ಕಾರ್ಕಳ: ಸಾಣೂರು ಗ್ರಾಮದ ರ ಪುಲ್ಕೇರಿ ಬೈಪಾಸ್ ನಿಂದ ಮುರತಂಗಡಿ ಸಾಣೂರು ಪದವಿ ಪೂರ್ವ ವಿದ್ಯಾಲಯದವರೆಗೆ, ಸಾಣೂರು ಸೇತುವೆ ಬಳಿ ಸುಮಾರು 500 ಮೀಟರ್ ಹೊರತುಪಡಿಸಿ, ರಾಷ್ಟ್ರೀಯ ಹೆದ್ದಾರಿ ಚತುಷ್ಪದ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿರುತ್ತದೆ.
ಹಳೆ ಬಸ್ಸು ಮತ್ತು ರಿಕ್ಷಾ ನಿಲ್ದಾಣಗಳನ್ನು ಕೆಡವಿ ರಸ್ತೆ ಅಗಲೀಕರಣ ಮಾಡಿರುವುದರಿಂದ, ಕಳೆದ ಎರಡು ವರ್ಷಗಳಿಂದ ಬಸ್ಸು ಪ್ರಯಾಣಿಕರು ಮತ್ತು ರಿಕ್ಷಾ ಚಾಲಕರು ಬಿಸಿಲು ಮಳೆಗೆ ಯಾವುದೇ ರಕ್ಷಣೆ ಇಲ್ಲದೆ ಬಸ್ಸಿಗಾಗಿ ನಡು ರಸ್ತೆಯಲ್ಲಿಯೇ ಕಾಯಬೇಕಾದ ಅನಿವಾರ್ಯತೆ.
ಬೆಳಿಗ್ಗೆ ಮತ್ತು ಸಂಜೆಯ ಹೊತ್ತು ಮುರತಂಗಡಿ ಮತ್ತು ಸಾಣೂರಿನಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು, ಸಿಬ್ಬಂದಿಗಳು ಬಸ್ಸಿಗಾಗಿ ನಡು ರಸ್ತೆಯಲ್ಲಿಯೇ ಗುಂಪುಗೂಡಿ ಕಾಯುತ್ತಿರುವುದು ಶೋಚನೀಯ.
ರಾಷ್ಟ್ರೀಯ ಹೆದ್ದಾರಿ ಇಲಾಖೆ ಜನರ ಮೂಲಭೂತ ಅವಶ್ಯಕತೆಯ ಬಗ್ಗೆ ಯಾವುದೇ ಕಾಳಜಿ ವಹಿಸದೆ ಇನ್ನೂ ಕೂಡ ಈಗಾಗಲೇ ತೆರವುಗೊಳಿಸಿರುವ ಬಸ್ಸು ಮತ್ತು ರಿಕ್ಷಾ ತಂಗುದಾಣಕ್ಕೆ ಯಾವುದೇ ಜಾಗ ನಿಗದಿಪಡಿಸದೆ ನಿರ್ಮಾಣ ಕಾರ್ಯವನ್ನು ಕೂಡ ಆರಂಭಿಸಿಲ್ಲ.
ಇನ್ನೇನು ಒಂದು ವಾರದೊಳಗೆ ಮುಂಗಾರು ಮಳೆ ಪ್ರಾರಂಭವಾಗಿ ಮುಂದಿನ ಎರಡು ಮೂರು ತಿಂಗಳು ಭಾರಿ ಮಳೆ_ಗಾಳಿಗೆ ಬಸ್ಸಿಗಾಗಿ ರಸ್ತೆ ಮಧ್ಯದಲ್ಲಿ ಕಾಯ ಬೇಕಾಗಿರುವ ಪ್ರಯಾಣಿಕರು ವಿದ್ಯಾರ್ಥಿಗಳ ಪರಿಸ್ಥಿತಿ ಚಿಂತಾ ಜನಕವಾಗಲಿದೆ ಎಂದು ಸಾಣೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸಾಣೂರು ನರಸಿಂಹ ಕಾಮತ್ ರವರು ಹೆದ್ದಾರಿ ಇಲಾಖೆಯ ಯೋಜನಾಧಿಕಾರಿ ಜಾವೇದ್ ಅಜ್ಮಿ ಮತ್ತು ದಿಲೀಪ್ ಬಿಲ್ಡ್ ಕಾನ್ ಕಂಪನಿಯ ಕನ್ಸ್ಟ್ರಕ್ಷನ್ ಮ್ಯಾನೇಜರ್ ಬಾಲಾಜಿಯವರ ಗಮನಕ್ಕೆ ತಂದಿರುತ್ತಾರೆ.
ರಾಷ್ಟ್ರೀಯ ಹೆದ್ದಾರಿ ಇಲಾಖೆ ಕೂಡಲೇ ಎಚ್ಚೆತ್ತು ಶೀಘ್ರದಲ್ಲಿ ಹೊಸ ಬಸ್ಸು ಮತ್ತು ರಿಕ್ಷಾ ತಂಗುದಾಣಗಳನ್ನು ನಿರ್ಮಾಣ ಮಾಡಿ ಜನರ ತುರ್ತು ಅವಶ್ಯಕತೆಗೆ ಸ್ಪಂದಿಸಬೇಕೆಂದು ಸಾಣೂರಿನ ಜನತೆ ಹಕ್ಕೊತ್ತಾಯ ಮಾಡುತ್ತಿದ್ದಾರೆ.
ಸಾಣೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಯುವರಾಜ್ ಜೈನ್ ರವರ ನೇತೃತ್ವದಲ್ಲಿ ಸಾಣೂರು ಗ್ರಾಮ ಪಂಚಾಯಿತಿ ನಿಯೋಗ ಇತ್ತೀಚೆಗೆ ಶಾಸಕರನ್ನು ಭೇಟಿಯಾಗಿ ಸಾಣೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಆಗುತ್ತಿರುವ ತೊಂದರೆಯ ಬಗ್ಗೆ ಶಾಸಕರ ಗಮನವನ್ನು ಸೆಳೆದು ಹೆದ್ದಾರಿ ಇಲಾಖೆಯ ಮೂಲಕ ಜನರ ಮೂಲ ಸೌಕರ್ಯಗಳನ್ನು ಸರಿಪಡಿಸುವಂತೆ ಒತ್ತಾಯಿಸಿರುತ್ತಾರೆ.