ಕುಕ್ಕುಂದೂರು ಗ್ರಾಮದ ಶಿಕ್ಷಣ ಕ್ಷೇತ್ರಕ್ಕೆ ನಾಲ್ಕು ದಶಕಗಳ ಹಿಂದೆ ಕ್ರಾಂತಿಕಾರಕ ಬದಲಾವಣೆ ತಂದ ಕೆ.ಎಂ.ಇ.ಎಸ್ ಶಿಕ್ಷಣ ಸಂಸ್ಥೆಗಳು ಈಗ ತಮ್ಮ 42ನೇ ವಾರ್ಷಿಕೋತ್ಸವದ ಸಡಗರಕ್ಕೆ ಸಜ್ಜಾಗಿವೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಆಂಗ್ಲ ಮಾಧ್ಯಮ ಶಿಕ್ಷಣದಿಂದ ವಂಚಿತರಾಗಬಾರದು ಮತ್ತು ಉದ್ಯೋಗಾವಕಾಶಗಳಲ್ಲಿ ಸಮಾನ ಅವಕಾಶ ಸಿಗಬೇಕು ಎಂಬ ಧ್ಯೇಯದಿಂದ ಆರಂಭವಾದ ಈ ಸಂಸ್ಥೆ, ಹಿರಿಯರಾದ ಹಾಜಿ ಪಿ.ಎಂ. ಖಾನ್, ಕೆ.ಎಸ್ ನಜೀರ್ ಅಹಮದ್ ಮತ್ತು ಹಾಜಿ ಎ.ಎಸ್ ರಶೀದ್ ಹೈದರ್ ಈ ತ್ರಿಮೂರ್ತಿಗಳ ಕನಸುಗಳ ಫಲವಾಗಿದೆ. ಹಿರಿಯರಾದ ಕೆ.ಎಸ್ ಮೊಹಮ್ಮದ್ ಮಸೂದ್ ಅವರ ನಿರಂತರ ಮಾರ್ಗದರ್ಶನ ಹಾಗೂ ಕೆ.ಎಸ್ ನಿಸಾರ್ ಅಹಮದ್ ಅವರ ನಿಸ್ವಾರ್ಥ ಸೇವೆಯಿಂದ ಸಂಸ್ಥೆ ಇಂದು ದೊಡ್ಡ ಆಲದ ಮರದಂತೆ ವಿಸ್ತರಿಸಿದೆ.

ಬದಲಾದ ಶೈಕ್ಷಣಿಕ ಅಗತ್ಯಗಳನ್ನು ಗಮನದಲ್ಲಿಟ್ಟು ಸಂಸ್ಥೆಯ ಅಧ್ಯಕ್ಷರಾದ ಕೆ.ಎಸ್ ಇಮ್ಮಿಯಾಜ್ ಅಹಮದ್ ಅವರು ಕೈಗೊಂಡ ಪರಿವರ್ತನಾ ದೃಷ್ಟಿಕೋನದಿಂದ ಸಂಸ್ಥೆ ಹೊಸ ಚೈತನ್ಯವನ್ನು ಪಡೆದಿದ್ದು, ಆಧುನಿಕ ಅವಶ್ಯಕತೆಗಳಿಗೆ ತಕ್ಕ ಶಿಕ್ಷಣ ಸೌಲಭ್ಯಗಳನ್ನು ಒದಗಿಸಲು ಮುಂದಾಗಿದೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಲಾಯಿತು.
ವಾರ್ಷಿಕೋತ್ಸವದ ಅಂಗವಾಗಿ 6 ಡಿಸೆಂಬರ್ 2025ರಂದು ಬ್ಯಾನರ್ ರಿಲೀಸಿಂಗ್ ಕಾರ್ಯಕ್ರಮ ಹಾಗೂ 10 ಡಿಸೆಂಬರ್ 2025 ರಂದು ವಿಜ್ಞಾನ ಮಾದರಿಗಳ ಅನ್ವೇಷಣಾ ಪ್ರದರ್ಶನ ಮತ್ತು ವ್ಯಾಪಾರ ಉತ್ಸವಗಳನ್ನು ಹಮ್ಮಿಕೊಳ್ಳಲಾಗಿದೆ.
ಮುಖ್ಯ ಸಮಾರಂಭವಾದ ಕೆ.ಎಂ.ಇ.ಎಸ್ ಪರ್ವ 13 ಡಿಸೆಂಬರ್ 2025 ಶನಿವಾರ ಮಧ್ಯಾಹ್ನ 3.30ಕ್ಕೆ ಜರುಗಲಿದೆ. ಈ ಕಾರ್ಯಕ್ರಮಕ್ಕೆ ಕೆ.ಎಸ್ ಮೊಹಮ್ಮದ್ ಮಸೂದ್ ಅವರು ಅಧ್ಯಕ್ಷತೆ ವಹಿಸಲಿದ್ದು, ಕಾರ್ಕಳ ತಾಲೂಕು ತಹಶೀಲ್ದಾರ್ ಪ್ರದೀಪ್ ಆರ್, ಅಜೆಕಾರು ಪದ್ಮ ಗೋಪಾಲ ಎಜುಕೇಷನ್ ಟ್ರಸ್ಟ್ ಜ್ಞಾನಸುಧಾ ವಿದ್ಯಾಸಂಸ್ಥೆಯ PRO ಜ್ಯೋತಿ ಪದ್ಮನಾಭ ಭಂಡಿ, ಶಿರ್ಡಿ ಸಾಯಿ ಶಿಕ್ಷಣ ಸಂಸ್ಥೆ ಕಾರ್ಕಳದ CEO ಆಶಿಷ್ ಶೆಟ್ಟಿ, ಮತ್ತು ಸರ್ಕಾರಿ ಆಯುರ್ವೇದ ಆಸ್ಪತ್ರೆ ಕುಶಾಲನಗರದ ಶಸ್ತ್ರಚಿಕಿತ್ಸಾ ಸಲಹೆಗಾರ್ತಿ ಡಾ. ಅಷಿತಾ ಕೃಷ್ಣ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಇದೆ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಕೆ.ಎಸ್ ಇಮ್ಮಿಯಾಜ್ ಅಹಮದ್, ಕಾರ್ಯಕಾರಿ ಸಮಿತಿಯ ಸದಸ್ಯ ಮೊಹಮ್ಮದ್ ನವಾಲ್ ಉಪಸ್ಥಿತರಿರಲಿದ್ದಾರೆ. 42 ವರ್ಷಗಳ ಸಾರ್ಥಕ ಸೇವೆಯನ್ನು ಆಚರಿಸುವ ಈ ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಕಾರ್ಯಕ್ರಮದ ಯಶಸ್ಸಿಗೆ ಮಾಧ್ಯಮ ಹಾಗೂ ಸಾರ್ವಜನಿಕರ ಸಂಪೂರ್ಣ ಸಹಕಾರವನ್ನು ಕೋರಿ ಕಾಲೇಜಿನ ಅಧ್ಯಕ್ಷರಾದ ಕೆ.ಎಸ್ ಇಮ್ಮಿಯಾಜ್ ಅಹಮದ್, ಪ್ರಾಂಶುಪಾಲರಾದ ಕೆ. ಬಾಲಕೃಷ್ಣ ರಾವ್, ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಪಾಟ್ಕರ್ ಹಾಗೂ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಲೊಲಿಟಾ ಝೀನಾ ಡಿಸಿಲ್ವಾ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.