ತುಳುನಾಡಿನ, ಕರ್ನಾಟಕದ ಶ್ರೇಷ್ಠ ಕವಿ ಮುನಿಸು ತರವೇ ಮತ್ತು ಸಂಜೆಯ ರಾಗಕೆ ಹಾಡಿನ ಖ್ಯಾತಿಯ ಸುಬ್ರಾಯ ಚೊಕ್ಕಾಡಿ ಅವರ ಚೊಚ್ಚಲ ತುಳು ಹಾಡೊಂದನ್ನು ಐಲೇಸಾ ಖ್ಯಾತ ಸಂಗೀತ ನಿರ್ದೇಶಕ ವಿ ಮನೋಹರ್ ನೇತೃತ್ವದಲ್ಲಿ ಸಂಯೋಜಿಸಿ ಜುಲೈ 26 ಶನಿವಾರ ಸಂಜೆ 7:30ಗೆ ಝೂಮ್ ಡಿಜಿಟಲ್ ವೇದಿಕೆಯಲ್ಲಿ ಬಿಡುಗಡೆ ಮಾಡುತ್ತಿದೆ.
ಹಲವಾರು ತುಳು- ಕನ್ನಡ ಹಾಡುಗಳನ್ನು ಬರೆದಿರುವ ಮತ್ತು ನಾಟಕಗಳನ್ನು ನಿರ್ದೇಶಿಸಿ ನಟಿಸಿರುವ ಸುಬ್ರಾಯ ಚೊಕ್ಕಾಡಿಯವರಿಗೆ ಅಭಿಮಾನದ ಕೊಡುಗೆಯಾಗಿ ಈ ಹಾಡನ್ನು ಐಲೇಸಾ ನಿರ್ಮಿಸಿದೆ . ಇದರಿಂದಾಗಿ ಸುಬ್ರಾಯ ಚೊಕ್ಕಾಡಿಯವರ ಹಾಡು ತುಳುವಿನಲ್ಲಿ ಇಲ್ಲ ಎನ್ನುವ ಬಹುಕಾಲದ ವಿಶೇಷ ಕೊರಗೊಂದು ನೀಗಲಿದೆ.
ಐಲೇಸಾ 2022 ರಲ್ಲಿ ಅವರ ವಯೋಸಮ್ಮಾನದ ಸಮಯದಲ್ಲಿ ಇಟ್ಟ ಬೇಡಿಕೆಯನ್ನು ಚೊಕ್ಕಾಡಿಯವರು ಈ ಹಾಡು ಬರೆದು ಕೊಡುವ ಮೂಲಕ ತುಳುವಿನ ಬಗ್ಗೆ ಅವರಿಗಿರುವ ಅಭಿಮಾನವನ್ನು ಪ್ರಕಟ ಪಡಿಸಿದ್ದಾರೆ . ಮನುಷ್ಯನ ಮೇಲಿಟ್ಟ ಪ್ರಕೃತಿಯ ಕರುಣೆಯನ್ನು ವಿವರಿಸುತ್ತಾ ಇಷ್ಟೆಲ್ಲಾ ಅದ್ಭುತಗಳನ್ನು ಕೊಟ್ಟ ಪ್ರಕೃತಿಯನ್ನು ದಿನಾ ಸ್ಮರಿಸುವುದು ನಮ್ಮ ದಿನಚರಿಯಾಗಬೇಕು ಎನ್ನುವ ಆಶಯದೊಂದಿಗೆ ಹಾಡು ಕೊನೆಗೊಳ್ಳುತ್ತದೆ .
ಹಾಡನ್ನು ವಿ. ಮನೋಹರ್ ಅದ್ಭುತವಾಗಿ ಸಂಯೋಜಿಸಿದ್ದು ವಿಶೇಷ ಕೋರಸ್ ಗಳಿಂದ ಹಾಡಿನ ಮೆರುಗನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಖ್ಯಾತ ಗಾಯಕ ರಾಜ್ಯ ಪ್ರಶಸ್ತಿ ವಿಜೇತ ಡಾ. ರಮೇಶ್ಚಂದ್ರ ಹಾಡನ್ನು ಹಾಡಿದ್ದು ಮೇಘಾಲಯ ಮೆಲೋಡಿಸ್ ಸಂಸ್ಥೆಯ ಸ್ಥಾಪಕ, ಸಂಗೀತ ಪ್ರೇಮಿ ಲತೇಶ್ ಪುತ್ರನ್ ಹಾಡನ್ನು ಐಲೇಸಾ ಕ್ಕೋಸ್ಕರ ನಿರ್ಮಿಸಿ ಕೊಟ್ಟಿದ್ದಾರೆ. ನೂತನ್ ಶ್ರೀಯಾನ್ ನೇತೃತ್ವದಲ್ಲಿ ಗೋಪಾಲ್ ಪಟ್ಟೆ ಚಿತ್ರೀಕರಿಸಿದ ಈ ಹಾಡಿನ ಚಿತ್ರೀಕರಣದಲ್ಲಿ ರಮೇಶ್ಚಂದ್ರ ಜೊತೆ ಪಟ್ಟೆಯ ಶ್ರೇಯ, ಶ್ರಾವ್ಯ, ಕಾವ್ಯ, ಅಪೂರ್ವ, ದೀಕ್ಷಾ ಅಭಿನಯಿಸಿದ್ದಾರೆ.
ಹಾಡನ್ನು ಜೂಲೈ ತಿಂಗಳ ಇಪ್ಪತ್ತಾರನೇ ತಾರೀಕು ಶನಿವಾರ ಸಂಜೆ ಏಳೂವರೆ ಗಂಟೆಗೆ ಜೂಮ್ ವೇದಿಕೆಯಲ್ಲಿ ಅಬುದಾಭಿಯ ಮಹಾ ಸಂಘಟಕ , ಐಲೇಸಾದ ಪೋಷಕರಾದಂತಹ ಸರ್ವೋತ್ತಮ ಶೆಟ್ಟಿ ಯವರು ಬಿಡುಗಡೆ ಮಾಡಲಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ನಿದೇಶಕ ಸಂತೋಷ್ ಮಾಡ, ವಿ ಮನೋಹರ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮವನ್ನು ಮುಂಬೈಯ ಸಾಹಿತಿ ಸವಿತಾ ಅರುಣ್ ಶೆಟ್ಟಿ ನಿರ್ವಹಿಸಲಿದ್ದಾರೆ.
ಸಂಗೀತ ಪ್ರೇಮಿಗಳು ಮತ್ತು ಐಲೇಸಾದ ಅಭಿಮಾನಿಗಳು ಝೂಮ್ ಗುರುತು ಸಂಖ್ಯೆ :5340283988 ಮತ್ತು ಪಾಸ್ ಕೋಡ್ 0324 ಬಳಸಿ ವೇದಿಕೆಯಲ್ಲಿ ಭಾಗವಹಿಸಬೇಕೆಂದು ಮಾಧ್ಯಮ ಸಂಚಾಲಕ ಸೂರಿ ಮಾರ್ನಾಡು ವಿನಂತಿಸಿದ್ದಾರೆ.