ಮಂಗಳೂರು: ಕಾದಂಬರಿ ಚರಿತ್ರೆ ಅಲ್ಲ, ಆದರೆ ಕಾದಂಬರಿಯಲ್ಲಿ ಚರಿತ್ರೆ ಇರಬಹುದು. ಕಾದಂಬರಿ ಸವಿಸ್ತಾರವಾಗಿ ಜೀವನವನ್ನು ವಿಶ್ಲೇಷಣೆ ಮಾಡಬಲ್ಲುದು. ಆಂಜೆಲ್ 75 ವರ್ಷಗಳ ಹಿಂದಿನ ಜನಜೀವನವನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದೆ. ಕೊಂಕಣಿ ಅಕಾಡೆಮಿ ಒಂದು ಔಚಿತ್ಯಪೂರ್ಣ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದರಿಂದ ಮುಂದೆ ಸಾಹಿತ್ಯ ರಚಿಸುವವರಿಗೆ ಪ್ರೇರಣೆ ದೊರೆಯಲಿದೆ. ಅಕಾಡೆಮಿ ಸಾಹಿತ್ಯಾಸಕ್ತ ಯುವಜನತೆ ಹಾಗೂ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಕ್ರಮ ವಹಿಸಿದರೆ ಈ ಪರಂಪರೆ ಮುಂದುವರಿಯಲಿದೆ ಎಂದು ಡಾ ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷ್ ಡಾ ಗಣನಾಥ ಶೆಟ್ಟಿ ಎಕ್ಕಾರು ಅಭಿಪ್ರಾಯ ಪಟ್ಟರು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ನಗರದ ಸಂದೇಶ ಸಭಾಭವನದಲ್ಲಿ ಜೂಲೈ 13 ರಂದು ಆಯೋಜಿಸಿದ ಕೊಂಕಣಿ ಕನ್ನಡ ಲಿಪಿಯ ಪ್ರಥಮ ಕಾದಂಬರಿ ಆಂಜೆಲ್ ಇದರ 75 ನೇ ಸಂಭ್ರಮಾಚಾರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾದಂಬರಿಯ ಸ್ವರೂಪದ ಬಗ್ಗೆ ಮಾತಾನಾಡಿದರು.

ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಕೊಂಕಣಿ ಅಕಾಡೆಮಿಯ ಸಾಹಿತ್ಯದ ಕೆಲಸಗಳ ಬದ್ಧತೆ ಬಗ್ಗೆ ಪುನರುಚ್ಛರಿಸಿ, 'ಅಕಾಡೆಮಿಯು ಹಿರಿಯ ಸಾಹಿತಿಗಳನ್ನು ಗೌರವಿಸುವಂತಹ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಸಾಹಿತ್ಯದ ಬಗ್ಗೆ ನಿಮ್ಮ ವಿನೂತನ ಆಲೋಚನೆಗಳನ್ನು ಅಕಾಡೆಮಿಗೆ ತಿಳಿಸಿ. ಕೊಂಕಣಿ ಸಾಹಿತ್ಯ ಅಕಾಡೆಮಿಯು ನಿಮ್ಮ ಜೊತೆ ಯಾವಾಗಲೂ ಇರುತ್ತದೆ. ಅಕಾಡೆಮಿಗೆ ನಿಮ್ಮ ಸಹಕಾರ ತುಂಬಾ ಅಗತ್ಯವಾದದ್ದು' ಎಂದರು.

ಆಂಜೆಲ್ ಸಾಹಿತಿ ದಿ. ಜೊ. ಸಾ. ಆಲ್ವಾರಿಸ್ ಇವರ ಪತ್ನಿ ಮೊನಿಕಾ ಆಲ್ವಾರಿಸ್ ಲೇಖಕರ ಭಾವಚಿತ್ರ ಹಾಗೂ ಮೊದಲ ಮುದ್ರಣದ ಪ್ರತಿಗೆ ಪುಷ್ಪಾರ್ಚನೆ ಮಾಡುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೊಂಕಣಿ ನಾಟಕ ಸಭಾದ ಅಧ್ಯಕ್ಷ ವಂ. ರೊಕಿ ಡಿಕುನ್ಹಾ ಆಂಜೆಲ್ ಕಾದಂಬರಿಯ ಇ ಬೂಕ್ ಆವೃತ್ತಿಯನ್ನು ಬಿಡುಗಡೆಗೊಳಿಸಿದರು. ಕೃತಿಯನ್ನು ಇಬುಕ್ ಗೆ ಅಣಿಗೊಳಿಸಿದ ಸಾಫ್ಟ್ವೇರ್ ತಜ್ಞ ಕೇರನ್ ಮಾಡ್ತಾ ಇಂದಿನ ದಿನಮಾನದಲ್ಲಿ ಸಾಹಿತ್ಯವನ್ನು ವಿಶ್ವದ ಮೂಲೆ ಮೂಲೆಗೆ ತಲುಪಿಸುವಲ್ಲಿ ಈ ಬುಕ್ ನ ಪ್ರಸ್ತುತತೆ ಹಾಗೂ ಉಪಯೋಗಿಸುವ ಬಗ್ಗೆ ಮಾಹಿತಿ ನೀಡಿದರು. ಲೇಖಕಿ ಡಾ ಡಿಂಪಲ್ ಫೆರ್ನಾಂಡಿಸ್ ಆಂಜೆಲ್ ಕೃತಿಯಲ್ಲಿನ ಸಾಹಿತ್ಯದ ಬಗ್ಗೆ ಒಳನೋಟಗಳನ್ನೂ, ಲೇಖಕ ರಿಚ್ಚಾರ್ಡ್ ಆಲ್ವಾರಿಸ್ ಜೊ ಸಾ ಆಲ್ವಾರಿಸ್ ಇವರ ವ್ಯಕ್ತಿತ್ವದ ಬಗ್ಗೆ ಮಾಹಿತಿ ನೀಡಿದರು. 

ಅಕಾಡೆಮಿ ಸದಸ್ಯರಾದ ಸಪ್ನಾ ಕ್ರಾಸ್ತಾ ಸ್ವಾಗತಿಸಿ, ನವೀನ್ ಲೋಬೊ ವಂದಿಸಿದರು. ವಿತೊರಿ ಕಾರ್ಕಳ ನಿರೂಪಿಸಿದರು. ದಿ| ಜೊ.ಸಾ. ಆಲ್ವಾರಿಸ್ರವರ ಕುಟುಂಬಸ್ಥರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅಕಾಡೆಮಿ ಸದಸ್ಯರಾದ ರೊನಾಲ್ಡ್ ಕ್ರಾಸ್ತಾ, ಸಮರ್ಥ್ ಭಟ್ ಉಪಸ್ಥಿತರಿದ್ದರು.