ಸಾಗುತ್ತಲೇ ಇರುತ್ತದೆ ಬದುಕು, ಯಾರಿದ್ದರೂ ಇರದಿದ್ದರೂ ಸಣ್ಣ ಸಣ್ಣ ಬದಲಾವಣೆಗಳೊಂದಿಗೆ !!

ಹೌದು...ಬದುಕು ದೇಹದೊಳಗೆ ಉಸಿರಿರುವವರೆಗೂ ನಿಲ್ಲದ ಯಾತ್ರೆ. ಈ ಯಾತ್ರೆ ಜಗದ ಪ್ರತಿ ಜೀವಿಯ ಪಾಲಿಗು ವಿಭಿನ್ನ ಜಾತ್ರೆ !! ಸಮಯ ಓಡುತ್ತಲೇ ಇರುತ್ತದೆ ಯಾರ ಹಾಜರಿಗು ಕಾಯದೆ. ಅಂತೆಯೇ ಬದುಕು !.

ಜೊತೆಗೆ ಹೆಜ್ಜೆ ಹಾಕುತ್ತಿದ್ದ ಯಾರೊ ಒಬ್ಬರು ಸರಿದುಹೋದರು ಎಂದ ಮಾತ್ರಕ್ಕೆ ಬದುಕು ನಿಲ್ಲುವುದಿಲ್ಲ. ನಿಲ್ಲಲೂಬಾರದು. ನಿಂತಂತಾಗುವುದು ಕೇವಲ ಮನಸ್ಸು. ಬದುಕಲ್ಲ ! ಯಾರನ್ನೋ ನಂಬಿ ನಾವು ಈ ಪ್ರಪಂಚಕ್ಕೆ ಬಂದಿಲ್ಲ ಎಂದಮೇಲೆ, ಯಾರೋ ತೊರೆದಕೂಡಲೆ ಅಥವಾ ನಂಬಿದ ಕೆಲಸ, ವ್ಯಕ್ತಿ, ಸ್ಥಳ, ಪ್ರೇಮ, ಮಣ್ಣು- ಮಸಿ ಇದ್ಯಾವುದೋ ನಮ್ಮ ಕೈತಪ್ಪಿತೆಂದು ಆಗಸವೇ ತಲೆಮೇಲೆ ಬಿದ್ದಂತೆ, ಅಥವಾ ನಿಂತ ಭೂಮಿಯೇ ಕುಸಿದಂತೆ ಜೀವನೋತ್ಸಾಹ ಕಳೆದುಕೊಂಡು ಮೂಲೆಹಿಡಿದುಬಿಡುವಂತಹ ದುರ್ಬಲ generationನ ಹಂತಕ್ಕೆ ತಲುಪಿದೆವಾ ಅನ್ನಿಸಿಬಿಡುತ್ತದೆ.

ಹಿಂದೆಲ್ಲ ಎಷ್ಟೋ ಕಷ್ಟಗಳ ನಡುವೆಯೂ, ಹೇಳಿಕೊಳ್ಳುವಂತಹ ಯಾವುದೇ ಸೌಲಭ್ಯಗಳು ಇಲ್ಲದೆಯೇ ನಮ್ಮ ಪೂರ್ವಜರು ಎಲ್ಲವನ್ನೂ ಎದುರಿಸಿ ಬದುಕಿನ ಸಾರ್ಥಕ್ಯ ಕಂಡುಕೊಂಡರು. ಆದರೆ ಇಂದು ನಾವು ಮಾತ್ರ ಯಾವುದೋ ಒಂದು ಸಣ್ಣ ರೋಗಕ್ಕೂ ಹೆದರಿ ಖಿನ್ನತೆಗೆ ಒಳಗಾಗಿ, ಆತ್ಮಹತ್ಯೆಯ ಯತ್ನ ಅಥವಾ ಮತ್ತೇನೊ  ಮಾಡಿಕೊಂಡು ಮೊಂಡಾಟದಿಂದ ಆಸ್ಪತ್ರೆ ಸೇರಿ ಅಲ್ಲೇ ಕೊನೆಯುಸಿರೆಳೆದು, ಶವಸಂಸ್ಕಾರಕ್ಕೆ ಕನಿಷ್ಠ ಬೂದಿಯು ಸಿಗದಂತೆ ನರಳುವ ಹಂತಕ್ಕೆ ತಲುಪಿದ್ದೇವೆ. ಈಗಿನ generation ಏಕೆ ಇಷ್ಟು week minded ಆಯ್ತು..! ಸಿದ್ಧ ಉತ್ತರ ವ್ಯವಸ್ಥೆ ಹಾಗಿದೆ ಸ್ವಾಮಿ..! ಅಂತಾರೆ.

ಆದರೆ ನಿಜಕ್ಕೂ ಹದಗೆಟ್ಟಿರೋದು ವ್ಯವಸ್ಥೆಯ ಅಥವಾ ಈಗಿನ ದುರ್ಬಲ ಮನಃಸ್ಥಿತಿಗಳ ?! ವ್ಯವಸ್ಥೆಯನ್ನು ರೂಪಿಸುವವರಾರು ? ರೂಪಿಸಿದವರಿಗೆ ಮನಸ್ಸಿರಲಿಲ್ಲವ ಅಥವಾ ವ್ಯವಸ್ಥೆಯನ್ನು ಕಾಣುವವರ ದೃಷ್ಟಿದೋಷವ ?

ಉತ್ತರ, ಬಹುಶಃ ಸಂಸ್ಕಾರದ ಕೊರತೆ..! ವ್ಯವಸ್ಥೆಯನ್ನು ಹದಗೆಡಿಸುವವರಿಗು ಮತ್ತು ಹದಗೆಟ್ಟದ್ದನ್ನು ಸಹಿಸಿ ನಡೆಯುವವರಿಗು !

ಪ್ರಸ್ತುತ ವಿಷಯ ಕರೊನಾವನ್ನೇ ಮುಂದಿಟ್ಟಕೊಂಡರೆ, ಕರೊನಾ ಬಂದು ಸಾಯುವವರಿಗಿಂತ ಬಂದರೆ ಎನ್ನುವ ಭಯದಿಂದ ಪ್ರತಿಕ್ಷಣ ಸಾಯುತ್ತ ಬದುಕುವವರೆ ಹೆಚ್ಚು. ಬದುಕುವ ಭರೆವಸೆಗಳಿಗಿಂತ ಸಾಯುವ ಭಯದ ಸುದ್ದಿಗಳದ್ದೇ viral ಕಾರುಬಾರು !  ಆದರೆ ಈಗಿನ ತುರ್ತುಸ್ಥಿತಿಯಲ್ಲಿ ನಾವೇನು ಮಾಡಬೇಕು ? ಸಾಧ್ಯವಾದರೆ ಸಾಧ್ಯವಾದಷ್ಟು ಜನಕ್ಕೆ ನಮ್ಮಿಂದ ಯಾವುದೇ ತೊಂದರೆ ಆಗದಂತೆ, ಸಹಾಯ ಮಾಡುತ್ತ, ನೊಂದವರಿಗೆ ಸಾಂತ್ವನ ಹೇಳುತ್ತಾ, ಕತ್ತಲು ತುಂಬಿಕೊಂಡ ಮನಗಳಿಗೆ ಭರವಸೆಯ ಬೆಳಕು ಮೂಡಿಸುವ ಯತ್ನ ಮಾಡಬೇಕು. ಸುಮ್ಮನೆ ಸಲ್ಲದ ವಿಷಯಗಳಿಗೆ ಕಿವಿಕೊಟ್ಟು ಮನಃಸ್ಥಿತಿ ಜೊತೆ ಪರಿಸ್ಥಿತಿಯನ್ನೂ ಹಾಳುಮಾಡಿಕೊಂಡು ಸುತ್ತಲಿನವರ ನೆಮ್ಮದಿಯನ್ನೂ ಹಾಳುಗೆಡುವುವುದಲ್ಲ.

ಹೌದು, ಬದುಕು ಎಲ್ಲರಿಗೂ ಒಂದೇ ಆಗಿರುವುದಿಲ್ಲ, ಆದರೆ ಎಲ್ಲರ ಉಸಿರೊಳಗೆ ಬೆರೆತಿರುವುದು ಒಂದೇ ಸೃಷ್ಟಿ. ಹಲವು ರೂಪಾಂತರಗಳ ಹೊಂದಿದಾಗ್ಯೂ ಬದುಕೊಂದು ವಿಸ್ಮಯಕಾರಿ ಸಂಗತಿ. ಅದನ್ನು ಪ್ರತಿಕ್ಷಣ ಕಂಡುಕೊಳ್ಳೋಣ. lockdown ಆಚೆಗಿನ ಪ್ರಪಂಚಕ್ಕಷ್ಟೆ. ನಮ್ಮೊಳಗಿನ ಜಗತ್ತು ಸದಾ ಸ್ವತಂತ್ರವೆ. ಆ ಸ್ವತಂತ್ರವನ್ನು ಸಾಧ್ಯವಾದಷ್ಟು ಸುಂದರ ಮತ್ತು ಸಭ್ಯ ಅಭ್ಯಾಸಗಳಿಗೆ ಬಳಸಿಕೊಳ್ಳೋಣ.

ಬದುಕಲ್ಲ ಬವಣೆಯ ಬಂಧನ,

ಬದುಕದು ತೇಯ್ದ ಚಂದನ ।

-ಪಲ್ಲವಿ ಚೆನ್ನಬಸಪ್ಪ