ಮಂಗಳೂರು: ಪ್ರಾಧ್ಯಾಪಕರು ಹೆಚ್ಚು ಹೆಚ್ಚು ಪುಸ್ತಕಗಳನ್ನು ಬರೆಯುವ ಹವ್ಯಾಸ ಬೆಳೆಸಿಕೊಳ್ಳಬೇಕು. ಏಕೆಂದರೆ ಸೃಜನಶೀಲತೆಯು ಶೈಕ್ಷಣಿಕ ಅಭಿವೃದ್ಧಿಗೆ ಅತ್ಯಂತ ಅಗತ್ಯವಿದೆ. ಅಧ್ಯಯನದ ಜೊತೆಗೆ ಅಧ್ಯಾಪನೆ, ಅಧ್ಯಾಪನೆಯ ಜೊತೆಗೆ ಸೃಜನಶೀಲ ಬರವಣಿಗೆ ಇವೆಲ್ಲವೂ ಸೇರಿದಾಗ ಶೈಕ್ಷಣಿಕ ಬೆಳವಣಿಗೆ ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯ ಕುಲಪತಿಗಳಾದ ಪ್ರೊ. ಪಿ. ಎಲ್. ಧರ್ಮ ಅವರು ಅಭಿಪ್ರಾಯಪಟ್ಟರು.
ಮಂಗಳೂರು ವಿಶ್ವವಿದ್ಯಾನಿಲಯದ ರಾಣಿ ಅಬ್ಬಕ್ಕ ಹಾಲ್ ನಲ್ಲಿ ಡಾ. ಭಾರತಿ ಪಿಲಾರ್, ಸಹಪ್ರಾಧ್ಯಾಪಕರು, ಕಂಪ್ಯೂಟರ್ ಸೈನ್ಸ್ ವಿಭಾಗ, ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಮತ್ತು ಡಾ. ವಿನ್ಸಿ ಅಬ್ರಹಾಂ, ಸಹ ಪ್ರಾಧ್ಯಾಪಕರು, ಕಂಪ್ಯೂಟರ್ ಸೈನ್ಸ್ ವಿಭಾಗ, ಅಸ್ಸಾಂಷನ್ ಕಾಲೇಜು ಚೆಂಗನ್‍ಶೆರಿ, ಕೇರಳ ಇವರು ಬರೆದ ಕಂಪ್ಯೂಟರ್ ಸೈನ್ಸ್ ಗೆ ಸಂಬಂಧಪಟ್ಟ "ಪೈಥಾನ್ ಬೇಸಿಕ್ಸ್ ಆಂಡ್ ಬಿಯೋಂಡ್" ಹಾಗೂ "ಆರ್ ಫಾರ್ ಸ್ಟಾಟಿಸ್ಟಿಕಲ್ ಕಂಪ್ಯೂಟಿಂಗ್" ಎನ್ನುವ ಎರಡು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
"ಪೈಥಾನ್ ಬೇಸಿಕ್ಸ್ ಆಂಡ್ ಬಿಯೋಂಡ್" ಪುಸ್ತಕವನ್ನು ಮಂಗಳೂರು ವಿಶ್ವವಿದ್ಯಾನಿಲಯ ಕುಲಪತಿಗಳಾದ ಪ್ರೊ. ಪಿ. ಎಲ್. ಧರ್ಮ ಅವರು ಲೋಕಾರ್ಪಣೆ ಮಾಡಿದರು. "ಆರ್ ಫಾರ್ ಸ್ಟಾಟಿಸ್ಟಿಕಲ್ ಕಂಪ್ಯೂಟಿಂಗ್" ಮಂಗಳೂರು ವಿಶ್ವವಿದ್ಯಾನಿಲಯ ಕುಲಸಚಿವರಾದ ಶ್ರೀ ರಾಜು ಮೊಗವೀರ ಅವರು ಲೊಕಾರ್ಪಣೆ ಮಾಡಿದರು. ಪರೀಕ್ಷಾಂಗ ಕುಲಸಚಿವರಾದ ಪ್ರೊ. ದೇವೇಂದ್ರಪ್ಪ ಎಚ್, ಹಣಕಾಸು ಅಧಿಕಾರಿಗಳಾದ ಪ್ರೊ. ವೈ ಸಂಗಪ್ಪ ಇವರು ಪುಸ್ತಕ ಬಿಡುಗಡೆಗೆ ಕೈ ಜೋಡಿಸಿದರು.
ಡಾ. ಭಾರತಿ ಪಿಲಾರ್ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ, ನಮ್ಮ ಜ್ಞಾನವನ್ನು ಪುಸ್ತಕಗಳ ಮೂಲಕ ಮಾತ್ರ ಮುಂದಿನ ಪೀಳಿಗೆಗೆ ತಲುಪಿಸಬಹುದು. ವಿದ್ಯಾರ್ಥಿಗಳಿಗೆ ಸುಲಭದಲ್ಲಿ ಅರ್ಥವಾಗುವ ಹಾಗೆ ಪೈಥಾನ್ ಮತ್ತು ಆರ್ ಪುಸ್ತಕಗಳನ್ನು ವಿನ್ಯಾಸ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಗಣಕವಿಜ್ಞಾನ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಬಿ. ಎಚ್. ಶೇಖರ್, ಪ್ರೊ. ಎಚ್. ಎಲ್. ಶಶಿರೇಖ, ಭೂಗೋಳಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಡಿ. ಪಿ. ಅಂಗಡಿ, ಎಲೆಕ್ಟ್ರೋನಿಕ್ಸ್ ವಿಭಾಗದ ಪ್ರಾಧ್ಯಾಪಕರಾದ ನವೀನ್ ಕುಮಾರ್, ಜೀವಶಾಸ್ತ್ರ ವಿಭಾಗದ ಪ್ರೊ. ಪ್ರಶಾಂತ್ ನಾಯ್ಕ್, ರಸಾಯನ ಶಾಸ್ರ ವಿಭಾಗದ ಪ್ರೊ ಭೋಜ ಪೂಜಾರಿ, ವಿಶ್ವವಿದ್ಯಾನಿಲಯ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಡಾ. ರತ್ನಾವತಿ ಟಿ, ಗಣಿತಶಾಸ್ತ್ರ ವಿಭಾಗದ ಶ್ರೀ ಸುಬ್ರಹ್ಮಣ್ಯ ಭಟ್ ಮತ್ತು ಗಣಕ ವಿಜ್ಞಾನ ವಿಭಾಗದ ಸಂಶೋಧನಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಡಾ. ಭಾರತಿ ಪಿಲಾರ್ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಡಾ. ವಿನ್ಸಿ ಅಬ್ರಹಾಂ ವಂದನಾರ್ಪನೆ ಮಾಡಿದರು. ಈ ಎರಡೂ ಪುಸ್ತಕಗಳು ಆಮೆಜಾನ್ ಮತ್ತು ಫ್ಲಿಪ್‍ಕಾರ್ಟ್‍ನಲ್ಲಿ ಲಭ್ಯವಿದೆ. ಡಾ. ಭಾರತಿ ಪಿಲಾರ್ ಅವರು ಇದಕ್ಕೂ ಮುಂಚೆ ನವಿಲುಗರಿ ಎನ್ನುವ ಕವನ ಸಂಕಲನವನ್ನು ಹಾಗೂ ಫ್ಯೂಚರಿಸ್ಟಿಕ್ ಟ್ರೆಂಡ್ಸ್ ಇನ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಎನ್ನುವ ಪುಸ್ತಕಗಳನ್ನು ಬರೆದಿದ್ದರು.