ಮುಂಬಯಿ, ಮಾ.12: ಬಿ.ಎಸ್.ಕೆ.ಬಿ. ಎಸೋಸಿಯೇಶನ್, ಗೋಕುಲ ಮುಂಬಯಿಯ ಶತಮಾನೋತ್ಸವ ಆಚರಣೆಯ ಅಂಗವಾಗಿ ಕಳೆದ ರವಿವಾರ (ಮಾ.09) ರಂದು ಗೋಕುಲ ಸರಸ್ವತಿ ಸಭಾಗೃಹದಲ್ಲಿ ಅಧ್ಯಕ್ಷ ಡಾ| ಸುರೇಶ್ ಎಸ್. ರಾವ್ ರವರ ಪರಿಕಲ್ಪನೆ ಮತ್ತು ಮಾರ್ಗದರ್ಶನದಲ್ಲಿ, "ಪುರುಷರ ಮಹಾ ದಿನ" ವನ್ನು ಅತ್ಯಂತ ವರ್ಣಮಯವಾಗಿ ಆಚರಿಸಲಾಯಿತು.
ಉಪಾಧ್ಯಕ್ಷ ವಾಮನ್ ಹೊಳ್ಳ, ಗೌ| ಕಾರ್ಯದರ್ಶಿ ಎ. ಪಿ.ಕೆ. ಪೋತಿ, ವಿಶ್ವಸ್ಥ ಸದಸ್ಯ ಬಿ.ರಮಾನಂದ ರಾವ್ ಸೇರಿದಂತೆ ಇತರ ಪದಾಧಿಕಾರಿಗಳು ದೀಪ ಪ್ರಜ್ವಲನೆಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಂಗಳೂರಿನಿಂದ ಆಗಮಿಸಿದ ಅತಿಥಿ, ಹಾಸ್ಯ ಕವಿ ಡುಂಢಿರಾಜ್ ಅವರಿಂದ ಲಘು ಹಾಸ್ಯ ಚಟಾಕಿ, ಕಲಾ ಕದಂಬ ಆರ್ಟ್ಸ್ ಸೆಂಟರ್ ತಂಡದ ಶಶಿಕಾಂತ್ ಆಚಾರ್ಯ ಮತ್ತು ಡಾ| ರಾಧಾಕೃಷ್ಣ, ಬೆಂಗಳೂರು ಇವರು, ಸತ್ಯವೇ ನಮ್ಮ ತಾಯಿತಂದೆ ಎಂಬ ಸತ್ಯ ವಚನ ಪಾಲನೆಗಾಗಿ ಹೆಬ್ಬುಲಿಗೆ ತನ್ನನ್ನು ತಾನು ಆಹಾರವಾಗಿಸಲು ಮುಂದಾದ ಗೋವಿನ, ಕರ್ನಾಟಕದ ಐತಿಹಾಸಿಕ "ಪುಣ್ಯಕೋಟಿ" ಕಥಾನಕವನ್ನು ಯಕ್ಷಗಾನ ನೃತ್ಯ ರೂಪಕದಲ್ಲಿ ಪ್ರಸ್ತುತಗೊಳಿಸಿದರು. ಪುಟಾಣಿ ಪೃಥ್ವೀಶ್ ಕರುವಾಗಿ ಉತ್ತಮವಾಗಿ ಅಭಿನಯಿಸಿದರು. ನಂತರ ಡಾ| ಮಧುಸೂದನ್ ರಾವ್ ಪರಿವಾರದವರಿಂದ ಪುಟಾಣಿ ಕಲಾವಿದರಾದ ರೇಯಾಂಶ್ ಮತ್ತು ಪಾರ್ಥ್ ತಮ್ಮ ಅಭಿನಯದ "ನರಸಿಂಹ" ನೃತ್ಯ ರೂಪಕ, ವಿದ್ವಾನ್ ದಾಮೋದರ ಶರ್ಮ ರವರಿಂದ ದೈನಂದಿನ ಧಾರ್ಮಿಕ ಅನುಷ್ಠಾನದ ಬಗ್ಗೆ ಪ್ರವಚನ ನಡೆಯಿತು.
ನವನೀತ್ ರಾವ್, ಪವನ್ ರಾವ್, ಶ್ರೀನಾಥ್ ಸೋಮಯಾಜಿಯವರಿಂದ ತಬಲಾ, ಘಟಂ, ಮತ್ತು ಮೃದಂಗ ವಾದನದ ತಾಳವಾದ್ಯ ಕಚೇರಿ, ಶಶಿಕಾಂತ್ ಆಚಾರ್ಯ ಬಳಗದವರಿಂದ ಯಕ್ಷಗಾನ-ಭರತನಾಟ್ಯ ಸಮ್ಮಿಶ್ರಣದಲ್ಲಿ "ಕಂಸ ವಧೆ" ಕಥಾನಕ, ರಾಜಾರಾಮ್ ಆಚಾರ್ಯರವರ ರಚನೆ ಹಾಗೂ ದಿಗ್ದರ್ಶನದಲ್ಲಿ "ಪತಿವ್ಯಥೆ" ಎಂಬ ಹಾಸ್ಯ ರೂಪಕ, ಗೋಕುಲ ಯಕ್ಷಗಾನ ಕಲಾವಿದರಿಂದ ಎಚ್. ಲಕ್ಷ್ಮೀನಾರಾಯಣರವರ ನೇತೃತ್ವ ಹಾಗೂ ಗೀತಾಂಬಿಕಾ ಯಕ್ಷಗಾನ ಮಂಡಳಿಯವರ ಸಹಕಾರದಲ್ಲಿ ಗರುಡ ಗರ್ವಭಂಗ ಎಂಬ ತೆಂಕು ತಿಟ್ಟು ಯಕ್ಷಗಾನ ಹೀಗೆ ವೈವಿಧ್ಯಮಯ, ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ 5 ವರ್ಷದಿಂದ 80 ವರ್ಷದವರೆಗಿನ ಹಿರಿಕಿರಿಯ ಸದಸ್ಯರು ಭಾಗವಹಿಸಿದರು ಕೃಷ್ಣ ಭಟ್, ಕರ್ನಾಟಕ ಬ್ಯಾಂಕ್ ಡಿ.ಜಿ.ಎಂ. ರಾಜಗೋಪಾಲ್ ಭಟ್ ಮತ್ತು ಎಚ್.ಸೀತಾರಾಮ್ ಆಚಾರ್ಯ ರವರು ಕರೌಕೆ ಸಂಗೀತದಲ್ಲಿ ಸಿನೆಮಾ ಮತ್ತು ಭಾವಗೀತೆಗಳನ್ನು ಹಾಡಿದರು. ಎಲ್ಲಾ ಕಲಾವಿದರನ್ನು ಸಂಘದ ಅಧ್ಯಕ್ಷ ಡಾ| ಸುರೇಶ್ ರಾವ್ ಮತ್ತು ಪದಾಧಿಕಾರಿಗಳು ಶಾಲು ಹೊದಿಸಿ ಸನ್ಮಾನಿಸಿದರು. ಅಂತೆಯೇ ಸಂಘದ ಸದಸ್ಯ ಉದ್ಯೋಗ ಕ್ಷೇತ್ರದಲ್ಲಿ ಮಹತ್ ಸಾಧನೆಯನ್ನು ಮಾಡಿದ ಡಾ|ರಘುನಂದನ್ ಅವರನ್ನು ಕೂಡಾ ಶಾಲು ಹೊದಿಸಿ ಸನ್ಮಾನಿಸಿದರು.
ಪರೇಲ್ ಶ್ರೀನಿವಾಸ್ ಭಟ್ ಅವರ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ವಾಮನ್ ಹೊಳ್ಳ ಅವರು ಸ್ವಾಗತ ಗೈದು ಪ್ರಾಸ್ತಾವಿಕ ನುಡಿಗಳನ್ನಾಡಿ, ಕಾರ್ಯಕ್ರಮ ಪ್ರಾಯೋಜಿಸಿದ ರಾಮಪ್ರಸಾದ್ ರಾವ್, ಮುಲುಂಡು ಅವರಿಗೆ ಶಾಲು ಹೊದಿಸಿ, ಸ್ಮರಣಿಕೆಯನ್ನಿತ್ತು ಗೌರವಿಸಿದರು. ಪುರುಷರ ದಿನಾಚರಣಾ ಸಮಿತಿ ಕಾರ್ಯಾಧ್ಯಕ್ಷ ವೈ. ಗುರುರಾಜ್ ಭಟ್ ಮತ್ತು ಸಂಘದ ಸಹ ಕಾರ್ಯದರ್ಶಿ ವೈ. ಮೋಹನ್ ರಾಜ್ ಅವರು ನಿರೂಪಣೆಗೈದರು. ಗೌ.ಕಾರ್ಯದರ್ಶಿ ಎ. ಪಿ.ಕೆ. ಪೋತಿ ವಂದನಾರ್ಪಣೆ ಗೈದರು.