ಕಾರ್ಕಳ: ಪತ್ರಿಕೆ ಓದುವುದರಿಂದ ವಿವಿಧ ದೃಷ್ಟಿಕೋಗಳನ್ನು ಅರಿತುಕೊಳ್ಳಲು ಸಾಧ್ಯವಿದೆ. ಪ್ರತಿದಿನ ಒಂದೇ ಪತ್ರಿಕೆಗೆ ಸೀಮಿತವಾಗದೇ, ಐದಕ್ಕಿಂತ ಹೆಚ್ಚು ಭಿನ್ನ ಪ್ರಕಾರದ ಪತ್ರಿಕೆಗಳನ್ನು ಓದುವ ಅಗತ್ಯವಿದೆ. ಸ್ಥಳೀಯ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸುದ್ದಿಗಳ ಆಳವಾದ ಅಧ್ಯಯನ, ಹಾಗೂ ಕ್ರೀಡೆ, ರಾಜಕೀಯ, ವಿಜ್ಞಾನ, ತಂತ್ರಜ್ಞಾನ, ಕಲೆ-ಸಾಹಿತ್ಯ, ಪರಿಸರ ಹಾಗೂ ಆರ್ಥಿಕ ವಿಭಾಗಗಳ ವರದಿಗಳನ್ನು ವಿಶ್ಲೇಷಿಸುವ ಅಭ್ಯಾಸ ವಿದ್ಯಾರ್ಥಿಗಳಲ್ಲಿ ಬೆಳೆಬೇಕು ಎಂದು ಉಡುಪಿ ಟಿ.ಎಂ.ಎ. ಪೈ ಮಹಾವಿದ್ಯಾಲಯದ ಸಮನ್ವಯಾಧಿಕಾರಿ ಡಾ. ಮಹಾಬಲೇಶ್ವರ ರಾವ್ ಹೇಳಿದರು.
ಅವರು ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಕ್ರಿಯೇಟಿವ್ ಪದವಿ ಪೂರ್ವ ಕಾಲೇಜು, ಬಿದರ ಸಹಯೋಗದಲ್ಲಿ ಕಾಲೇಜಿನ ಸಪ್ತಸ್ವರ ವೇದಿಕೆಯಲ್ಲಿ ನಡೆದ ಪತ್ರಿಕಾ ದಿನಾಚರಣೆ - 2025 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
"ಭಾವೋದ್ವೇಗಾತ್ಮಕ ಅಥವಾ ಸೆನ್ಸೇಷನಲ್ ಸುದ್ದಿಗಳಿಗೆ ಕಡಿಮೆ ಪ್ರಾಮುಖ್ಯತೆ ನೀಡಬೇಕು. ಮೌಲ್ಯಾಧಾರಿತ, ವಿಶ್ಲೇಷಣಾತ್ಮಕ ಹಾಗೂ ನೈಜ ಮಾಹಿತಿಗೆ ಹೆಚ್ಚು ಒತ್ತು ನೀಡುವುದು ಬುದ್ಧಿವಿಕಾಸಕ್ಕೆ ಅಗತ್ಯ,"ಎಂದು ಹೇಳಿದರು.
ಕ್ರಿಯೇಟಿವ್ ಕಾಲೇಜಿನ ಸಂಸ್ಥಾಪಕ ಅಶ್ವಥ್ ಎಸ್.ಎಲ್. ಮಾಧ್ಯಮದ ನೈತಿಕ ಬದ್ಧತೆಯ ಕುರಿತು ಮಾತನಾಡಿ, "ಮಾಧ್ಯಮಗಳು ನೈತಿಕತೆ ಮತ್ತು ಸಾಮಾಜಿಕ ಬದ್ಧತೆ ಹೊಂದಿದಾಗ ಮಾತ್ರ ನ್ಯಾಯ, ಸತ್ಯ ಮತ್ತು ಸಮಾನತೆಯ ಪ್ರಬಲ ಸಾಧನಗಳಾಗಿ ಪರಿಣಮಿಸಬಹುದು. ಮಾಧ್ಯಮಗಳು ಲೋಕಜಾಗೃತಿಗೆ ಶಕ್ತಿಯಾಗಬೇಕು; ವೆಬ್ ಮಾಧ್ಯಮಗಳು ಜಾಗೃತಿ ಮೂಡಿಸಬೇಕು ಹೊರತು ಭಯ ಹುಟ್ಟಿಸುವ ಕಾರ್ಯ ಮಾಡಬಾರದು," ಎಂದರು.
ಕಾರ್ಕಳ ಗ್ರಾಮಾಂತರ ಠಾಣೆಯ ಠಾಣಾಧಿಕಾರಿ ಪ್ರಸನ್ನ ಎಂ.ಎಸ್. ಮಾತನಾಡಿ, "ಪತ್ರಿಕೆ ಓದುವುದರಿಂದ ಕನ್ನಡ ಭಾಷೆಯ ಬಳಕೆ ಹಾಗೂ ಬರವಣಿಗೆಯು ಉತ್ತಮಗೊಳ್ಳುತ್ತದೆ. ಸಾಮಾಜಿಕ ಮಾಧ್ಯಮದಲ್ಲಿ ಬರುವ ಜಾಹಿರಾತುಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನಂಬಿಕೆ ಇಡುವ ಹಿನ್ನೆಲೆಯಲ್ಲಿ ಅಪರಾಧಗಳು ಹೆಚ್ಚುತ್ತಿವೆ. ವಿದ್ಯಾರ್ಥಿಗಳ ಬದುಕು ರೂಪಿಸುವಲ್ಲಿ ಪತ್ರಿಕೆಗೆ ಮಹತ್ವದ ಪಾತ್ರವಿದೆ," ಹೇಳಿದರು.
ಕಾರ್ಕಳ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮೊಹಮ್ಮದ್ ಷರೀಫ್ ಪತ್ರಿಕೆಗಳು ನಾಡು, ನುಡಿ ಮತ್ತು ಸಂಸ್ಕೃತಿಯನ್ನು ಕಟ್ಟುವ ಕೆಲಸ ಮಾಡುತ್ತಿವೆ ಎಂದರು.
ಈ ಸಂದರ್ಭದಲ್ಲಿ ಪತ್ರಿಕಾ ವಿತರಕ ಸದಾನಂದ ಪಾಟ್ಕರ್ ತೆಳ್ಳಾರು ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಹರೀಶ್ ಆಚಾರ್ಯ, ಕೋಶಾಧಿಕಾರಿ ಕೆ.ಎಂ. ಖಲೀಲ್, ಜಿಲ್ಲಾ ಪ್ರತಿನಿಧಿ ಉದಯ್ ಕುಮಾರ್ ಮುಂಡ್ಕೂರು, ಉಡುಪಿ ಜಿಲ್ಲಾ ಪತ್ರಕರ್ತರ ಸಂಘದ ಉಮೇಶ್ ಮಾರ್ಪಳ್ಳಿ ಉಪಸ್ಥಿತರಿದ್ದರು.
ಹಿರಿಯ ಪತ್ರಕರ್ತ ವಾಸುದೇವ ಭಟ್ ಸ್ವಾಗತಿಸಿದರು. ಉಪನ್ಯಾಸಕಿ ಪ್ರಿಯಾಂಕ ಕಾರ್ಯಕ್ರಮ ನಿರೂಪಿಸಿದರು ಹಾಗೂ ಅವಿನ್ ಶೆಟ್ಟಿ ಧನ್ಯವಾದ ನೀಡಿದರು.