ಮಂಗಳೂರು, ಮೇ. 03:- ಮಂಗಳೂರಿನ ಮೀನುಗಾರಿಕಾ ಬಂದರಿನಲ್ಲಿ ಚಿಲ್ಲರೆ ಮೀನು ಮಾರಾಟಗಾರರಿಂದ ಮೀನು ಮಾರಾಟ ಮಾಡುವುದು ಹಾಗೂ ಸಾರ್ವಜನಿಕರು ಮೀನು ಖರೀದಿ ಮಾಡುವುದನ್ನು  ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಸೂಚಿಸಿದರು.

ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶಾಸಕರು ಹಾಗೂ ಮೀನುಗಾರಿಕಾ ಇಲಾಖೆಯ ಅಧಿಕಾರಿಗಳ ಜೊತೆ ಹಳೆ ಬಂದರುಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡುವ ಕುರಿತು ನಡೆದ ಸಭೆಯಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಾರ್ವಜನಿಕರು ಮೀನುಗಾರಿಕಾ ಬಂದರಿನಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ  ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಮೀನು ಖರೀದಿಗೆ ಜನಜಂಗುಳಿಯಾಗುತ್ತಿದ್ದು, ಇದರಿಂದ ಸೋಂಕು ಹರಡುವ ಸಾಧ್ಯತೆ ಇರುವ ಹಿನ್ನಲೆ ಸಾರ್ವಜಿನಿಕರು ಮೀನುಗಾರಿಕಾ ಬಂದರಿನಲ್ಲಿ ಮೀನು ಖರೀದಿ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ , ಒಂದು ವೇಳೆ ನಿಯಮಗಳ ಉಲ್ಲಂಘನೆ ಮಾಡಿದರೆ ಅಂತವರ ವಿರುದ್ಧದಂಡ ವಸೂಲಿ ಮಾಡುವುದರೊಂದಿಗೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಸಾರ್ವಜನಿಕರು ಮೀನುಗಳನ್ನು ಸ್ಥಳೀಯ ವ್ಯಾಪ್ತಿಯ ಮೀನು ಮಾರುಕಟ್ಟೆಗಳಲ್ಲಿ ಖರೀದಿಸಬಹುದಾಗಿದೆ, ಅಲ್ಲದೇ ಸ್ಥಳೀಯ ಮಾರುಕಟ್ಟೆಗಳಲ್ಲಿಯೇ ಕಟ್ಟಿಂಗ್ ಮಾಡುವುದು ಮತ್ತು ಶುಚಿಗೊಳಿಸುವುದು ಅವಶ್ಯಎಂದರು.

ಮಂಗಳೂರು ಮೀನುಗಾರಿಕಾ ಬಂದರಿನ ಒಳಗೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹೊರ ರಾಜ್ಯದಿಂದ ಮೀನು ಬರುವ ಹೋಲ್ ಸೇಲ್ ಮಾರುಕಟ್ಟೆಯಲ್ಲಿ ರಿಟೇಲ್ ಮತ್ತು ಚಿಲ್ಲರೆ ವ್ಯಾಪಾರವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ, ಮೇಲ್ಕಾಣಿಸಿದ ಸೂಚನೆಗಳನ್ನು ಉಲ್ಲಂಘನೆ ಮಾಡಿದ್ದಲ್ಲಿ ಅಂತವರ ಮೇಲೆ ವಿಪತ್ತು ನಿರ್ವಹಣೆ  ಕಲಂ 51 ರಡಿ ಹಾಗೂ ಕರ್ನಾಟಕ ಸಾಂಕ್ರಾಮಿಕ ರೋಗ ಅಧಿನಿಯಮದಡಿ ಕಾನೂನು ಕ್ರಮವನ್ನು ಕೈಗೊಳ್ಳಲಾಗುವುದು ಎಂದರು.

ಸಾರ್ವಜನಿಕರು ಅನಾವಶ್ಯಕವಾಗಿ ಮೀನುಗಾರಿಕಾ ಬಂದರಿನಲ್ಲಿ ಓಡಾಡುವುದನ್ನು ಕಡ್ಡಾಯವಾಗಿ ನೀಷೇಧಿಸಲಾಗಿದೆ ಅನಾವಶ್ಯಕವಾಗಿ ಓಡಾಡುವುದು ಕಂಡು ಬಂದಲ್ಲಿ ಅಂತವರ ಮೇಲೆ ಕಾನೂನಿನಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಬಂದರಿನಲ್ಲಿ ಕೋವಿಡ್ ಮಾರ್ಗಸೂಚಿಗಳು ಸೇರಿದಂತೆ ಚಿಲ್ಲರೆ ಮಾರಾಟ ನಿಷೇಧ ಉಲ್ಲಂಘನೆ ನಿಯಂತ್ರಿಸಲು ಅಧಿಕಾರಿಗಳು ಮುಂದಾಗಬೇಕು. ಉಲ್ಲಂಘಿಸುವವರ ವೀಡಿಯೋ-ಚಿತ್ರಗಳನ್ನು ಸಂಗ್ರಹಿಸುವಂತೆ ಸೂಚಿಸಿದ ಅವರು ಇವುಗಳ ನಿಯಂತ್ರಣಕ್ಕೆ ಹೆಚ್ಚಿನ ಹೋಮ್‍ಗಾಡ್ರ್ಸ್ ಹಾಗೂ ಪೋಲಿಸರುಗಳನ್ನು ನೇಮಕ ಮಾಡಬೇಕೆಂದು ಸೂಚನೆ ನೀಡಿದರು.

ವರ್ತಕರುಗಳು ತಮ್ಮಕಾರ್ಮಿಕರಿಗೆ ಸ್ಯಾನಿಟೈಸರ್ ಮತ್ತು ಸಾದ್ಯವಾಗುವಷ್ಟು ಬಟ್ಟೆಯಿಂದ ತಯಾರಿಸಿರುವ ಮಾಸ್ಕ್‍ಗಳನ್ನು ಒದಗಿಸುವುದರೊಂದಿಗೆ ಅವುಗಳ ಬಳಕೆ ಮಾಡಿಕೊಳ್ಳವಂತೆ ಎಚ್ಚರ ವಹಿಸಬೇಕು, ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಮೀನುಗಾರಿಕಾ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗುವುದು ಎಂದರು.

 ಶಾಸಕ ವೇದವ್ಯಾಸ್‍ ಕಾಮತ್ ಮಾತನಾಡಿ, ಸರ್ಕಾರ ಕೋರೋನಾ ಸೋಂಕು ಹರಡುವುದನ್ನು  ನಿಯಂತ್ರಿಸಲು ಹೊಸ ಹೊಸ ಮಾರ್ಗಸೂಚಿಗಳನ್ನು ಜಾರಿಗೆತರುತ್ತಿದೆ ಇದನ್ನು ಪ್ರತಿಯೊಬ್ಬ ನಾಗರಿಕನು ಚಾಚು ತಪ್ಪದೇ ಪಾಲನೆ ಮಾಡಬೇಕು. ಯಾರೂ ಕಾನೂನು ವ್ಯವಸ್ಥೆಗಳ ಪಾಲನೆಯನ್ನು ಕಟ್ಟುನಿಟ್ಟಾಗಿ ಮಾಡುತ್ತಿಲ್ಲ ಅಂತವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಧ್ವನಿವರ್ಧಕಗಳನ್ನು ಬಳಸಿ ಇದರ ಬಗ್ಗೆ ಸಾರ್ವಜನಿಕರಿಗೆ ಹಾಗೂ ಮೀನು ಮಾರಾಟಗಾರರಿಗೆ ಮಾಹಿತಿ ನೀಡಬೇಕುಎಂದರು.

ಸಭೆಯಲ್ಲಿ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ ಅಧ್ಯಕ್ಷ ನಿತಿನ್‍ ಕುಮಾರ್, ಮಂಗಳೂರು ಮಹಾನಗರಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ,  ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಅಪರ ಜಿಲ್ಲಾಧಿಕಾರಿ ದಿನೇಶ್‍ ಕುಮಾರ್, ಸಹಾಯಕ ಪೊಲೀಸ್‍ ಆಯುಕ್ತ ಪಿ.ಎ ಹೆಗ್ಡೆ, ಮತ್ತಿತರರು ಉಪಸ್ಥಿತರಿದ್ದರು.