ಮಂಗಳೂರು, ಫೆ. 4: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ದ.ಕ ಜಿಲ್ಲಾ ಸವಿತಾ ಸಮಾಜ ಇವರ ಸಹಕಾರದೊಂದಿಗೆ ಸವಿತಾ ಮಹರ್ಷಿ ಜಯಂತಿ ಮಂಗಳವಾರ ನಗರದ ಸರಕಾರಿ ನೌಕರರ ಸಂಘದ ನಂದಿನಿ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಆನಂದ್ ಭಂಡಾರಿ ಹೊಸಬೆಟ್ಟು ಮಾತನಾಡಿ, ಸವಿತಾ ಸಮಾಜ ಅತ್ಯಂತ ಕಡಿಮೆ ಜನರನ್ನು ಹೊಂದಿದೆ. ಈ ಸಮಾಜದವರು ಒಂದಾದರೆ ಮಾತ್ರ ಸವಿತಾ ಸಮಾಜದ ಏಳಿಗೆಯಾಗುತ್ತದೆ. ಆದ್ದರಿಂದ ಸವಿತಾ ಸಮಾಜದವರು ಪರಸ್ಪರ ಒಗ್ಗೂಡಬೇಕು. ಸವಿತಾ ಸಮಾಜದ ಏಳಿಗೆಗೋಸ್ಕರ ಸಹಕಾರ ನೀಡಬೇಕು ಎಂದರು.
ಉಪನ್ಯಾಸಕರಾಗಿ ಆಗಮಿಸಿದ ಲೇಖಕ ಟಿ.ಎ.ಎನ್ ಖಂಡಿಗೆ ಮಾತನಾಡಿ, ಕ್ಷೌರ ಸಮಾಜದ ಮೂಲ ಪುರುಷ ಸವಿತಾ ಮಹರ್ಷಿ ದೇವಾನುದೇವತೆಗಳಿಗೆ ಕ್ಷೌರ ಮಾಡುತ್ತಿದ್ದರು. ಅವರ ಚಿತ್ರವನ್ನು ಗಮನಿಸಿದಾಗ ಅವರ ಕೈಗಳಲ್ಲಿರುವ ಒಂದೊಂದು ವಸ್ತುಗಳು ಒಂದೊಂದು ವಿಚಾರಗಳನ್ನು ತಿಳಿಸುತ್ತದೆ. ಅವರು ಬರೀ ಕ್ಷೌರ ಕೆಲಸ ಮಾತ್ರವಲ್ಲದೆ ಬೇರೆ ಬೇರೆ ವೃತ್ತಿಯಲ್ಲಿ ಪರಿಣಿತಿ ಹೊಂದಿದವರು ಎಂದು ತಿಳಿಯುತ್ತದೆ.
ಎಣದರು ಧ್ಯಾನದ ಸಂಕೇತವಾಗಿರುವ ಜಪಮಾಲೆ ನಾವು ಮಾಡುವ ಕೆಲಸದಲ್ಲಿ ಏಕಾಗ್ರತೆ ಇರಬೇಕು ಎಂಬ ಸಂದೇಶ ನೀಡುತ್ತದೆ.ಇನ್ನೊಂದು ಕೈಯಲ್ಲಿರುವ ತಾವರೆ ಯಾವ ರೀತಿ ಕೆಸರಿನಲ್ಲಿ ಹುಟ್ಟಿ ವಿಶೇಷ ಸ್ಥಾನವನ್ನು ಪಡೆದುಕೊಳ್ಳುತ್ತದೆ ಅದೇ ರೀತಿ ಮನುಷ್ಯನು ವಿಶೇಷ ಸ್ಥಾನವನ್ನು ಪಡೆದುಕೊಳ್ಳಬೇಕು ಎಂಬ ಅರ್ಥವನ್ನು ಹೊಂದಿದೆ. ಧನ್ವಂತರಿ ಬಿಲ್ಲು ಸುಮಾರು ವರ್ಷಗಳ ಹಿಂದೆ ಇದ್ದ ಕ್ಷೌರಿಕರು ವೈದಿಕ ವೃತ್ತಿಯನ್ನು ಕೂಡ ಮಾಡುತ್ತಿದ್ದರು. ಆಯುರ್ವೇದದಲ್ಲಿ ಕೂಡ ಪರಿಣತಿ ಹೊಂದಿದ್ದರು ಎಂದು ಹೇಳಿದರು. ಅವರ ಕೈಯಲ್ಲಿರುವ ವೀಣೆಯು ಸಂಗೀತ ಕಲೆಯಲ್ಲಿಯೂ ಕೂಡಾ ಪ್ರವೀಣರಾಗಿದ್ದರು ಎಂದರು.
ಸವಿತಾ ಸಮಾಜಕ್ಕೆ ಪೌರಾಣಿಕ ಹಿನ್ನೆಲೆ ಇದೆ. ಪ್ರತಿಯೊಂದು ಸಮುದಾಯವೂ ಕೂಡ ಅವರದ್ದೇ ಆದ ಜ್ಞಾನ ಹೊಂದಿರುತ್ತಾರೆ. ತಲೆ ಕೂದಲಿನಿಂದ ಕುರೂಪಿಯಾಗಿ ಕಾಣುವ ವ್ಯಕ್ತಿಯನ್ನು ಸುಂದರವಾಗಿಸುವಲ್ಲಿ ಕ್ಷೌರಿಕನ ಪಾತ್ರ ಅಪಾರ ಎಂದು ಕ್ಷೌರವೃತ್ತಿಯ ಮಹತ್ವವನ್ನು ಸಾರಿದರು.ನಾವು ಮಾಡುವಂತ ಕರ್ಮಗಳು ನಮ್ಮ ತಲೆಕೂದಲಿನಲ್ಲಿ ಸಂಗ್ರಹವಾಗುತ್ತದೆ ಅಂತಹ ಪಾಪಗಳನ್ನು ಕಡಿಮೆ ಮಾಡುವ ಕಾರ್ಯವನ್ನು ಕ್ಷೌರಿಕರು ಮಾಡುತ್ತಾರೆ ಎಂದು ಹೇಳಿದರು.
ನಮ್ಮ ಸಮಾಜದಲ್ಲಿ ಸಮಾನತೆ, ಆರ್ಥಿಕತೆ, ಬೌದ್ಧಿಕವಾಗಿ ಬೆಳೆಯಬೇಕು. ಇಂತಹ ಮಹಾನ್ ವ್ಯಕ್ತಿಗಳ ವಿಚಾರಗಳನ್ನು ತಿಳಿದುಕೊಂಡಾಗ, ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಬೌದ್ಧಿಕವಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಡಿ ವೇದವ್ಯಾಸ್ ಕಾಮತ್ ಮಾತನಾಡಿ, ಸವಿತಾ ಸಮಾಜ ಸದೃಢಗೊಳ್ಳಬೇಕು. ಆದ್ದರಿಂದ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಮಂಗಳೂರು ತಾಲೂಕು ಸವಿತಾ ಸಮಾಜದ ಅಧ್ಯಕ್ಷ ಸುರೇಶ್ ಭಂಡಾರಿ, ಮಾಜಿ ಮೇಯರ್ ದಿವಾಕರ್ ಪಂಡಿತ್, ವಸಂತ್ ಎಂ ಬೆಳ್ಳೂರು ಮತ್ತಿತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್.ಜಿ ಸ್ವಾಗತಿಸಿ, ರೇಣುಕಾ ಕಣಿಯೂರು ಕಾರ್ಯಕ್ರಮ ನಿರೂಪಿಸಿದರು.