ಮಂಗಳೂರು:  ಶಕ್ತಿ ವಿದ್ಯಾಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ ದಿನಾಚರಣೆಯನ್ನು ವಿಜೃಂಬಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮದ ಪ್ರಾರಂಭದಲ್ಲಿ ನಾಡ ಗೀತೆಯೊಂದಿಗೆ ನಾಡ ಧ್ವಜವನ್ನು ಆರೋಹಣವನ್ನು ಶಕ್ತಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ  ಸಂಜಿತ್ ನಾೈಕ್‍ ರವರು ನೆರೆವೇರಿಸಿದರು. ನಂತರ ರೇಷ್ಮಾ ಸಭಾಭವನದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಂಗಭೂಮಿ ಹಾಗೂ ಚಲನಚಿತ್ರಕಲಾವಿದರಾದ  ಪ್ರಕಾಶ್‍ ತುಮಿನಾಡ್‍ ಅವರು ಆಗಮಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಸಂಸ್ಕಾರ ಮತ್ತು ಶಿಸ್ತನ್ನು ನಾನು ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ನೋಡಿ ತುಂಬ ಸಂತೋಷವಾಯಿತು. ಕನ್ನಡ ನಾಡು ನುಡಿಯ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯೆಂದು ಹೇಳಿದರು. ನಾವು ಅನೇಕ ಚಲನಚಿತ್ರದ ಮೂಲಕ ಕನ್ನಡ ನಾಡನ್ನು ಉಳಿಸುವ ನಿಟ್ಟಿನಲ್ಲಿ ಉತ್ತಮವಾಗಿರುವಂತಹ ಸಂದೇಶವನ್ನು ನೀಡಿರುತ್ತೇವೆ. ನೀವೆಲ್ಲರು ಇಂತಹ ಚಲನಚಿತ್ರಕ್ಕೆ ಪ್ರೋತ್ಸಾಹವನ್ನು ಮುಂದಿನ ದಿನಗಳಲ್ಲಿಯೂ ನೀಡಿ ಎಂದು ರಾಜ್ಯೋತ್ಸವದ ಶುಭಾಶಯವನ್ನು ಕೋರಿದರು. ಮಕ್ಕಳಿಗೋಸ್ಕರ ನಿರ್ಮಾಣಗೊಂಡಿರುವ ಲೈಟ್ ಹೌಸ್ ಚಲನಚಿತ್ರ ತಮ್ಮೆಲ್ಲರ ಸಹಕಾರ ಅತಿಅಗತ್ಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ಲೈಟ್ ಹೌಸ್‍ ಕನ್ನಡ ಚಲನಚಿತ್ರ ನಿರ್ದೇಶಕರಾದ  ಸಂದೀಪ್‍ ಕಾಮತ್‍ ಅಜೆಕಾರು ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ ನಾವು ಲೈಟ್ ಹೌಸ್‍ಎಂಬ ಕನ್ನಡ ಮಕ್ಕಳ ಚಲನಚಿತ್ರವನ್ನು ನಿರ್ಮಿಸಿದ್ದೇವೆ. ಇದರ ಉದ್ದೇಶ ಮಕ್ಕಳಲ್ಲಿ ಸಮಾಜಕ್ಕೆ ಉತ್ತಮವಾಗಿರುವಂತಹ ಸಂದೇಶವನ್ನು ಕೊಡುವುದಾಗಿದೆ. ನಾವು ಕಣ್ಣಿನ ದಾನದ ಬಗ್ಗೆ ಅರಿವನ್ನು ಮೂಡಿಸುವುದು ಈ ಚಲನಚಿತ್ರದ ಉದ್ದೇಶವಾಗಿದೆ. ಈ ಚಲನಚಿತ್ರದ ಮೂಲಕ ಮಣ್ಣಲ್ಲಿ ಮಣ್ಣಾಗುವ ಹಾಗೂ ಚಿತೆಯಲ್ಲಿ ಉರಿದು ಬೂದಿಯಾಗುವ ಕಣ್ಣನ್ನು ನಮ್ಮ ಸಾವಿನ ನಂತರದಾನ ಮಾಡುವ ಮೂಲಕ ಅಂದ ಮಕ್ಕಳನ್ನು ರಕ್ಷಣೆ ಮಾಡುವುದು ಇದರ ಉದ್ದೇಶವೆಂದು ತಿಳಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕರಾಗಿರುವ ಸಂಜಿತ್ ನಾೈಕ್‍ ರವರು ನಮ್ಮಕರ್ನಾಟಕದ ಕನ್ನಡ ಭಾಷೆಯ ಮಹತ್ವದ ಬಗ್ಗೆ ಹಾಗೂ ನಮ್ಮನ್ನಾಳಿದ ವಿಜಯನಗರ ಸಾಮ್ರಾಜ್ಯ, ಮೈಸೂರು ಸಂಸ್ಥಾನದ ಕುರಿತಂತೆ ಸವಿಸ್ತಾರವಾಗಿರುವಂತಹ ಮಾಹಿತಿಯನ್ನು ನೀಡಿದರು. ನಾವು ನಮ್ಮ ಭಾಷೆಯನ್ನು ಪ್ರೀತಿಸುವುದು ಹಾಗೂ ಗೌರವಿಸುವುದರೊಂದಿಗೆ ಭಾರತೀಯರಾಗಿ ಜೀವನವನ್ನು ನಡೆಸಬೇಕೆಂದು ಕರೆಯನ್ನು ನೀಡಿದರು. 

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ರಂಗ ಭೂಮಿಕಲಾವಿದರು ಲೈಟ್ ಹೌಸ್ ಚಲನಚಿತ್ರದ ಕಲಾವಿದರಾದ ನಮಿತ ಕಿರಣ್, ತಿಮ್ಮಪ್ಪಕುಲಾಲ್, ರೋಹನ್ ನಾಯಕ್, ಭುವನೇಶ್ ಪ್ರಭು, ಸಂಸ್ಥೆಯ ಸಂಸ್ಥಾಪಕರಾದ ಡಾ. ಕೆ.ಸಿ ನಾೈಕ್, ಪ್ರಧಾನ ಸಲಹೆಗಾರರಾದ ರಮೇಶ್, ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲರಾದ ಬಬಿತಾ ಸೂರಜ್‍ರವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಶಾಲಾ ಪ್ರಾರ್ಥನೆ ಹಾಗೂ ಕುವೆಂಪು ರಚನೆಯ ಹಾಡಿಗೆ ಶಾಲಾ ವಿದ್ಯಾರ್ಥಿನಿಯರು ಭರತನಾಟ್ಯದ ಮೂಲಕ ಸ್ವಾಗತಿಸಿದರು.  

ಉಪನ್ಯಾಸಕರಾದ ಸುನಿಲ್ ಕಾರ್ಯಕ್ರಮ ನಿರೂಪಿಸಿದರೆ, ಶಕ್ತಿ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲರಾದ ವೆಂಕಟೇಶ ಮೂರ್ತಿ ಹೆಚ್ ಸ್ವಾಗತಿಸಿದರು. ಸಭಾಕಾರ್ಯಕ್ರಮದ ನಂತರ ಲೈಟ್ ಹೌಸ್ ಮಕ್ಕಳ ಚಲನಚಿತ್ರದ ಪ್ರದರ್ಶನ ನಡೆಯಿತು.