ಬೀಜ ಹೆಕ್ಕಿ ಹುರಿದು ತಿನ್ನುವುದು, ಹಕ್ಕಿ ಅಳಿಲು ಹಣ್ಣು ಬೀಳಿಸುವುದನ್ನು ಕಾದು ತಿನ್ನುವುದು, ಉಪ್ಪು ನೀರಿನಲ್ಲಿ ಹಾಕಿಟ್ಟ ಕಾಯಿಯನ್ನು ತಿನ್ನುವುದು ಇವೆಲ್ಲ ತುಳುನಾಡಿನಲ್ಲಿ ಸಹಜ ಎಂಬಂತ್ತಿತ್ತು.
ಹೆಬ್ಬಲಸು ಎಂಬುದು ಹಲಸಿನ ಹಣ್ಣಿನ ಸಣ್ಣ ರೂಪವಾದರೂ ಮರ ಭಾರೀ ಆಗುವುದರಿಂದ ಹೆಬ್ಬಲಸು ಎಂದರೆ ದೊಡ್ಡ ಹಲಸು ಎನ್ನುತ್ತಾರೆ.
ಆರ್ಟೊಕಾರ್ಪಸ್ ಹಿರ್ಸುಟಸ್ ಎಂಬ ಈ ಮರವು ತೇಗದೊಂದಿಗೆ ಹೋಲಿಸಬಲ್ಲ ಬಾಳಿಕೆಯನ್ನು ಪಡೆದಿದೆ.
ಪಡುವಣ ಘಟ್ಟದಲ್ಲಿ ಕೇರಳ, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು ಇಲ್ಲೆಲ್ಲ ಬೆಳೆಯುವ ಇದು ಮನೆ ಬಳಕೆಯ ಮರವಾಗಿದೆ.
ದೇವಾಲಯ ಜೀರ್ಣೋದ್ಧಾರಗಳು ಊರುಗಳ ದೊಡ್ಡ ಹೆಬ್ಬಲಸು ಮರಗಳನ್ನೆಲ್ಲ ಬಲಿ ಪಡೆದಿವೆ.
ಇದು ಬಹುವಾರ್ಷಿಕ ಮರವಾಗಿದ್ದು, ಬಹುತೇಕ ನಿತ್ಯ ಹಸಿರು ಮರವಾಗಿದೆ.