ಮಂಗಳೂರು: ನಗರದ ರಥಬೀದಿಯ ಡಾ. ಪಿ. ದಯಾನಂದ ಪೈ - ಪಿ. ಸತೀಶ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಮತ್ತು ವಿಶ್ವವಿದ್ಯಾನಿಲಯ ಕಾಲೇಜಿನ ಅನ್ವೇಷಣಾ ಸಂಘಗಳ ಜಂಟಿ ಆಶ್ರಯದಲ್ಲಿ ಮಂಗಳವಾರ ಕುವೆಂಪುರವರ 112ನೇ ಜನ್ಮದಿನೋತ್ಸವ ಆಚರಿಸಲಾಯಿತು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಅನ್ವೇಷಣಾ ಸಂಘದ ಸಹನಿರ್ದೆಶಕ ಡಾ. ಸಿದ್ದರಾಜು, ಕುವೆಂಪುರವರ ಪಂಚಮಂತ್ರಗಳಾದ ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ ಮತ್ತು ಪೂರ್ಣದೃಷ್ಟಿಯ ಬಗ್ಗೆ ತಿಳಿಸಿದರು. ಕುವೆಂಪುರವರ ಕೃತಿಗಳ ಪರಿಚಯ, ಕವನ ವಾಚನ, ನುಡಿ ನಮನ ಹಾಗು ಕಾವ್ಯ ವಿಮರ್ಶೆ ಹಮ್ಮಿಕೊಳ್ಳಲಾಗಿತ್ತು.ವಿದ್ಯಾರ್ಥಿಗಳು ಸ್ವರಚಿತ ಹಾಗು ಕುವೆಂಪುರವರ ಕವನ ವಾಚನ ಮಾಡಿ ಕಾರ್ಯಕ್ರಮದ ಅಂದ ಹೆಚ್ಚಿಸಿದರು.
ವೃಂದಾ ಕುವೆಂಪುರವರ ಜೀವನ ಚರಿತ್ರೆಯ ಸಚಿತ್ರ ಪರಿಚಯ ನೀಡಿದರು. ಗೌತಮಿ, ಚೇತನ್, ಮೇಲರಿನ್, ಸ್ಪೂರ್ತಿ, ಅನುಷಾ. ಆರ್., ಮಧುರಾ, ಅನುಷಾ ಕೆ ಡಿ, ವಿಜಯಲಕ್ಷ್ಮಿ, ಶರಣ್ ಕುಮಾರ್, ಅನುಪ್ರಿಯಾ ಮತ್ತಿತರರು ಕವಿಗೋಷ್ಠಿಯಲ್ಲಿ ಪಾಲ್ಗೊಂಡರು. ಕಾಲೇಜಿನ ಪ್ರಾಂಶುಪಾಲ ಪ್ರೊ. ರಾಜಶೇಖರ ಹೆಬ್ಬಾರ್ ಅಧ್ಯಕ್ಷೀಯ ನುಡಿಗಳನ್ನಾಡುತ್ತಾ, ದಾರ್ಶನಿಕ ಕವಿ ಕುವೆಂಪು ಎಲ್ಲಾ ಕಾಲದಲ್ಲೂ, ಎಲ್ಲರಿಗೂ ಪ್ರಸ್ತುತರಾಗಿದ್ದಾರೆಂದರು.
ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ರವಿಕುಮಾರ. ಎಂ.ಪಿ, ಸ್ವಾಗತದೊಂದಿಗೆ “ಓ ನನ್ನ ಚೇತನಾ” ಹಾಡಿನ ಮೂಲಕ ಗಮನ ಸೆಳೆದರು. ಶಾಂತಮೂರ್ತಿ ಹಿರೇಮಠ ಅವರ ಉಸ್ತುವಾರಿಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಅನುಷಾರವರ ಪ್ರಾರ್ಥನೆ, ವೃಂದಾರವರ ನಿರೂಪಣೆಯಿತ್ತು. ವಿಜೀತ್.ಜೆ. ಧನ್ಯವಾದ ಸಮರ್ಪಿಸಿದರು.