ಚಿತ್ರ / ವರದಿ : ರೋನ್ಸ್ ಬಂಟ್ವಾಳ್

ಮುಂಬಯಿ: ನಮ್ಮ ಸದಸ್ಯರೆಲ್ಲರೂ ಹೃದಯಶೀಲರು. ಸಂಘದ ಯೋಜನೆಗಳಿಗೆ ಪ್ರೋತ್ಸಾಹ ನೀಡುತ್ತಾರೆ. ಸೇವೆಯ ಮೂಲಕ ಸಮಾಜಮುಖಿ ಕೆಲಸಗಳು ನಡೆಯಬೇಕೆಂದು ಆಶಿಸುತ್ತಾರೆ. ಇವರ ಸಹಯೋಗ ಸಮಾಜದ ಉನ್ನತೀಕರನ್ನೂ ಪ್ರೋತ್ಸಹಕರವಾಗಬಲ್ಲದು. ಸಮುದಾಯ ನಿರ್ಮಾಣಕ್ಕೆ ಮತ್ತು ಸಂಸ್ಥೆಯ ಸೇವೆಗಳನ್ನು ಕಾರ್ಯರೂಪಕ್ಕೆ ತರಲು ಮಹಿಳಾ ಸದಸ್ಯೆಯರ ಪಾತ್ರವೂ ಮಹತ್ತರವಾದುದು. ಆದುದರುಂದ ನಮ್ಮ ಯುವತಿಯರು ಅಂತರ್ಜಾತಿಯ ವಿಹಾಹದಿಂದ ಮುಕ್ತರಾಗಿ ಸ್ವಸಮಾಜದ ಹಿತ ಕಾಪಾಡಿಕೊಳ್ಳಬೇಕು. ಇದು ಸಂಸ್ಕಾರರದ ಹಿತದೃಷ್ಠಿಯಿಂದಲೂ ಸುಭದ್ರ. ಇಂತಹ ಮನೋಭಾವದಿಂದ ಸಮಾಜ ಬಲಿಷ್ಠವಾಗುತ್ತದೆ. ಸದಸ್ಯರೆಲ್ಲರೂ ಸಮಾಜವನ್ನು ಬಲಾಢ್ಯ ಪಡಿಸುವ ಮಾಪನವಾಗಬೇಕು. ಅದಕ್ಕಾಗಿ ನಾವೆಲ್ಲರೂ ಸೇವಾಮನೋಭಾವದಿಂದ ಕಾರ್ಯನಿರತರಾಗೋಣ ಎಂದು ಹೆಗ್ಗಡೆ ಸೇವಾ ಸಂಘ ಮುಂಬಯಿ ಇದರ ಅಧ್ಯಕ್ಷ ಮನೋಜ್ ಹೆಗ್ಡೆ ಥಾಣೆ ತಿಳಿಸಿದರು.

ಹೆಗ್ಗಡೆ ಸೇವಾ ಸಂಘ ಮುಂಬಯಿ ತನ್ನ 61ನೇ ವಾರ್ಷಿಕ ಮಹಾಸಭೆಯನ್ನು ಭಾನುವಾರ ನವಿ ಮುಂಬಯಿ ಐರೋಲಿ ಇಲ್ಲಿನ ಹೆಗ್ಗಡೆ ಭವನದಲ್ಲಿ ನಡೆಸಿದ್ದು ಮಹಾಸಭೆಯ ಅಧ್ಯಕ್ಷತೆ ವಹಿಸಿ ಮನೋಜ್ ಹೆಗ್ಡೆ ಥಾಣೆ ಮಾತನಾಡಿದರು.  

ಸಂಘದ ಗೌರವಾಧ್ಯಕ್ಷ ಆನಂದ್ ಹೆಗ್ಡೆ, ಸಂಘದ ಉಪಾಧ್ಯಕ್ಷ ಅರುಣ್ ಹೆಗ್ಡೆ, ಗೌ| ಪ್ರ| ಕಾರ್ಯದರ್ಶಿ ಸುರೇಂದ್ರನಾಥ್ ಹೆಗ್ಡೆ, ಗೌ| ಪ್ರ| ಕೋಶಾಧಿಕಾರಿ ಸಿಎ| ಸುರೇಶ್ ಹೆಗ್ಡೆ, ಜೊತೆ ಕಾರ್ಯದರ್ಶಿ ರೂಪೇಶ್ ಹೆಗ್ಡೆ, ಜೊತೆ ಖಜಾಂಚಿ ಹರೀಶ್‌ಕುಮಾರ್ ಹೆಗ್ಡೆ ವೇದಿಕೆಯಲ್ಲಿ ಆಸೀನರಾಗಿದ್ದರು.

ಮಹಿಳಾ ವಿಭಾಗದಧ್ಯಕ್ಷೆ ಛಾಯಾ ಹೆಗ್ಡೆ ನೂರಾನಿ, ಯುವ ವಿಭಾಗಧ್ಯಕ್ಷ ಸುನೀಲ್ ರಘುನಾಥ್ ಹೆಗ್ಡೆ, ಆಂತರಿಕ ಲೆಕ್ಕಪರಿಶೋಧಕ  ಗಣೇಶ್ ಹೆಗ್ಡೆ ಥಾಣೆ ಪ್ರಮುಖರಾಗಿ ಹಾಜರಿದ್ದು ಸಭಿಕ ಸದಸ್ಯರಲ್ಲಿನ ಕೆಲವು ಸದಸ್ಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಸಂಘದ ಸೇವಾ ವೈಖರಿಯನ್ನು ಪ್ರಶಂಸಿಸಿ ಸಂಘವು ಮತ್ತಷ್ಟು ಉನ್ನತಿಯತ್ತ ಸಾಗಲಿ ಎಂದು ಹಾರೈಸಿದರು.

ಸುರೇಂದ್ರನಾಥ್ ಹೆಗ್ಡೆ ಅವರು ಗತ 60ನೇ ವಾರ್ಷಿಕ ಸಾಮಾನ್ಯ ಸಭೆಯ ವರದಿ ಸಭೆ ಮತ್ತು ಗತ ವಿಶೇಷ ಸಾಮಾನ್ಯ ಸಭೆಯ ವರದಿ ವಾಚಿಸಿದರು. ಸಿಎ| ಸುರೇಶ್ ಹೆಗ್ಡೆ ಗತ ಸಾಲಿನ ಸಂಘದ ಸೇವಾ ಚಟುವಟಿಕೆಗಳ ಮಾಹಿತಿಯನ್ನಿತ್ತು ಕೊನೆಗೊಂಡ ಹಣಕಾಸು ವರ್ಷದ ಆದಾಯ-ವೆಚ್ಚ, ಆಯವ್ಯಯ ಪಟ್ಟಿ  (ಬ್ಯಾಲೆನ್ಸ್ ಶೀಟ್) ಮತ್ತು ಲೆಕ್ಕಪರಿಶೋಧಕರ ವರದಿಯನ್ನು ಮಂಡಿಸಿದರು. ಬಳಿಕ 2025-2026ರ ಹಣಕಾಸು ವರ್ಷಕ್ಕೆ ಶಾಸನಬದ್ಧ ಲೆಕ್ಕಪರಿಶೋಧಕರನ್ನಾಗಿ ಆಂತರಿಕ ಲೆಕ್ಕಪರಿಶೋಧಕ  ಗಣೇಶ್ ಹೆಗ್ಡೆ ಅವರನ್ನೇ ನೇಮಿಸಲಾಯಿತು. ಹಾಗೂ ಇದೇ ಹಣಕಾಸು ವರ್ಷದ ಮುಂಗಡಪತ್ರ  (ಬಜೆಟ್) ಮಂಡಿಸಲಾಯಿತು.

ಕುಲದೇವರು ಶ್ರೀ ವೀರಮಾರುತಿ ಹನುಮಾನ್ ದೇವರಿಗೆ ಸ್ತುತಿಸಿ ಸಭೆ ಪ್ರಾರಂಭಗೊಳಿಸಲಾಯಿತು. ಗತ ಸಾಲಿನಲ್ಲಿ ಅಗಲಿದ ಸಂಘದ ಸದಸ್ಯರು, ಹಿತೈಷಿಗಳಿಗೆ ಮೌನಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಲ| ಮುರಳೀಧರ್ ಹೆಗ್ಡೆ ಸ್ವಾಗತಿಸಿ ಸಭಾ ಕಲಾಪ ನಡೆಸಿ ಧನ್ಯವದಿಸಿದರು. ರಾಷ್ಟ್ರಗೀತೆಯೊಂದಿಗೆ ಮಹಾಸಭೆ ಮುಕ್ತಾಯಗೊಂಡಿತು.