ಮುಂಬಯಿ: ಫೆಡರೇಶನ್ ಆಫ್ ಹೊಟೇಲ್ ಎಂಡ್ ರೆಸ್ಟೋರೆಂಟ್ ಅಸೋಸಿಯೇಶ ನ್‍ಸ್ ಮಹಾರಾಷ್ಟ್ರ (ಎಫ್‍ಹೆಚ್‍ಆರ್‍ಎಎಂ) ಸಂಸ್ಥೆಯ ನಿಯೋಗವು ಇಂದಿಲ್ಲಿ ಶುಕ್ರವಾರ ಎಫ್‍ಎಲ್-3 ಪರ್ಮಿಟ್ ರೂಂ ಪರವಾನಗಿದಾರರ ಕಳವಳಗಳ ಬಗ್ಗೆ ಚರ್ಚಿಸಲು ಮಹಾರಾಷ್ಟ್ರ ರಾಜ್ಯದ ಅಬಕಾರಿ ಆಯುಕ್ತ ರಾಜೇಶ್ ದೇಶಮುಖ್ ಅವನ್ನು ಭೇಟಿ ಮಾಡಿ ತಮ್ಮ ಮನವಿಯನ್ನು ಸಲ್ಲಿಸಿತು.

ನಿಯೋಗವು  ಮಹಾರಾಷ್ಟ್ರ ರಾಜ್ಯದಲ್ಲಿನ ಪರ್ಮಿಟ್ ರೂಮ್ ಹಾಗೂ ಬಿಯರ್ ಬಾರ್ (ಎಫ್‍ಎಲ್-3) ಮತ್ತು ಪ್ರತಿವರ್ಷ ಸಂಗ್ರಹಿಸುವ ಪರವಾನಗಿ ನವೀಕರಣ ಶುಲ್ಕವನ್ನು ರದ್ದುಗೊಳಿಸಲು ಮತ್ತು ಮದ್ಯ ಮಾರಾಟದಿಂದ ಸರ್ಕಾರದ ಆದಾಯವನ್ನು ಹೆಚ್ಚಿಸಲು, ಮದ್ಯ ತಯಾರಿಕೆಯ ಮೇಲೆ ಪ್ರಥಮ ದಶಮಾಂಶ ತೆರಿಗೆಯನ್ನು ಅನ್ವಯಿಸುವ ತುರ್ತು ಬೇಡಿಕೆಗಳ ಈಡೇರಿಕೆಗಳ ಬಗ್ಗೆ ಅಬಕಾರಿ ಆಯುಕ್ತರಲ್ಲಿ ಚರ್ಚೆ ನಡೆಸಿ ಶೀಘ್ರವಾಗಿ ಈ ಬಗ್ಗೆ ಕ್ರಮಕೈಗೊಳ್ಳುವಂತೆ ಮನವಿ ಮಾಡಿತು.

ನಮ್ಮ ಚರ್ಚೆ ಸಮಯದಲ್ಲಿ, ಪರವಾನಗಿ ಕೊಠಡಿ ಪರವಾನಗಿದಾರರು ಎದುರಿಸುತ್ತಿರುವ ಸವಾಲುಗಳನ್ನು ತಿಳಿಸುತ್ತಾ ಪರ್ಮಿಟ್ ರೂಮ್‍ಗಳನ್ನು ತೆಗೆದುಹಾಕಲು ಗಡಿರೇಖೆಯ ಅವಶ್ಯಕತೆ ಹಾಗೂ ಪರ್ಮಿಟ್ ರಸೀದಿಯನ್ನು ಹೊಂದಿರುವ ಗ್ರಾಹಕರಿಗೆ ಮಾತ್ರ ಮದ್ಯ ಸೇವಿಸಲು ಅನುಮತಿಸುವ ನಿರ್ಬಂಧವನ್ನು ತೆಗೆದು ಹಾಕಲಾಗುವ ಬಗ್ಗೆ ಮಾತುಕತೆ ನಡೆಸಿತು ಎಂದು ಫೆಡರೇಶನ್‍ನ ಉಪಾಧ್ಯಕ್ಷ ಶ್ಯಾಮ್ ಎನ್.ಶೆಟ್ಟಿ ತಿಳಿಸಿದರು.

ಈ ಸಂದರ್ಭದಲ್ಲಿ ಫೆಡರೇಶನ್‍ನ ಉಪಾಧ್ಯಕ್ಷ ದಯಾನಂದ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ದುರ್ಗಾಪ್ರಸಾದ್ ಸಿ.ಸಾಲಿಯಾನ್, ಜತೆ ಕಾರ್ಯದರ್ಶಿ ಭಾಸ್ಕರ ಶೆಟ್ಟಿ, ಸಲಹಾ ಸಮಿತಿ ಕಾರ್ಯಾಧ್ಯಕ್ಷ ಕಳತ್ತೂರು ವಿಶ್ವನಾಥ ಜೆ.ಶೆಟ್ಟಿ, ಹೊಟೇಲು ಉದ್ಯಮಿ ಸುರೇಶ್ ಶೆಟ್ಟಿ ಯೆಯ್ಯಾಡಿ ಉಪಸ್ಥಿತರಿದ್ದರು.