ಮಂಗಳೂರು: ‘’ಒಂಬತ್ತು ಗಂಟೆಗೆ ನಾಟಕವಾದರೆ ನಮಗೆ ವೇದಿಕೆ ದೊರೆಯುತ್ತಿದ್ದುದು ಎಂಟು ಮುಕ್ಕಾಲಿಗೆ. ಬೇಗ ಶುರು ಮಾಡಿ ಎಂಬ ಒತ್ತಾಯ ಬೇರೆ. ಆಗ ಬೆಳಕಿನ ವಿನ್ಯಾಸದ ಬಗ್ಗೆ ಚಿಂತಿಸಲು ಪುರುಸೊತ್ತಾದರೂ ಎಲ್ಲಿ? ನಮಗೆ ಗೊತ್ತಿದ್ದದ್ದು ಎರಡೇ ಲೈಟು. ಕೋಪ ಬಂದರೆ ಕೆಂಪು, ಮತ್ತೊಂದು ನೀಲಿ. ಏಕೆಂದರೆ ನಮ್ಮ ಕಾಲದ ತುಳು ಕಲಾವಿದರಿಗೆ ಇಂತಹ ರಂಗ ಶಿಕ್ಷಣ ದೊರೆತಿರಲಿಲ್ಲ. ನಾವು ಮೂರು ಗಂಟೆ ಪ್ರೇಕ್ಷಕರನ್ನು ನಗಿಸುವ ಬಗ್ಗೆ, ನೂರಾರು ಪ್ರದರ್ಶನ ಮಾಡುವ ಬಗ್ಗೆ ಹಾಗೂ ಅದರಿಂದ ನಮ್ಮ ಹೊಟ್ಟೆ ಹೊರೆಯುವ ಬಗ್ಗೆ ಮಾತ್ರ ಯೋಚಿಸಿದ್ದು. ನೀವು ಅದೃಷ್ಟವಂತರು. ನಿಮಗೆ ದೊರೆತ ಈ ಅಧ್ಯಯನದ ಶಿಸ್ತನ್ನು ಬಳಸಿ, ರಂಗಭೂಮಿ ಅಭಿವೃದ್ಧಿ ಮಾಡಿ, ಕಲಿಕೆ ನಿರಂತರವಾಗಿರಲಿ’’ ಎಂದು ಖ್ಯಾತ ತುಳು ಕಲಾವಿದ, ಸಿನೆಮಾ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ ಹೇಳಿದರು. ಅವರು ಶಕ್ತಿನಗರದ ಕಲಾಂಗಣದಲ್ಲಿ ಜರ್ನಿ ಥೇಟರ್, ಮಾಂಡ್ ಸೊಭಾಣ್ ಸಹಯೋಗದಲ್ಲಿ ಆಯೋಜಿಸಿದ ಮೂರು ದಿನಗಳ ಬೆಳಕಿನ ವಿನ್ಯಾಸ ಕಾರ್ಯಾಗಾರ `ಕ್ರಾಸ್ ಫೇಡ್’ ಇದರ ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಶುಭ ಹಾರೈಸಿದರು.

ಇನ್ನೋರ್ವ ಅತಿಥಿ ಮಾಂಡ್ ಸೊಭಾಣ್ ಗುರಿಕಾರ ಎರಿಕ್ ಒಝೇರಿಯೊ ಮಾತನಾಡಿ, ‘’ಕಲಾಂಗಣವನ್ನು ಕಟ್ಟಿದ್ದೇ ಇಂತಹ ರಂಗಭೂಮಿ ಚಟುವಟಿಕೆಗಳಿಗಾಗಿ. ಇಲ್ಲಿ ಕಲಾವಿದರು ಜಾತಿಮತರಹಿತರಾಗಿ ಸೇರಿ ಕಲಿಯಬೇಕು, ಕಲಿಸಬೇಕು, ರಂಗಭೂಮಿ ಬೆಳೆಯಬೇಕು ಎಂಬ ಉದ್ದೇಶವಿತ್ತು. ರಂಗಭೂಮಿಯಲ್ಲಿ ಬೆಳಕಿನ ವಿನ್ಯಾಸದ ಬಗ್ಗೆ ಚಿಂತಿಸಿದವರು ಕಮ್ಮಿ. ಇದೊಂದು ಬಹು ಅಗತ್ಯವಾಗಿದ್ದ ಕಾರ್ಯಾಗಾರ’’ ಎಂದು ಅಭಿಪ್ರಾಯಪಟ್ಟರು.

ರಂಗಭೂಮಿಯಲ್ಲಿ ಬೆಳಕಿನ ವಿನ್ಯಾಸದ ಚರಿತ್ರೆ, ಸಹಜ ಬೆಳಕು, ಬೇರೆ ಬೇರೆ ಕೋನಗಳು, ಬಣ್ಣಗಳು, ಭಾವನೆಗಳು, ವಿವಿಧ ಪರಿಕರಗಳು ಹಾಗೂ ಸಂಪ್ರದಾಯಿಕತೆಯಿಂದ ಆಧುನಿಕತೆಗೆ ಬೆಳೆದ ಬಗೆ ಹೀಗೆ ಮೂರು ದಿನ ಕಾರ್ಯಾಗಾರ ನಡೆದ ರೀತಿಯನ್ನು ಜರ್ನಿ ಥೇಟರಿನ ವಿದ್ದು ಉಚ್ಚಿಲ್ ಸಿಂಹಾವಲೋಕನ ಮಾದರಿಯಲ್ಲಿ ಪ್ರಸ್ತಾವಿಸಿದರು.

ಸಂಪನ್ಮೂಲ ವ್ಯಕ್ತಿಗಳಾದ ಕೃಷ್ಣಕುಮಾರ್ ನಾರ್ಣಕಜೆ ರಂಗಾಯಣ, ಮಧೂಸೂಧನ್ ನೀನಾಸಂ ಹಾಗೂ ಶಿಬಿರಾರ್ಥಿಗಳ ಪೈಕಿ ಮೇಧಾವಿ ಎಂ ಮತ್ತು ಸದಾಶಿವ ಕಾಸರಗೋಡು ತಮ್ಮ ಅನುಭವ ಹಂಚಿಕೊಂಡರು. ಸುನೀಲ್ ಪಲ್ಲಮಜಲು ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು. ಸುಧೀಶ್, ವಿಕಾಸ್ ಕಲಾಕುಲ್ ಹಾಗೂ ಇತರರು ಸಹಕರಿಸಿದರು.

ಜೂನ್ 25 ರಿಂದ 27 ರವರೆಗೆ ನಡೆದ ಈ ಕಾರ್ಯಾಗಾರದ ಉದ್ಘಾಟನೆಯನ್ನು ಕಿಂಗ್ಸ್ ಲೀ ನಜ್ರೆತ್ ರವರು ನೆರವೇರಿಸಿದ್ದರು. ಈ ಕಾರ್ಯಾಗಾರದಲ್ಲಿ ಬೆಳಕು ವಿನ್ಯಾಸಗಾರರ ಸಮಸ್ಯೆಗಳು, ಅವುಗಳಿಗೆ ಪರಿಹಾರಗಳ ಬಗ್ಗೆಯೂ ಚರ್ಚಿಸಲಾಯಿತು. ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡದ ಸುಮಾರು 30 ಕ್ಕೂ ಮಿಕ್ಕಿ ಶಿಬಿರಾರ್ಥಿಗಳು ಭಾಗವಹಿಸಿದ್ದರು.