ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಮೂಡುಬಿದಿರೆಸರಕಾರದ ಅನುದಾನ ಇಲ್ಲದೆಯೂ ಕೂಡ ಸಾಮಾನ್ಯರ ಸಹಕಾರದಿಂದ ಎಷ್ಟು ಉತ್ತಮವಾಗಿ ಭಿನ್ನ ಸಾಮರ್ಥ್ಯದ ಮಕ್ಕಳ ಶಾಲೆಯನ್ನು ನಡೆಸಬಹುದೆಂದು ಪ್ರಕಾಶ್ ಶೆಟ್ಟಿಗಾರ್ ತೋರಿಸಿಕೊಟ್ಟಿದ್ದಾರೆ. ಇಂತಹ ಶಾಲೆಗೆ ನಮ್ಮೆಲ್ಲರ ಸಹಕಾರ ಇದೆ ಎಂದು ಸಿದ್ಧಕಟ್ಟೆ ಫಲ್ಗುಣಿ ರೋಟರಿ ಕ್ಲಬ್ ಅಧ್ಯಕ್ಷ ದುರ್ಗಾದಾಸ್ ಶೆಟ್ಟಿ ನುಡಿದರು.

ಅವರು ಜುಲೈ 26 ರಂದು ಬೆಳುವಾಯಿ ವಿದ್ಯಾವರ್ಧಕ ಸಂಘ, ರಿಜುವಿನೇಟ್ ಚೈಲ್ಡ್ ಫೌಂಡೇಶನ್ ಪ್ರಾಯೋಜಕತ್ವದ ಸ್ಫೂರ್ತಿ ಭಿನ್ನ ಸಾಮರ್ಥ್ಯದ ಮಕ್ಕಳ ಶಾಲೆ, ತರಬೇತಿ ಕೇಂದ್ರ ಹಾಗೂ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗದ ಜಂಟಿ ಸಹಯೋಗದಲ್ಲಿ ಆಧಾರ್ ನೋಂದಣಿ, ತಿದ್ದುಪಡಿ, ಸೇವಾ ಸೌಲಭ್ಯ, ಆರೋಗ್ಯ, ಅಪಘಾತ ವಿಮಾ ಶಿಬಿರ, ಪೋಷಕರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಪುತ್ತೂರು ಅಂಚೆ ಇಲಾಖೆಯ ಮಾರುಕಟ್ಟೆ ವ್ಯವಸ್ಥಾಪಕ ಗುರುಪ್ರಸಾದ್ ಕೆ.ಎಸ್. ಅಂಚೆ ಇಲಾಖೆಯ ಸಂಪೂರ್ಣ ಮಾಹಿತಿ ಒದಗಿಸಿದರು. ವಾರ್ಷಿಕ 559ರೂ. ಕಟ್ಟಿದರೆ 10 ಲಕ್ಷ, 749 ರೂ. ಕಟ್ಟಿದರೆ 15 ಲಕ್ಷ ವಿಮೆ ಹಾಗೂ ಇನ್ನಿತರ ಹಲವಾರು ಸೌಲಭ್ಯಗಳ ಪ್ರಯೋಜನ ಹೊಂದಬಹುದಾಗಿದೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಬೆಳುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಶ್ ಪೂಜಾರಿ, ವಿದ್ಯಾವರ್ಧಕ ಸಂಘದ ಸಂಚಾಲಕ ರಾಜೇಶ್ ಸುವರ್ಣ, ಪ್ರವೀಣ್ ಮಸ್ಕರೇನಸ್, ಪೋಷಕರ ಸಮಿತಿಯ ಅಧ್ಯಕ್ಷೆ ಲತಾ ಸುರೇಶ್, ಸಿದ್ಧಕಟ್ಟೆ ಗಣೇಶ್ ಶೆಟ್ಟಿ, ಬೆಳುವಾಯಿ ಪ್ರವೀಣ್ ಜೈನ್, ಶಾಲಾ ಸಂಸ್ಥಾಪಕ ಪ್ರಕಾಶ್ ಜೆ ಶೆಟ್ಟಿಗಾರ ಉಪಸ್ಥಿತರಿದ್ದರು. 

ಶಿಕ್ಷಕಿಯರಾದ ಲಕ್ಷ್ಮಿ ಕಾರ್ಯಕ್ರಮ ನಿರ್ವಹಿಸಿ, ಸುಚಿತ್ರಾ ವಂದಿಸಿದರು.