ಮಂಗಳೂರು ಜು 26:  ಮಂಗಳೂರಿನ ಶಕ್ತಿ ರೆಸಿಡೆನ್ಶಿಯಲ್ ಶಾಲೆ ಮತ್ತು ಶಕ್ತಿ ಪದವಿ ಪೂರ್ವಕಾಲೇಜಿನಲ್ಲಿ ಕಾರ್ಗಿಲ್ ವಿಜಯ ದಿವಸವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಗಿಲ್ವಾರ್ ಪದಕ ವಿಜೇತರು ಮತ್ತು ಆಪರೇಷನ್ ವಿಜಯ್ ನ ಮಾಜಿ ಸೈನಿಕರಾದ ಲಯನ್ ನಾಯಕ್ ಪ್ರವೀಣ್ ಶೆಟ್ಟಿ ಪಿಲಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಇವರು ಕಾರ್ಗಿಲ್‍ ಯುದ್ಧದಲ್ಲಿ ತಾವು ಭಾಗವಹಿಸಿದ ನೆನಪುಗಳನ್ನು ಹಂಚಿಕೊಂಡರು. ಬದುಕಿನಲ್ಲಿ ಹೀರೋ ಆಗಬೇಕೆಂದರೆ ಸೈನಿಕರಾಗಿ. ಸೈನಿಕರೇ ನಿಜವಾದ ಹೀರೋಗಳು. ಸೈನ್ಯದಲ್ಲಿರುವವರಿಗೆ ತಂದೆ, ತಾಯಿ, ಗೆಳೆಯ ಅನ್ನುವ ಸಂಬಂಧಕ್ಕಿಂತಲೂ ಸೈನಿಕರ ಸಮವಸ್ತ್ರದ ಮೇಲೆ ಅತೀವವಾದ ಭಾವನಾತ್ಮಕ ಸಂಬಂಧವಿರುತ್ತದೆ. ಭಾರತದ ಯಾವುದೇ ಒಬ್ಬ ಸೈನಿಕನಿಗೆ ಏನೇ ಆದರೂ ಇತರ ಸೈನಿಕರು ಕೆಚ್ಚೆದೆಯಿಂದ ಪ್ರತಿಭಟಿಸುತ್ತಾರೆ,  ಎದುರಾಳಿಗಳೊಂದಿಗೆ ಹೋರಾಡುತ್ತಾರೆ. ದೇಶಭಕ್ತಿಗೆ ಇನ್ನೊಂದು ಹೆಸರೇ ಸೈನಿಕ ಎಂದು ಹೇಳಿದರು. ಇದು ಭಾರತದ ಸೈನ್ಯ ಕಲಿಸಿಕೊಡುವ ಮೌಲ್ಯ. ಹಾಗಾಗಿ ಸೈನ್ಯ ಸೇರುವುದೇ ಇತರ ಎಲ್ಲಾ ಉದ್ಯೋಗಗಳಿಂದ ಶ್ರೇಷ್ಠವಾದ ಉದ್ಯೋಗ ಎಂದು ಹೇಳಿದರು. 

 

ಪಾಕಿಸ್ತಾನದ ಸೈನಿಕರಿಗೆ ಅಲ್ಲಿನ ಸರ್ಕಾರ ಗೌರವ ನೀಡುವುದಿಲ್ಲ. ಆದರೆ ಭಾರತ ನಮ್ಮ ಸೈನಿಕರನ್ನು ಬಹಳ ಗೌರವಯುತವಾಗಿ ನಡೆಸಿಕೊಳ್ಳುತ್ತದೆ. ನಾನು ರಜೆಯಲ್ಲಿ ಮನೆಯಲ್ಲಿದ್ದಾಗಲೇ ನನಗೆ ಕಾರ್ಗಿಲ್‍ ಯುದ್ಧದಲ್ಲಿ ಭಾಗವಹಿಸಲು ಕರೆ ಬಂದಿತ್ತು. ಅಂತಹ ತುರ್ತು ಪರಿಸ್ಥಿತಿಯಲ್ಲಿ ಹೊರಟ ನಾನು ರೈಲಿನಲ್ಲಿ ಕುಳಿತುಕೊಳ್ಳಲು ಜಾಗವಿಲ್ಲದೆ ನನ್ನದೇ ಸೂಟ್‍ಕೇಸ್ ನ ಮೇಲೆ ಕುಳಿತು ಪ್ರಯಾಣಿಸಿದ್ದೆ. ಯುದ್ಧದಲ್ಲಿ ತನ್ನ ಆತ್ಮೀಯನಾದ ಸಂಜೀವ್‍ಯಾದವ್ನನ್ನು ಕಳೆದುಕೊಂಡೆ.  ನನ್ನ ಮಡಿಲಲ್ಲೇ ಪ್ರಾಣ ಬಿಟ್ಟ ಆತನ ಸಾವಿನ ಸಂದರ್ಭದ ಸಯವಸ್ತ್ರವನ್ನುಇನ್ನೂತಾನು ಇರಿಸಿಕೊಂಡಿದ್ದೇನೆ ಎಂದು ಹೇಳಿದರು. ಗೆಳೆಯ ಹೇಳಿದ್ದ ಶಾಯರಿಯನ್ನು ಹೇಳಿ ಆತನನ್ನು ಸ್ಮರಿಸಿಕೊಂಡರು. ವಿದ್ಯಾರ್ಥಿಗಳಿಗೆ ಉಣ್ಣುವ ಅನ್ನವನ್ನು ದಯವಿಟ್ಟು ಚೆಲ್ಲಬೇಡಿ. ಎಷ್ಟೋ ದಿವಸಗಳ ಕಾಲ ಸೈನಿಕರು ಊಟ ಮಾಡದೆ,  ನೀರು ಕುಡಿಯದೆ ಸೈನ್ಯದಲ್ಲಿ ಹೋರಾಡುತ್ತಿರುತ್ತಾರೆ. ಅನ್ನದ ನಿಜವಾದ ಬೆಲೆ ಸೈನಿಕರಿಗೆ ತಿಳಿದಿರುತ್ತದೆ ಎಂದು ಹೇಳಿದರು. 

ಅಧ್ಯಕ್ಷರಾಗಿ ಮಾತನಾಡಿದ ಸಂಸ್ಥೆಯ ಸಲಹೆಗಾರರಾದ ರಮೇಶ್ ಕೆ.  ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ದಿನೇ ದಿನೇ ಜಾಗೃತವಾಗಬೇಕು. ಈ ನೆಲೆಯಲ್ಲಿ ನಮ್ಮ ಮುಂದೆ ಆದರ್ಶವಾಗಿ ನಿಂತಿರುವ ಪ್ರವೀಣ್ ಶೆಟ್ಟಿ ಅವರಿಗೆ ಸಂಸ್ಥೆಯ ವತಿಯಿಂದ  ಅಭಿನಂದನೆಗಳನ್ನು ಸಲ್ಲಿಸಿದರು. ಬಳಿಕ ಪ್ರವೀಣ್ ಶೆಟ್ಟಿ ಪಿಲಾರ್‍ ಇವರನ್ನು ಶಾಲು ಮತ್ತು ಸ್ಮರಣಿಯೊಂದಿಗೆ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಶಕ್ತಿ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲರಾದ ವೆಂಕಟೇಶಮೂರ್ತಿ ಹೆಚ್, ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲೆಯಾದ  ಬಬಿತ ಸೂರಜ್ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕ ಸುನಿಲ್ ಪಲ್ಲಮಜಲು ಕಾರ್ಯಕ್ರಮ ನಿರೂಪಿಸಿದರು.