಸುತ್ತದೆ ಅಲ್ಲವೇ ? ಜಗತ್ತಿಗೆ ಗುರುವಿನ ಅವಶ್ಯಕತೆ ಇದೆ. ಸರಿಯಾಗಿ ದಾರಿ ತೋರುವ ಗುರುವಿಗೆ ದಕ್ಕುವ ಶಿಷ್ಯರು ದೊಡ್ಡ ಗುರಿಯಾಗುತ್ತಾರೆ, ದೇಶ ಕಟ್ಟುವ ನಾಯಕರಾಗುತ್ತಾರೆ. ಈಗಿನ ವಾತಾವರಣದಲ್ಲಿ ಅಂತಹ ನಿಷ್ಕಲ್ಮಶ ವಿದ್ಯೆ ನೀಡುವ ಸಂಸ್ಥೆಗಳು ಮತ್ತು ಗುರುಗಳು ನಮ್ಮ ನಡುವೆ ಎಷ್ಟಿದ್ದಾರೆ ? ಗುರುಗಳ ವಾಕ್ಯ ಪಾಲಿಸಿ ಬದುಕು ಕಟ್ಟಿಕೊಳ್ಳುವ ನಿಷ್ಠಾವಂತ ಶಿಷ್ಯರು ಎಷ್ಟು ಜನ ತಯಾರಿದ್ದಾರೆ..? ಯೋಚಿಸಬೇಕಾದ ವಿಷಯ ಅಲ್ಲವೇ..? ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಿ ಎನ್ನುವ ಸರ್ಕಾರಗಳು, ನಾಯಿಕೊಡೆಯಂತೆ ಗಲ್ಲಿಗೊಂದು ಹುಟ್ಟುತ್ತಿರುವ ಶಾಲೆಗಳಿಗೆ ಪರವಾನಿಗೆ ಕೊಡುತ್ತಿರುವುದು ಯಾಕೆ..? ಮೊದಲಿಗೆ ಹೋಲಿಸಿದರೆ ಈಗಿನ ಸರ್ಕಾರಿ ಶಾಲೆಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಎಲ್ಲ ರೀತಿಯ ಯೋಗ್ಯ ಶಿಕ್ಷಣ ಪ್ರಾದೇಶಿಕ ಸರ್ಕಾರಿ ಶಾಲೆಗಳಲ್ಲೂ ದಕ್ಕುತ್ತಿವೆ. ಖಾಸಗಿ ಸಂಸ್ಥೆಗಳ ನಾಗಾಲೋಟಕ್ಕೆ ಬ್ರೇಕ್ ಹಾಕಿ, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮತ್ತಷ್ಟು ಒತ್ತು ಕೊಡುವತ್ತ ಚಿಂತನೆಗಳು, ಯೋಜನೆಗಳನ್ನು ಸರ್ಕಾರ ಜಾರಿಗೆ ತರುವತ್ತ ಯೋಚಿಸಬಾರದೇಕೆ..? ಆಗ ಸಹಜವಾಗೆ ಜನರಿಗೆ ನಂಬಿಕೆ ಹುಟ್ಟಿ, ಸರ್ಕಾರಿ ಶಾಲೆಗಳತ್ತ ಮುಖ ಮಾಡುತ್ತಾರೆ. ಅಲ್ಲವೇ..? ಯೋಗ್ಯ ಶಿಕ್ಷಣದ ಜೊತೆಗೆ ಅರೋಗ್ಯಯುತ ಸಮಾಜವನ್ನು ನಮ್ಮ ಮುಂದಿನ ಪೀಳಿಗೆಗೆ ನೀಡುವತ್ತ ಗಮನ ಹರಿಸೋಣ.. ಏನಂತೀರಿ..?

_ಪಲ್ಲವಿ ಚೆನ್ನಬಸಪ್ಪ✍️