ಉಡುಪಿ: ಪಂಚ ಗ್ಯಾರಂಟಿ ಯೋಜನೆಯಿಂದ ಜನಸಾಮಾನ್ಯರ ಕಷ್ಟಕಾರ್ಪಣ್ಯಗಳನ್ನು ತಗ್ಗಿಸುವುದರೊಂದಿಗೆ ನೆಮ್ಮದಿಯ ಬದುಕಿಗೆ ಆಸರೆಯಾಗಿದೆ. ಸಮಾಜದಲ್ಲಿ ಈ ಯೋಜನೆಯ ಫಲಾನುಭವಿಯಾಗಲು ಅರ್ಹತೆ ಇದ್ದ ಪ್ರತಿಯೊಬ್ಬರಿಗೂ ಇವುಗಳನ್ನು ತಲುಪಿಸಿ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಶೋಕ್ ಕೊಡವೂರು ತಿಳಿಸಿದರು.
ಅವರು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್‍ನ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿಯ ಪ್ರಗತಿಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಪಂಚ ಗ್ಯಾರಂಟಿ ಯೋಜನೆಗಳನ್ನು ಸರಕಾರ ಕಳೆದ ಎರಡು ವರ್ಷಗಳ ಹಿಂದೆ ಜಾರಿಗೆ ತರುವುದರೊಂದಿಗೆ ನಿರಂತರವಾಗಿ ಯೋಜನೆಗಳನ್ನು ಜನಸಾಮಾನ್ಯರಿಗೆ ಎರಡು ವರ್ಷದಿಂದಲೂ ತಲುಪಿಸುತ್ತಿದೆ. ಈ ಬಾರಿಯ ಬಜೆಟ್‍ನಲ್ಲಿ 51,034 ಕೋಟಿ ರೂ. ಮೊತ್ತದ ಅನುದಾನವನ್ನು ಮೀಸಲಿಟ್ಟಿದೆ. ಈ ಯೋಜನೆಗಳು ಪ್ರತಿಯೊಬ್ಬರಿಗೂ ತಲುಪಿಸುವಂತೆ ಪ್ರತಿಯೊಂದು ಇಲಾಖೆಗಳು ಕಾರ್ಯನಿರ್ವಹಿಸಬೇಕು ಎಂದರು.
ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಿಗೆ ಯಾವುದೇ ರೀತಿಯ ಸಮಸ್ಯೆಗಳ ಕುರಿತು ದೂರುಗಳು ಬಂದಲ್ಲಿ ಕೂಡಲೇ ಅವುಗಳಿಗೆ ಸ್ಪಂದಿಸುವ ಕೆಲಸಗಳನ್ನು ಅಧಿಕಾರಿಗಳು ಆದ್ಯತೆಯ ಮೇಲೆ ಮಾಡಬೇಕು ಎಂದ ಅವರು, ಗೃಹಲಕ್ಷ್ಮೀ ಯೋಜನೆಯಡಿಯ ಕೆಲವು ಫಲಾನುಭವಿಗಳಿಗೆ ಪ್ರತೀ ತಿಂಗಳ 2000 ರೂ. ಹಣ ಬರುತ್ತಿದ್ದು, ಮಧ್ಯದಲ್ಲಿ ಒಂದೆರೆಡು ತಿಂಗಳ ಹಣ ಬಂದಿಲ್ಲ ಎಂಬ ದೂರುಗಳು ಕೇಳಿಬಂದಿವೆ. ಇವುಗಳಿಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸ್ಪಂದಿಸಬೇಕು ಎಂದರು.
ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗಲು ಈ ಹಿಂದೆ ಕೆ.ಎಸ್.ಆರ್.ಟಿ.ಸಿ ಬಸ್‍ಗಳನ್ನು ಗ್ರಾಮೀಣ ಪ್ರದೇಶಗಳಿಗೆ ಬಿಡಲಾಗಿತ್ತು. ಆದರೆ ಕೋವಿಡ್ ಸಂದರ್ಭದಲ್ಲಿ ಇವುಗಳ ಚಾಲನೆ ನಿಂತುಹೋಗಿದೆ. ಇದರಿಂದ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಹಾಗೂ ಜನರಿಗೆ ತೊಂದರೆ ಉಂಟಾಗಿದೆ. ಆದಷ್ಟು ಶೀಘ್ರದಲ್ಲಿಯೇ ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ಕೆ.ಎಸ್.ಆರ್.ಟಿ.ಸಿ ಸಂಸ್ಥೆಯ ಅಧಿಕಾರಿಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿ, ಮರು ಚಾಲನೆ ಮಾಡಿಕೊಡಬೇಕು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಜಿಲ್ಲೆಯು ಮಹಿಳಾ ಸಬಲೀಕರಣದಲ್ಲಿ ಮುಂಚೂಣಿಯಲ್ಲಿದೆ. ಪಂಚ ಗ್ಯಾರಂಟಿಯಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯು ಮಹಿಳೆಯರ ಸ್ವಾವಲಂಭಿ ಬದುಕಿಗೆ ದಾರಿಮಾಡಿಕೊಡುವ ಉದ್ದೇಶ ಹೊಂದಿದೆ. ಗ್ಯಾರಂಟಿ ಯೋಜನೆಯ ಫಲಾನುಭವಿಗಳು ಸೇರಿಕೊಂಡು ಸ್ವ-ಸಹಾಯ ಗುಂಪುಗಳನ್ನು ಮಾಡಿಕೊಳ್ಳುವುದರೊಂದಿಗೆ ಸರಕಾರದ ವಿವಿಧ ಯೋಜನೆಗಳ ಸಹಕಾರದೊಂದಿಗೆ ಹೈನುಗಾರಿಕೆ, ಕುಕ್ಕುಟೋದ್ಯಮ ಸೇರಿದಂತೆ ಮತ್ತಿತರ ಸ್ವ-ಉದ್ಯೋಗ ಹೊಂದಲು ಹಾಗೂ ಸಣ್ಣಪುಟ್ಟ ಸಿವಿಲ್ ವರ್ಕ್‍ಗಳನ್ನು ಸಹ ಮಾಡಲು ಮುಂದೆ ಬರಬೇಕು ಎಂದರು.
ಬ್ರಹ್ಮಾವರ ತಾಲೂಕು ಕೊಕ್ಕರ್ಣೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊರ್ಲಾಡಿ ಗ್ರಾಮವು ಗುಡ್ಡಗಾಡು ಪ್ರದೇಶದಿಂದ ಕೂಡಿದ್ದು, ಸುಮಾರು 250 ಕ್ಕೂ ಹೆಚ್ಚು ಮನೆಗಳಿದ್ದು, ನ್ಯಾಯಬೆಲೆ ಅಂಗಡಿಯಿಲ್ಲದೆ ಪಡಿತರ ಪಡೆಯಲು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಬ್ರಹ್ಮಾವರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರ ಸಭೆಯ ಗಮನಕ್ಕೆ ತಂದರು. ಇದಕ್ಕೆ ಉತ್ತರಿಸಿದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು, ಇಂತಹ ಪ್ರದೇಶ ವ್ಯಾಪ್ತಿಯಲ್ಲಿ ಪಡಿತರ ಸಂಖ್ಯೆಯನ್ನು ಆಧರಿಸಿ, ನಿಯಮಾನುಸಾರ ನ್ಯಾಯಬೆಲೆ ಅಂಗಡಿಗಳನ್ನು ತೆರೆಯಲು ಕ್ರಮವಹಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಯುವನಿಧಿ ಯೋಜನೆಯ ವಿಶೇಷ ನೋಂದಣಿ ಅಭಿಯಾನ ಕುರಿತ ಭಿತ್ತಿಪತ್ರವನ್ನು ಬಿಡುಗಡೆಗೊಳಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯರುಗಳಾದ ಗೀತಾ ವಾಗ್ಳೆ, ಸಂತೋಷ್ ಕುಲಾಲ್ ಹಾಗೂ ಸತೀಶ್, ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷರುಗಳಾದ ರಮೇಶ್ ಕಾಂಚನ್, ಡಾ.ಸುನೀತಾ ಶೆಟ್ಟಿ, ನವೀನ್ ಚಂದ್ರ ಅಡ್ಡ, ಹರಿಪ್ರಸಾದ್ ಶೆಟ್ಟಿ, ಅಜಿತ್ ಹೆಗ್ಡೆ, ಶಂಕರ್ ಶೇರಿಗಾರ್ ಹಾಗೂ ಮೋಹನ್ ಪೂಜಾರಿ ಉಪ್ಪುಂದ, ಜಿಲ್ಲಾ ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರುಗಳು, ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.