ಮಂಗಳೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಮೊಗವೀರ ವ್ಯವಸ್ಥಾಪಕ ಮಂಡಳಿ, ದ.ಕ ಮತ್ತುಉಡುಪಿ ನಿಜ ಶರಣ ಅಂಬಿಗರ ಸೇವಾ ಸಂಘ ಇವರ ಸಹಕಾರದೊಂದಿಗೆ ಅಂಬಿಗರ ಚೌಡಯ್ಯ ಜಯಂತಿ ಮಂಗಳವಾರ ಉರ್ವಸ್ಟೋರ್‍ನ ತುಳು ಭವನದಲ್ಲಿ ನಡೆಯಿತು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ್ ಗಟ್ಟಿ ಕಾಪಿಕಾಡ್ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿ, ಅಂಬಿಗರ ಚೌಡಯ್ಯ ಅವರು ಕಾಯಕದೊಂದಿಗೆ ಬದುಕಿಗೊಂದು ದಾರಿಯನ್ನು ವಚನಗಳ ಮೂಲಕ ತಿಳಿಸಿಕೊಟ್ಟಿದ್ದಾರೆ. ಸಾಮಾನ್ಯ ವ್ಯಕ್ತಿಯಾದ ಅಂಬಿಗರ ಚೌಡಯ್ಯ ಸಮಾಜವನ್ನು ಹೇಗೆ ಸುಧಾರಣೆ ಮಾಡಬಹುದು ಸಮಾಜಕ್ಕೆಧರ್ಮದ ನ್ಯಾಯದ ದಿಕ್ಕನ್ನು ತೋರಿಸಿಕೊಳ್ಳಬಹುದು ಎಂಬುದಕ್ಕೆ ಒಂದು ನಿದರ್ಶನ. ಹಿಂದಿನ ಕಾಲದಲ್ಲಿ ಜ್ಞಾನ ಭಂಡಾರ ಸ್ವರೂಪಿ ವ್ಯಕ್ತಿಗಳೇ ಬದುಕಿಗೊಂದು ದಾರಿಯನ್ನು ತೋರಿಸಿದವರು. ನಮ್ಮ ಹಿರಿಯರು ಬದುಕಿಗೆ ಹೇಗೆ ದಾರಿ ತೋರಿಸಿ ಕೊಟ್ಟಿದ್ದಾರೋ ಹಾಗೆ ಅದೇದಾರಿಯನ್ನು ನಾವು ನಮ್ಮ ಮಕ್ಕಳಿಗೆ ತೋರಿಸಿಕೊಡುವ ಅಗತ್ಯವಿದೆ ಎಂದರು.
ವಿದ್ಯೆಯಿಂದ ಮಕ್ಕಳನ್ನು ದಾರಿತಪ್ಪಿಸುವ ವ್ಯವಸ್ಥೆಗಳು ಇಂದಿನ ಕಾಲ ಘಟ್ಟದಲ್ಲಿದೆ. ಮಕ್ಕಳಿಗೆ ಜಾಗೃತಿ, ಜ್ಞಾನ ಕೊಡಬೇಕಾದರೆ ಇಂತಹ ಮಹಾನ್ ಜ್ಞಾನಿಗಳ ಆದರ್ಶಗಳನ್ನು ವಿಚಾರಗಳನ್ನು ಅವರಿಗೆ ತಿಳಿಸುತ್ತಿರಬೇಕು. ಅಂಬಿಗರ ಚೌಡಯ್ಯರ ಬದುಕು ಮತ್ತು ಆದರ್ಶ ಚಿಂತನೆಗಳು ಇಂದಿನ ಮತ್ತು ಮುಂದಿನ ಜನಾಂಗಕ್ಕೆಆದರ್ಶವಾಗಬೇಕು ಎಂದು ನುಡಿದರು.
ಉಪನ್ಯಾಸ ನೀಡಿದ ಉಪನ್ಯಾಸಕ ಯೋಗೀಶ್ ಕೈರೋಡಿ, ನಮ್ಮ 21ನೇ ಶತಮಾನದ ಕಾಲಘಟ್ಟ ಯಂತ್ರತಂತ್ರಜ್ಞಾನ ಈ ರೀತಿಯ ಒಂದು ಸೌಲಭ್ಯದ ವಿಜ್ಞಾನದ ತುತ್ತತುದಿಯಲ್ಲಿದೆ. ಹಿಂದಿನ ಕಾಲಘಟ್ಟಕ್ಕೂ ಈಗಿನ ಕಾಲಘಟ್ಟಕ್ಕೂ ಹೋಲಿಸಿದರೆ ತುಂಬಾ ರೀತಿಯ ಸೌಲಭ್ಯಗಳು ಈಗ ಇವೆ. 12ನೇ ಶತಮಾನಕ್ಕೆ ಹಿಂದಿರುಗಿ ನೋಡಿದಾಗ ವಚನಕಾರರ ವಚನದಲ್ಲಿ ತಿಳಿಸಿದ ವಿಚಾರವನ್ನು ಗ್ರಹಿಸುವುದಾದರೆ ನಾವು ತುಂಬಾ ಹಿಂದೆಇದ್ದೇವೆ. ನಾವು ಮುಂದುವರಿಯದದ್ದು ಬರೀ ವಿಜ್ಞಾನ, ತಂತ್ರಜ್ಞಾನ ಸೌಲಭ್ಯದಿಂದ ಮಾತ್ರ. ಆದರೆ ನಮ್ಮಅಂತರಂಗ ಮತ್ತು ಆಲೋಚನಾ ಕ್ರಮಗಳಲ್ಲಿ ತುಂಬಾ ಹಿಂದೆ ಇದ್ದೇವೆ ಎಂದರು. ವಚನಗಳನ್ನು ಓದಿದರೆ ಒಂದು ಗಂಟೆಯಲ್ಲಿ ಮಾತನಾಡಬಹುದಾದಂತಹ ವಿಚಾರಗಳು ವಿಮರ್ಶೆಗಳನ್ನು ಮನಮುಟ್ಟುವಂತೆ 3-4 ಸಾಲುಗಳಲ್ಲಿ ಅರ್ಥಪೂರ್ಣವಾಗಿ ಹೇಳಲಾಗಿದೆ. ಆದ್ದರಿಂದ ನಾವು ವಚನಗಳನ್ನು ಓದಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಡಿ ಎಸ್‍ಗಟ್ಟಿ, ಮೊಗವೀರ ವ್ಯವಸ್ಥಾಪಕ ಮಂಡಳಿ ಅಧ್ಯಕ್ಷ ಭರತ್ ಕುಮಾರ್ ಉಳ್ಳಾಲ್, ಜಿಕೆ ರಮೇಶ್ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ ಸ್ವಾಗತಿಸಿ, ಪ್ರದೀಪ್ ಡಿ ಎಂ ಹಾವಂಜೆ ನಿರೂಪಿಸಿದರು.