ಕಾರ್ಕಳ: ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕಾರ್ಕಳ ಇವರ ಆಶ್ರಯದಲ್ಲಿ ಕ್ರೈಸ್ಟ್ ಕಿಂಗ್  ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ತಾಲೂಕು ಮಟ್ಟದ ವಿಜ್ಞಾನ ಮಾದರಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. 

ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಸಿ.ಎ ಕಮಾಲಾಕ್ಷ ಕಾಮತ್ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು “ವಿದ್ಯಾರ್ಥಿಗಳು ಆತ್ಮ ವಿಶ್ವಾಸದೊಂದಿಗೆ ಮಾನವೀಯತೆ, ಸಾತ್ವಿಕತೆ ಹಾಗೂ ಸಕಾರಾತ್ಮಕ ಚಿಂತನೆಗಳನ್ನು ತಮ್ಮಲ್ಲಿ ಬೆಳೆಸಿಕೊಂಡಾಗ ಅವರ ಭವಿಷ್ಯ ಉಜ್ವಲವಾಗಲು ಸಾಧ್ಯ” ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಕಾರ್ಕಳ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿರುವ ಗಿರಿಜಮ್ಮ ರವರು ಮಾತನಾಡಿ “ಪ್ರತಿಯೊಂದು ವಿದ್ಯಾರ್ಥಿಯಲ್ಲಿಯೂ ಪ್ರತಿಭೆ ಇರುತ್ತದೆ. ಆ ಪ್ರತಿಭೆಯನ್ನು ವಿದ್ಯಾರ್ಥಿಯು ತನ್ನಲ್ಲಿ ಅಳವಡಿಸಿಕೊಂಡಾಗ ಆತ ಬದುಕಿನಲ್ಲಿ ಎತ್ತರಕ್ಕೇರಲು ಸಾಧ್ಯ” ಎಂದು ಹೇಳಿದರು. 

ಕಾರ್ಯಕ್ರಮದ ಇನ್ನೊರ್ವ ಅತಿಥಿಯಾಗಿದ್ದ ಕ್ಷೇತ್ರ ಸಮನ್ವಯಾಧಿಕಾರಿಯಾಗಿರುವ ಇಂದಿರಾ ರವರು ಮಾತನಾಡಿ “ವಿಜ್ಞಾನದ ಮೂಲಕ ಮಾನವೀಯ ಮೌಲ್ಯಗಳನ್ನು ವಿದ್ಯಾರ್ಥಿಗಳು ತಮ್ಮಲ್ಲಿ ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು”. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ರೈಸ್ಟ್ ಕಿಂಗ್ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿಯಾದ ಜೋಸ್ನ ಸ್ನೇಹಲತಾರವರು ಮಾತನಾಡಿ “ಪ್ರತಿಯೊಂದು ಮಗುವಿನಲ್ಲಿಯೂ ವೈಜ್ಞಾನಿಕ ಆಲೋಚನೆಗಳು ಇರುತ್ತವೆ ಅದನ್ನು ಆ ಮಗು ತನ್ನಲ್ಲಿ ಅಳವಡಿಸಿಕೊಂಡಾಗ ಮಾತ್ರ ಆ ಮಗು ವಿಜ್ಞಾನ ಕ್ಷೇತ್ರದಲ್ಲಿ ಮುಂದುವರಿಯಲು ಸಾಧ್ಯ” ಎಂದು ಹೇಳಿದರು. ಕ್ಷೇತ್ರ ಸಂಪನ್ಮೂಲ ಅಧಿಕಾರಿಯಾಗಿರುವ ಸಂತೋಷ್ ಶೆಟ್ಟಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಪದವಿ ಪೂರ್ವ ವಿಭಾಗದ ಪ್ರಾಂಶುಪಾಲರಾದ ಲಕ್ಷ್ಮೀನಾರಾಯಣ ಕಾಮತ್, ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯರಾದ ರುಡಾಲ್ಫ್ ಕಿಶೋರ್ ಲೋಬೋ, ಸಂಸ್ಥೆಯ ಆಪ್ತ ಸಮಾಲೋಚಕಿಯಾಗಿರುವ ಸಿಸ್ಟರ್ ಡಾ. ಶಾಲೆಟ್ ಸಿಕ್ವೇರಾ ಹಾಗೂ ಆಡಳಿತಾಧಿಕಾರಿ ಕಿರಣ್ ಕ್ರಾಸ್ತರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರೌಢಶಾಲಾ ಶಿಕ್ಷಕಿಯಾದ ಅಶ್ವಿನಿ ಪೈ ಸ್ವಾಗತಿಸಿ, ರೇಖಾ ಸಂತೋಷ್‍ರವರು ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.