ಮಂಗಳೂರು: ಶಾಲಾ ಸಂಸತ್ತು ನಾಯಕತ್ವದ ತರಬೇತಿಗೊಂದು ವೇದಿಕೆ.  ಈ ನಾಯಕತ್ವ ರಾಜಕೀಯಕ್ಕೆ ಸೀಮಿತವಾಗದೇ ಸಮಾಜದಲ್ಲಿ ದೊರೆತ ಕ್ಷೇತ್ರಗಳಲ್ಲಿ ಸದ್ಬಳಕೆಯಾಗಬೇಕು. ದೇಶದ ಘನತೆ ಹೆಚ್ಚಿಸುವ ಗುರಿ ನಮ್ಮೆಲ್ಲರದ್ದಾಗಬೇಕು ಎಂದು ಕೆನರಾ ಎಂಜಿನಿಯರಿಂಗ್ ಕಾಲೇಜಿನ ಆಡಳಿತಾಧಿಕಾರಿ ಎಂ. ಗಣೇಶ್ ಕಾಮತ್ ಹೇಳಿದರು. ಅವರು ಊರ್ವ ಕೆನರಾ ಪ್ರೌಢ ಶಾಲೆಯ ಪ್ರಸಕ್ತ ಸಾಲಿನ ಶಾಲಾ ಸಂಸತ್ ಉದ್ಘಾಟಿಸಿ ಮಾತನಾಡಿದರು.  ಅಬ್ದುಲ್ ಕಲಾಂ ಅವರಂತಹ ನೇತಾರರು ನಮಗೆ ಮಾದರಿಯಾಗಿದ್ದು ಪ್ರಜಾಪ್ರಭುತ್ವದಲ್ಲಿ ವಿಪುಲವಾಗಿರುವ ನಾಯಕತ್ವದ ಅವಕಾಶಗಳನ್ನು ಬಳಸಿಕೊಳ್ಳಿ ಎಂದವರು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಲಾ ಆಡಳಿತ ಮಂಡಳಿ ಕೆನರಾ ಹೈಸ್ಕೂಲ್ ಎಸೋಸಿಯೇಶನ್ ಅಧ್ಯಕ್ಷ ಎಂ. ಅಣ್ಣಪ್ಪ ಪೈ ಅವರು ಮಾತನಾಡಿ ರಾಜಕೀಯ ಸೇರಿದಂತೆ ಸಮಾಜದ ಹಲವು ಸ್ತರಗಳಲ್ಲಿ ಕೆನರಾ ಶಿಕ್ಷಣ ಸಂಸ್ಥೆಗಳು ನಾಯಕರನ್ನೇ ಕೊಡುಗೆಯಾಗಿ ನೀಡಿವೆ ಎಂದರು.

ಶಾಲಾ ಮುಖ್ಯೋಪಾಧ್ಯಾಯಿನಿ ನವಿತಾ ಪ್ರಕಾಶ್ ಶಾಲಾ ಸಂಪುಟದ ನಾಯಕರುಗಳಿಗೆ ಪ್ರಮಾಣವಚನ ಬೋಧಿಸಿದರು.

ಶಾಲಾ ಸಂಪುಟ ನಾಯಕ  ಸ್ವಸ್ತಿಕ್ ಎಸ್. ಶೆಟ್ಟಿ, ಉಪನಾಯಕಿ ಅಹನಾ ಕಿಣಿ ಸಹಿತ ಸಂಪುಟದ 15 ಮಂದಿ ವಿದ್ಯಾರ್ಥಿ ನಾಯಕರು ಅಧಿಕಾರ ಸ್ವೀಕರಿಸಿದರು.

ಆಡಳಿತ ಮಂಡಳಿ ಕಾರ್ಯದರ್ಶಿ ಎಂ. ರಂಗನಾಥ್ ಭಟ್, ಕೋಶಾಧಿಕಾರಿ ಎಂ.ವಾಮನ ಕಾಮತ್, ಶಾಲಾ ಸಂಚಾಲಕ ಪಂಚಮಾಲ್ ಗೋಪಾಲಕೃಷ್ಣ ಶೆಣೈ, ಶಿಕ್ಷಕ ರಾಜಾರಾಮ್,  ಕೆನರಾ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಲಲನಾ ಜೆ.ಶೆಣೈ ಉಪಸ್ಥಿತರಿದ್ದು ವಿದ್ಯಾರ್ಥಿ ಸಂಸತ್‍ನ ಸಂಪುಟದ ಪ್ರತಿನಿಧಿಗಳಿಗೆ ಶುಭ ಹಾರೈಸಿದರು.

ವಿದ್ಯಾರ್ಥಿಗಳಾದ  ಪ್ರಣವ್ ರಾವ್ ಸ್ವಾಗತಿಸಿ ವೈಷ್ಣವಿ ಗೋರೆ ವಂದಿಸಿದರು ಪ್ರಣಾಲಿ ಡಿಚೋಲಿಕಲ್ ಕಾರ್ಯಕ್ರಮ ನಿರೂಪಿಸಿದರು.