ಮಂಗಳೂರು, ಸೆ. 19: ಕೊರೊನಾ ಸಾಂಕ್ರಾಮಿಕವು ಮಕ್ಕಳ ಕಲಿಕೆಯನ್ನು ಹಾಳುಗೆಡಹಿದ್ದು, ಅವರ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಅವರ ಏಕಾಗ್ರತೆ ಕುಂಠಿತವಾಗಿದ್ದು, ಪರದೆಯ ಅವಲಂಬನೆಯನ್ನು ಹೆಚ್ಚಿಸಿದೆ. ಸಾಮಾಜೀಕರಣವನ್ನು ಕುಂದಿಸಿದ್ದು, ಅಸಹಜ ವರ್ತನೆಗಳನ್ನು ಹೆಚ್ಚಿಸಿ ಮಾನಸಿಕ ಒತ್ತಡವನ್ನು ಸೃಷ್ಟಿಸಿದೆ ಎಂದು ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ರೆಕ್ಟರ್ ವಂ| ಮೆಲ್ವಿನ್ ಜೋಸೆಫ್ ಪಿಂಟೊ ಅಭಿಫ್ರಾಯ ಪಟ್ಟರು.

ಅವರು ಶನಿವಾರ ಇಲ್ಲಿನ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನಲ್ಲಿ ‘ಮಕ್ಕಳ ಮಾನಸಿಕ ಆರೋಗ್ಯ- ಬದಲಾಗುತ್ತಿರುವ ಒಲವುಗಳು’ ಎಂಬ ವಿಷಯದ ಮೇಲೆ ನಡೆದ ಭಾರತೀಯ ಮನೋ ವೈದ್ಯರ ಸಂಘದ (ಇಂಡಿಯನ್ ಸೈಕಿಯಾಟ್ರಿಕ್ ಸೊಸೈಟಿ- ಐಪಿಎಸ್‌ಕೆಸಿ) ಕರ್ನಾಟಕ ಘಟಕದ 31 ನೇ ವಾರ್ಷಿಕ ಸಮ್ಮೇಳನದಲ್ಲಿ  ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಸಮ್ಮೇಳನ ಸ್ವಾಗತ ಸಮಿತಿಯ ಅಧ್ಯಕ್ಷರಾದ ಡಾ| ಸುಪ್ರಿಯಾ ಹೆಗ್ಡೆ ಸ್ವಾಗತಿಸಿದರು. ಐಪಿಎಸ್‌ಕೆಸಿ ಅಧ್ಯಕ್ಷ ಡಾ| ಶ್ರೀಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಇಂಡಿಯನ್ ಸೈಕಿಯಾಟ್ರಿಕ್ ಸೊಸೈಟಿಯ ರಾಷ್ಟ್ರೀಯ ಅಧ್ಯಕ್ಷ ಡಾ| ಗೌತಮ್ ಸಾಹ ಅವರು ಕೊರೊನಾ ಸಾಂಕ್ರಾಮಿಕದ ಈ ಸಂದರ್ಭದಲ್ಲಿಯೂ ಕರ್ನಾಟಕ ಘಟಕವು ವಾರ್ಷಿಕ ಸಮ್ಮೇಳನ ನಡೆಸಿರುವುದು ಶ್ಲಾಘನೀಯ ಎಂದರು.

ಫಾದರ್ ಮುಲ್ಲರ್ ಸಂಸ್ಥೆಗಳ ನಿರ್ದೇಶಕ ವಂ| ರಿಚಾರ್ಡ್ ಎ. ಕುವೆಲ್ಲೊ ಅವರು ಸಮ್ಮೇಳನಕ್ಕೆ ಶುಭ ಕೋರಿ ಮನೋ ವೈದ್ಯಕೀಯ ವೈದ್ಯರಿಂದ ಸಮಾಜಕ್ಕೆ ಉತ್ತಮ ಸೇವೆಗಳು ದೊರೆಯಲಿ ಎಂದರು.

ಸಮ್ಮೇಳನದ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಸಂಘಟನಾ ಕಾರ್ಯದರ್ಶಿ ಡಾ| ಅವಿನಾಶ್ ಜೋ, ಇಂಡಿಯನ್ ಸೈಕಿಯಾಟ್ರಿಕ್ ಸೊಸೈಟಿಯ ಚುನಾಯಿತ ಅಧ್ಯಕ್ಷ ಡಾ| ಎನ್.ಎನ್. ರಾಜು, ಗೌರವ ಕಾರ್ಯದರ್ಶಿ ಟಿ.ಎಸ್.ಎಸ್. ರಾವ್, ಡಾ|  ಕೆ. ರಾಧಾಕೃಷ್ಣನ್, ಡಾ| ರಮಣನ್ ಎರಾಟ್, ಡಾ| ಸುರೇಶ್ ಕುಮಾರ್ ಗುಣಪಲ್ಲಿ, ಡಾ| ಸೋಮಶೇಖರ್ ಬಿಜ್ಜಳ್, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಮನೊ ವೈದ್ಯಕೀಯ ವಿಭಾಗದ ಶಿಕ್ಷಕರು ಉಪಸ್ಥಿತರಿದ್ದರು.