ಮಂಗಳೂರು: ಪತ್ರಿಕಾ ಭವನಕ್ಕೆ ಮಂಗಳವಾರ ಭೇಟಿ ನೀಡಿದ ಕರ್ನಾಟಕ ಮಲ್ಲ ಪತ್ರಿಕೆ ಸಂಪಾದಕ, ಹಿರಿಯ ಪತ್ರಕರ್ತ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಪಾಲೆತ್ತಾಡಿಯವರನ್ನು ದ. ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್‌ಕ್ಲಬ್, ಪತ್ರಿಕಾ ಭವನ ಟ್ರಸ್ಟ್‌ನಿಂದ ಗೌರವಿಸಲಾಯಿತು.
ಗೌರವ ಸ್ವೀಕರಿಸಿ ಮಾತನಾಡಿದ ಚಂದ್ರಶೇಖರ ಪಾಲೆತ್ತಾಡಿ, ಮಾಧ್ಯಮ ಕ್ಷೇತ್ರದಲ್ಲಿ ಈಗ ಕಲಿಯಲು ಬಹಳಷ್ಟಿದೆ. ಪ್ರಾಮಾಣಿಕವಾಗಿ ದುಡಿದವರನ್ನು ಸಮಾಜ ಗುರುತಿಸುತ್ತದೆ ಎಂದರು.
ಕೋವಿಡ್‌ನ ಈ ದಿನಗಳಲ್ಲಿ ಪತ್ರಿಕಾರಂಗ ಸಂಕಷ್ಟದಲ್ಲಿದೆ. ಪ್ರಸಕ್ತ ಸಂಕ್ಷಿಪ್ತ ಸುದ್ದಿ, ಫೋಟೋ ಪ್ರಕಟಿಸುವ ಕಾಲ ಬಂದಿದೆ. ಜಾಹಿರಾತು ಆಧಾರಿತ ಸುದ್ದಿಗಳಿಗೂ ಮಹತ್ವ ನೀಡಬೇಕಾಗಿದೆ. ಪತ್ರಿಕೆಗೆ ಓದುಗರೇ ಜೀವಾಳ. ಜಾಹಿರಾತು ಸುದ್ದಿಗಳ ಜೊತೆಗೆ ಓದುಗರ ಸುದ್ದಿಗಳಿಗೆ ಆದ್ಯತೆ ನೀಡಬೇಕು. ಕರ್ನಾಟಕ ಮಲ್ಲ ಪತ್ರಿಕೆ ಮುಂಬೈನದಲ್ಲಿ ಕನ್ನಡಿಗರ ಸಣ್ಣಪುಟ್ಟ ಸುದ್ದಿಗಳಿಗೂ ಮಹತ್ವ ನೀಡಿದೆ ಎಂದರು.
ನನಗೆ ನೀಡಿದ ರಾಜ್ಯೋತ್ಸವ ಪ್ರಶಸ್ತಿ ನನ್ನ ಪತ್ರಿಕೆ ಓದುಗರು, ಸಹೋದ್ಯೋಗಿ ಹಾಗೂ ಇಲ್ಲಿನ ಪತ್ರಕರ್ತರಿಗೆ ಸಮರ್ಪಿಸುತ್ತೇನೆ ಎಂದರು.
ತುಳು ರಂಗಭೂಮಿಯ ಹಿರಿಯರಾದ ದೇವದಾಸ ಕಾಪಿಕಾಡ್, ವಿಜಯ ಕುಮಾರ್ ಕೊಡಿಯಾಲಬೈಲ್, ಪಾಲೆತ್ತಾಡಿಯವರು ಮುಂಬೈಯಲ್ಲಿ ತುಳು ನಾಟಕ, ತುಳು ಚಟುವಟಿಕೆಗಳಿಗೆ ನೀಡುತ್ತಿರುವ ಪ್ರೋತ್ಸಾಹವನ್ನು ಸ್ಮರಿಸಿದರು.
ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ ಶುಭ ಕೋರಿದರು. ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್, ಉಪಸ್ಥಿತರಿದ್ದರು.
ದ.ಕ. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿ, ಕಾರ್ಯಕಾರಿಣಿ ಸದಸ್ಯ ಭಾಸ್ಕರ ರೈ ಕಟ್ಟ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.