ಕಾರ್ಕಳ:  ಜಗತ್ತು ಹೊಸಹೊಸ ತಂತ್ರಜ್ಞಾನಕ್ಕೆ ತೆರೆದುಕೊಳ್ಳುತ್ತಿರುವ ನಡುವೆ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ವಾಟ್ಸಾಪ್ ಬಳಕೆಯಿಂದ ಪುಸ್ತಕ ,ನಿಯತಕಾಲಿಕೆಗಳ ಓದುಗರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ, ಈ ನಿಟ್ಟಿನಲ್ಲಿ ಓದುಗರ ಅಭಿರುಚಿಗೆ ತಕ್ಕಂತೆ ನೂತನ ಗ್ರಂಥಾಲಯದಲ್ಲಿ ಇ-ಲೈಬ್ರರಿ ಸೌಲಭ್ಯ ಒದಗಿಸಲಾಗಿದೆ ಈ ಮೂಲಕ ಸಾಹಿತ್ಯಕ್ಷೇತ್ರಕ್ಕೆ ಬಲಬಂದಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು.

ಅವರು ಮಂಗಳವಾರ ಕಾರ್ಕಳ ಗಾಂಧಿ ಮೈದಾನದ ಬಳಿ ನೂತನವಾಗಿ ನಿರ್ಮಾಣಗೊಂಡ ಕಾರ್ಕಳ ತಾಲೂಕು ಶಾಖಾ ಗ್ರಂಥಾಲಯವನ್ನು ಉದ್ಘಾಟಿಸಿ ಮಾತನಾಡಿದರು.

ಯುವಜನತೆ ಹೆಚ್ಚುಹೆಚ್ಚು ಪುಸ್ತಕಗಳನ್ನು ಓದುವ ಮೂಲಕ ಅಧ್ಯಯನ ಶೀಲರಾಗಬೇಕು, ಹೊಸತನಕ್ಕೆ ಯುವಕರು ಒಗ್ಗಿಕೊಳ್ಳಬೇಕೆಂದರು. ಗ್ರಾಮೀಣ ಭಾಗದ ಯುವಜನತೆ ಸಾಹಿತ್ಯದ ಕುರಿತು ಆಸಕ್ತಿ ಬೆಳೆಸಿಕೊಳ್ಳಬೇಕು ಹಾಗೂ ದೂರದ ಕಾರ್ಕಳಕ್ಕೆ ಬರುವ ಸಮಸ್ಯೆ ತಪ್ಪಿಸುವ ನಿಟ್ಟಿನಲ್ಲಿ ಗ್ರಾಮೀಣ ಜನರಿಗೆ ಮೊಬೈಲ್ ಗ್ರಂಥಾಲಯ ಒದಗಿಸಲು ಚಿಂತನೆ ನಡೆಸಲಾಗಿದೆ, ರಾಜಾರಾಮ ಗ್ರಂಥಾಲಯ ಪ್ರತಿಷ್ಠಾನದ ವತಿಯಿಂದ ಕಾರ್ಕಳಕ್ಕೆ ಮೊಬೈಲ್ ಗ್ರಂಥಾಲಯ ತರುವ ಪ್ರಯತ್ನ ನಡೆಸಲಾಗುವುದು ಇದಕ್ಕಾಗಿ ತಗಲುವ 30 ಲಕ್ಷ ವೆಚ್ಚದಲ್ಲಿ 15 ಲಕ್ಷ ಪ್ರತಿಷ್ಠಾನ ನೀಡಿದರೆ ಉಳಿದ15 ಲಕ್ಷ ಅನುದಾನವನ್ನು ಸ್ಥಳೀಯ ಮಟ್ಟದಲ್ಲಿ ಹೊಂದಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಎಸ್ ವಿ ಟಿ ಪದವಿಪೂರ್ವ ಕಾಲೇಜು ನಿವೃತ್ತ ಪ್ರಾಂಶುಪಾಲರಾದ ಮಿತ್ರಪ್ರಭಾ ಹೆಗ್ಡೆ ಮಾತನಾಡಿ, ಪೋಷಕರು ತಮ್ಮ ಮಕ್ಕಳನ್ನು ಡ್ಯಾನ್ಸ್, ಸಂಗೀತ ,ಕರಾಟೆ ತರಗತಿಗಳಿಗೆ ಸೇರಿಸುತ್ತಾರೆ ಆದರೆ ಗ್ರಂಥಾಲಯಕ್ಕೆ ಕರೆದೊಯ್ಯುವ ಅಭ್ಯಾಸ ಬೆಳೆಸಿಕೊಂಡಿಲ್ಲ, ಇದರಿಂದ ಸಾಹಿತ್ಯ ಉಳಿಯುವುದಾದರು ಹೇಗೆ ಎಂದು ಪ್ರಶ್ನಿಸಿದರು. ಇಂದಿನ ಮಕ್ಕಳು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು, ಮಕ್ಕಳು ಓದಿನಿಂದ ವಿಮುಖರಾಗಲು ಟಿವಿ, ಮೊಬೈಲ್ ಗಳು ಕಾರಣವಾಗಿವೆ, ಇದರ ಪರಿಣಾಮವಾಗಿ ಯುವ ಜನಾಂಗ ಸಾಹಿತ್ಯ ಕ್ಷೇತ್ರದಿಂದ ದೂರ ಉಳಿದಿದೆ, ಸಾಹಿತ್ಯ ಎನ್ನುವುದು ಇಂದಿನ ಕಾಲಘಟ್ಟದಲ್ಲಿ ಹಿರಿಯ ನಾಗರಿಕರಿಗೆ ಎನ್ನುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದರು. 

ಈ ಸಂದರ್ಭದಲ್ಲಿ ಉದ್ಯಮಿ ಬೋಳ ದಾಮೋದರ ಕಾಮತ್ ಪುರಸಭಾಧ್ಯಕ್ಷೆ ಸುಮಾ ಕೇಶವ, ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್, ಗ್ರಂಥಾಲಯ ಪ್ರಾಧಿಕಾರದ ಸದಸ್ಯೆ ಮೀನಾಕ್ಷಿ ಗಂಗಾಧರ, ಮುಖ್ಯಾಧಿಕಾರಿ ರೂಪ ಶೆಟ್ಟಿ, ಗ್ರಂಥಪಾಲಕಿ ಜಯಶ್ರೀ, ಸಹಾಯಕಿ ವನಿತಾ, ಪುರಸಭಾ ಸದಸ್ಯ ಶುಭದ್ ರಾವ್ ಮುಂತಾದವರು ಉಪಸ್ಥಿತರಿದ್ದರು.

ರಾಜ್ಯ ಗ್ರಂಥಾಲಯ ಇಲಾಖೆ ನಿರ್ದೇಶಕ ಸತೀಶ್ ಕುಮಾರ್ ಹೊಸಮನಿ ಸ್ವಾಗತಿಸಿ, ಪ್ರಸ್ತಾವನೆಗೈದರು. ರಾಜೇಂದ್ರ ಭಟ್ ಕಾರ್ಯಕ್ರಮ ನಿರೂಪಿಸಿದರು,  ಜಯಶ್ರೀ ವಂದಿಸಿದರು.