ಕಾರ್ಕಳ: ಭಾರತೀಯ ಜನತಾ ಪಕ್ಷ ಬರೀ ಚುನಾವಣಾ ಯಂತ್ರವಲ್ಲ. ಕುಟುಂಬದ ರೀತಿಯಲ್ಲಿರುವ ರಾಜಕೀಯ ಪಕ್ಷ. ಭಾರತದ ರಾಜಕೀಯ ಇತಿಹಾಸದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ವ್ಯಕ್ತಿತ್ವ ಮತ್ತು ಅವರ ಆಡಳಿತ ವೈಖರಿ ಅಪ್ರತಿಮವಾದುದು. ಅವರ ದೂರದೃಷ್ಟಿಯ ಯೋಜನೆಗಳು ಇಂದು ದೇಶವನ್ನು ಅಭಿವೃದ್ಧಿಯತ್ತ ಮುನ್ನಡೆಸುತ್ತಿವೆ. ರಾಷ್ಟ್ರೀಯ ಸ್ವಯಂ ಸೇವಾ ಪಾಠ ಶಾಲೆಯಲ್ಲಿ ಬೆಳೆದು ಬಂದವರು ಹಲವು ವರ್ಷ ಸಕ್ರಿಯವಾಗಿ ರಾಜಕೀಯದಲ್ಲಿ ತೊಡಗಿ ತಂಗಾಳಿಯಾಗಿ ಹಾರಿಹೋದರು. ತನಗಾಗಿ ಎಂದೂ ಯೋಚನೆಗಳನ್ನು ಮಾಡದೇ ಈ ದೇಶ ಹಾಗೂ ಸಂಘಟನೆಗಾಗಿ ಸದಾ ಕಾಲ ಶ್ರಮಿಸಿದವರು ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಹೇಳಿದರು.

ಬಿಜೆಪಿ ಕಾರ್ಕಳದ ವತಿಯಿಂದ ಕಾರ್ಕಳ ಕುಕ್ಕುಂದೂರು ಮೈದಾನದಲ್ಲಿ ನಡೆದ ಭಾರತ ರತ್ನ ವಾಜಪೇಯಿ ಜನ್ಮ ಶತಾಬ್ದಿ ಅಟಲ್ ಸ್ಮರಣೆ ಕಾರ್ಯಕ್ರಮದಲ್ಲಿ ದಿಕ್ಸೂಚಿ ಮಾತುಗಳನ್ನಾಡಿದರು.
ಸಂಘಟನೆ ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯಲು ಅವರ ಕವಿ ಹೃದಯವೂ ಕಾರಣವಾಗಿದೆ. ದೇಶ ಮೊದಲು ಪಕ್ಷ ನಂತರ ಸ್ವಂತ ಬಳಿಕ ಎನ್ನುವ ಸಿದ್ದಾಂತದಲ್ಲಿ ಬದುಕಿದವರು. ಪ್ರತೀ ಪಕ್ಷದಲ್ಲಿ ಆಕಾಂಕ್ಷೆಗಳ ಮ್ಯಾನೇಜ್ ಮಾಡುವುದೇ ದೊಡ್ಡ ಕೆಲಸವಾಗಿದೆ. ಆದರೆ ಭಾರತೀಯ ಜನತಾ ಪಾರ್ಟಿಗೆ ಇದು ಯಾವುದೇ ದೊಡ್ಡ ಕೆಲಸವಲ್ಲ. ಬದ್ದತೆ ಇರುವಲ್ಲಿ ಯಶಸ್ಸು ಕಂಡಿತ ಸಿಗುತ್ತದೆ.ಕಮಲ ದೇಶದ ಉದ್ದಗಲಕ್ಕೂ ಎಲ್ಲೆಲ್ಲೂ ಅರಳಿದೆ. ಬಿಜೆಪಿ ಜನತಾ ಪಕ್ಷದ ವಿಚಾರ ಅರಳುತ್ತಿದೆ. ಅರಳಿಸುತ್ತಿದ್ದೇವೆ. ದೇಶದ ಉದ್ದಗಲಕ್ಕೂ ಅರಳುತ್ತದೆ ಎಂದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ವಿ.ಸುನಿಲ್ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಶೆಟ್ಟಿ ಕುತ್ಯಾರು, ಬಿಜೆಪಿ ಹಿರಿಯ ಮುಖಂಡ ಬೋಳ ಪ್ರಭಾಕರ್ ಕಾಮತ್, ಗೇರು ನಿಗಮದ ಮಾಜಿ ಅಧ್ಯಕ್ಷ ಮಣಿರಾಜ್ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಸ್ವಾಗತಿಸಿದರು, ಸತ್ಯಶಂಕರ್ ಶೆಟ್ಟಿ , ರವೀಂದ್ರ ಕುಕ್ಕುಂದೂರು ಕಾರ್ಯಕ್ರಮ ನೀರೂಪಿಸಿದರು.