ಮಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯ ʼಚಕೋರ ಸಾಹಿತ್ಯ ವಿಚಾರ ವೇದಿಕೆ ದ.ಕ ಜಿಲ್ಲೆʼ ಯು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗ ಹಾಗೂ ಇತರ ಸಹಪಠ್ಯ ವೇದಿಕೆಗಳ ಜೊತೆ ಸೇರಿ ಉದ್ಘಾಟನೆಗೊಂಡಿತು. ಈ ಕಾರ್ಯಕ್ರಮವು ಜ. 31 ರಂದು ಅಪರಾಹ್ನ 2-30 ಕ್ಕೆ ಸಾನಿಧ್ಯ ಸಭಾಂಗಣದಲ್ಲಿ ನಡೆಯಿತು.
ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಸಹಕುಲಪತಿಗಳಾಗಿರುವ ರೆ. ಡಾಕ್ಟರ್ ಮೆಲ್ವಿನ್ ಡಿಕುನ್ಹ ಎಸ್ ಜೆ ಅವರು ಚಕೋರ ವಿಚಾರ ಸಾಹಿತ್ಯ ವಿಚಾರ ವೇದಿಕೆಯನ್ನು ಉದ್ಘಾಟಿಸಿದರು. ಉದ್ಘಾಟಿಸಿ ಮಾತನಾಡಿದ ಅವರು ಜಗದ ಗಾಯಕ್ಕೆ ಸಾಹಿತ್ಯ ಮತ್ತು ಸಾಹಿತ್ಯದ ಓದು ಬಹಳ ಮುಖ್ಯವಾದದ್ದು ಎಂಬುದಾಗಿ ಹೇಳಿದರು.
ಉದ್ಘಾಟನೆಯ ಜೊತೆಯಲ್ಲಿ ʼಕುವೆಂಪು ಅವರ ವಿಚಾರಕ್ರಾಂತಿಗೆ ಆಹ್ವಾನʼ ಲೇಖನವನ್ನು ಕುರಿತು ವಿಶೇಷ ಉಪನ್ಯಾಸವನ್ನೂ ಏರ್ಪಡಿಸಲಾಗಿತ್ತು. ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿರುವ ಮದಗೊಂಡ ಬಿರಾದಾರ ಅವರು ಕುವೆಂಪುರವರ ಈ ಲೇಖನದ ಬಗ್ಗೆ ಮಾತನಾಡಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರು ಮತ್ತು ಚಕೋರ ಸಾಹಿತ್ಯ ವಿಚಾರ ವೇದಿಕೆಯ ಸಂಚಾಲಕರಾಗಿರುವ ಡಾಕ್ಟರ್ ಜಯಪ್ರಕಾಶ್ ಶೆಟ್ಟಿ ಹೆಚ್ ಚಕೋರ ಕಾರ್ಯಕ್ರಮದ ಬಗ್ಗೆ ಪ್ರಸ್ತಾವಿಕವಾಗಿ ಮಾತನಾಡಿದರು. ಸಂತ ಅಲೋಶಿಯಸ್ ವಿಶ್ವವಿದ್ಯಾನಿಲಯದ ಡಾ ವಿಶ್ವನಾಥ ಬದಿಕಾನ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು.
ಕನ್ನಡ ವಿಭಾಗದ ಮುಖ್ಯಸ್ಥರಾಗಿರುವ ಡಾ. ಕೆ ಮಹಾಲಿಂಗ ಭಟ್ ಇವರು ಸ್ವಾಗತಿಸಿದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿರುವ ಡಾಕ್ಟರ್ ದಿನೇಶ್ ನಾಯಕ್ ಅವರು ವಂದಿಸಿದರು. ಕಾರ್ಯಕ್ರಮದಲ್ಲಿ ಕೃಷ್ಣ ಸಾಸ್ತಾನ ಇವರು ಕುವೆಂಪುರವರ ಭಾವಗೀತೆಗಳನ್ನು ಹಾಡಿ ರಂಜಿಸಿದರು.