ಮಂಗಳೂರು:  ಪೂರ್ವ ಶತಮಾನದ ಶರಣರ ವಚನಗಳನ್ನು ಸಂಗ್ರಹಿಸಿ ಇಂದಿನ ಪೀಳಿಗೆಗೆ ವಚನಗಳು ಲಭ್ಯವಾಗುವಂತೆ ಮಾಡಿ, ಜನಮಾನಸದಲ್ಲಿ ಸಮಾನತೆಯ ಅರಿವು ಮೂಡಿಸುವ ಬೃಹತ್ ಕಾರ್ಯ ಮಾಡಿದವರು ಫ.ಗು. ಹಳಕಟ್ಟಿ ಅವರು ಎಂದು ಅಪರ ಜಿಲ್ಲಾಧಿಕಾರಿ ಡಾ. ಜಿ. ಸಂತೋಷ್ ಕುಮಾರ್ ಹೇಳಿದರು.

ಅವರು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಫ.ಗು. ಹಳಕಟ್ಟಿ ಅವರ ಜನ್ಮ ದಿನದ ಪ್ರಯುಕ್ತ ಆಚರಿಸಲಾಗುವ ವಚನ ಸಾಹಿತ್ಯ ಸಂರಕ್ಷಣಾ ದಿನ ಕಾರ್ಯಕ್ರಮದಲ್ಲಿ ಫ.ಗು. ಹಳಕಟ್ಟಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ  ಮಾಡಿ ಮಾತನಾಡಿದರು.  

ಫ.ಗು. ಹಳಕಟ್ಟಿ ಅವರು ಸಂರಕ್ಷಿಸಿರುವ ವಚನಗಳ ಮಹತ್ವವನ್ನು ಅರಿತು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಹಾಗೂ ಅವರು ಸಂಗ್ರಹಿಸಿದ ವಚನಗಳ ಬಗ್ಗೆ ನಾವು ತಿಳಿದುಕೊಂಡಾಗ ಮಾತ್ರ ಇಂದಿನ ವಚನ ಸಾಹಿತ್ಯ ಸಂರಕ್ಷಣಾ ದಿನ ಕಾರ್ಯಕ್ರಮವು ಅರ್ಥಪೂರ್ಣವಾಗುತ್ತದೆ ಎಂದರು.  

ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಜೇಶ್ ಜಿ. ಹಾಗೂ ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.