ಕಾರ್ಕಳ, ನಿಟ್ಟೆ: ನಿಟ್ಟೆ, ಸೆಪ್ಟೆಂಬರ್ 3: 'ವಿದ್ಯಾರ್ಥಿಗಳು ಜೀವನವನ್ನು ಗಂಭೀರವಾಗಿ ಪರಿಗಣಿಸಬೇಕು. ಪ್ರತಿಯೋರ್ವ ಮಾನವನೂ ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದು ಅತ್ಯಗತ್ಯ. ಇದರಿಂದ ಜೀವನದ ಮೌಲ್ಯಗಳನ್ನು ಕಲಿಯಬಹುದಾಗಿದೆ' ಎಂದು ಆಳ್ವಾಸ್ ಎಜುಕೇಶನ್ ಫೌಂಡೇಶನ್‌ನ ಟ್ರಸ್ಟಿ ವಿವೇಕ್ ಆಳ್ವ ಅಭಿಪ್ರಾಯಪಟ್ಟರು.

ಅವರು ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಘಟಕದ 2025–26ನೇ ಸಾಲಿನ ಚಟುವಟಿಕೆಗಳನ್ನು ಬುಧವಾರ ಸಂಭ್ರಮ್ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು. 'ವಿದ್ಯಾರ್ಥಿಗಳು ಪ್ರಚಲಿತ ತಂತ್ರಜ್ಞಾನವಾಗಿರುವ ಕೃತಕ ಬುದ್ದಿಮತ್ತೆ ಎಂಬ ಹೆಸರನ್ನಷ್ಟೇ ಅರಿತರೆ ಸಾಲದು, ಅದನ್ನು ಕರಗತಗೊಳಿಸುವ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೌಶಲ್ಯಯುತ ಅಭ್ಯರ್ಥಿಗಷ್ಟೇ ಉದ್ಯೋಗಾವಕಾಶ ಸಿಗಲಿದೆ. ನೈಜ ಜೀವನದ ಸಮಸ್ಯೆಗಳನ್ನು ಅರಿತು ಅವುಗಳಿಗೆ ಪರಿಹಾರ ಕಂಡುಕೊಳ್ಳಲು ವಿದ್ಯಾರ್ಥಿಗಳು ಮುಂದಾಗಬೇಕು ' ಎಂದರು.

ಗೌರವ ಅತಿಥಿಯಾಗಿ ಭಾಗವಹಿಸಿದ್ದ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಎನ್‌ಎಸ್‌ಎಸ್ ಸಂಯೋಜಕ ಶಶಿಕುಮಾರ ಶೆಟ್ಟಿ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ ಈ ಶೈಕ್ಷಣಿಕ ವರ್ಷದಲ್ಲಿ ಹೆಚ್ಚಿನ ಸಂಖ್ಯೆಯ ಎನ್‌ಎಸ್‌ಎಸ್ ಚಟುವಟಿಕೆಗಳನ್ನು ಕೈಗೊಳ್ಳುವಂತೆ ವಿದ್ಯಾರ್ಥಿಗಳನ್ನು ಉತ್ತೇಜಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ನಿರಂಜನ್ ಎನ್ ಚಿಪ್ಳೂಣ್ಕರ್ ಮಾತನಾಡಿ ಸುಸ್ಥಿರತೆಯ ಅಗತ್ಯವನ್ನು ಪ್ರತಿಯೊಬ್ಬರೂ ಅರಿತು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದರು. ಹೊಸದಾಗಿ ಆಯ್ಕೆಯಾದ ಎನ್‌ಎಸ್‌ಎಸ್ ತಂಡಕ್ಕೆ ಅವರು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ನಿಕಟಪೂರ್ವ ಎನ್.ಎಸ್.ಎಸ್. ಅಧಿಕಾರಿ ಶ್ರೀನಿವಾಸ ನೆಕ್ಕಾರ್ ಅವರನ್ನು ಗೌರವಿಸಲಾಯಿತು.

ಕಾರ್ಯಕ್ರಮಕ್ಕೆ ಎನ್‌ಎಸ್‌ಎಸ್ ಅಧಿಕಾರಿ ಡಾ. ಧನಂಜಯ ಬಿ ಸ್ವಾಗತಿಸಿದರು. ವಿದ್ಯಾರ್ಥಿನಿ ಮೇಘ ಮುಖ್ಯ ಅತಿಥಿಗಳನ್ನು ಪರಿಚರಿಯಿಸಿದರು. ಅನುಷಾ ಗೌರವ ಅತಿಥಿಗಳನ್ನು ಪರಿಚಯಿಸಿದರು. ಎನ್‌ಎಸ್‌ಎಸ್ ವಿದ್ಯಾರ್ಥಿ ಅಧ್ಯಕ್ಷೆ ಶರಣ್ಯ ವಂದಿಸಿದರು. ವಿದ್ಯಾರ್ಥಿನಿ ಸ್ಪೂರ್ತಿ ಬೈಲೂರು ಕಾರ್ಯಕ್ರಮ ನಿರೂಪಿಸಿದರು.