ಮಂಗಳೂರು: ಶಕ್ತಿ ಪ. ಪೂ.ಕಾಲೇಜಿನ ಪ್ರಥಮ ಮತ್ತು ದ್ವಿತೀಯ ಪಿ.ಯು.ಸಿ ವಿಭಾಗದ ಒಟ್ಟು 68 ವಿದ್ಯಾರ್ಥಿಗಳು ಮತ್ತು 6 ಜನ ಉಪನ್ಯಾಸಕರನ್ನು ಒಳಗೊಂಡ ತಂಡವು ರಾಣಿಅಬ್ಬಕ್ಕ ತುಳು ಅಧ್ಯಯನ ಕೇಂದ್ರಕ್ಕೆ ಭೇಟಿ ನೀಡಿತು. ಅಧ್ಯಯನ ಕೇಂದ್ರದ ಮುಖ್ಯಸ್ಥರಾದ ಡಾ|| ತುಕಾರಾಂ ಪೂಜಾರಿಯವರು ವಸ್ತು ಸಂಗ್ರಾಹಲಯದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. 

ತುಳುನಾಡಿನ ಅನನ್ಯ ಬದುಕನ್ನು ವಿದ್ಯಾರ್ಥಿಗಳಿಗೆ ಪರಿಚಯ ಮಾಡಿಕೊಡುವುದರ ಜೊತೆಗೆ ತುಳುನಾಡಿನ ರಾಜ ಮನೆತನಗಳ ಕುರಿತಾಗಿಯೂ ಮಾಹಿತಿ ನೀಡಿದರು. 

ವಿಶೇಷವಾಗಿ ಉಳ್ಳಾಲದ ಚೌಟ ರಾಣಿ ಅಬ್ಬಕ್ಕನ ಆಳ್ವಿಕೆ ಮತ್ತು ವ್ಯಕ್ತಿತ್ವದ ಪರಿಚಯಗಳನ್ನು ಮಾಡಿದರು. ಐರೋಪ್ಯರ ದಾಳಿಯಿಂದ ತುಳುನಾಡನ್ನು ಎದುರಿಸಿದ ಮೊದಲ ರಾಣಿಅಬ್ಬಕ್ಕನ ಕತೆಯ ಜೊತೆಗೆ ತುಳುನಾಡು ಒಂದು ಕಾಲದಲ್ಲಿ ವ್ಯಾಪಾರದ ಬಹುಮುಖ್ಯ ಕೇಂದ್ರವಾಗಿ ಹೇಗೆ ಉನ್ನತ ಸ್ಥಿತಿಯನ್ನು ತಲುಪಿತ್ತು ಎಂಬ ವಿಚಾರವನ್ನು ವಿದ್ಯಾರ್ಥಿಗಳಿಗೆ ಡಾ|| ತುಕಾರಾಂ ಪೂಜಾರಿಯವರು ವಿವರಿಸಿದರು. 

ರಾಣಿಅಬ್ಬಕ್ಕ ತುಳು ಅಧ್ಯಯನ ಕೇಂದ್ರದಲ್ಲಿ ವಿಶೇಷವಾದ ಆಕರ್ಷಣೆಯಾಗಿ ರಾಣಿಅಬ್ಬಕ್ಕನ ಫೋಟೋ ಗ್ಯಾಲರಿಯನ್ನು ವಿದ್ಯಾರ್ಥಿಗಳು ವೀಕ್ಷಿಸಿದರು ಮತ್ತು ಪ್ರಾಚೀನ ತುಳುನಾಡಿನ ದಿನಬಳಕೆಯ ವಸ್ತುಗಳಿಂದ ಹಿಡಿದು ತುಳು ಸಂಸ್ಕೃತಿಯ ಆರಾಧನೆಯ ಭಾಗವಾಗಿರುವ ದೈವರಾದನೆ ಹಾಗೂ ಇನ್ನಿತರ ವಸ್ತುಗಳನ್ನು ನೋಡುವ ಅವಕಾಶ ವಿದ್ಯಾರ್ಥಿಗಳಿಗೆ ಲಭ್ಯವಾಯಿತು. 

ಅಡಿಗೆ ಮನೆಯ ಪರಿಕರಗಳು, ಕೃಷಿಗೆ ಸಂಬಂಧಪಟ್ಟ ವಸ್ತುಗಳು, ಮರಣ ಪೆಟ್ಟಿಗೆ, ಹುಲಿ ಹೆದರಿಸುವ ಸಾಧನ .....ಹೀಗೆ ಹತ್ತು ಹಲವು ವಸ್ತುಗಳನ್ನು ವಿದ್ಯಾರ್ಥಿಗಳು ವೀಕ್ಷಿಸಿದರು. 

ತುಳುನಾಡು ಸಾಂಸ್ಕೃತಿಕವಾಗಿ, ರಾಜಕೀಯವಾಗಿ, ಭೌಗೋಳಿಕವಾಗಿ ಸ್ವತಂತ್ರ ಆಸ್ತಿತ್ವವನ್ನು ಪಡೆದುಕೊಂಡು ಸ್ವತಂತ್ರದೇಶವಾಗಿ ನೂರಾರು ವರ್ಷಗಳ ಹಿಂದೆಯೂ ಖ್ಯಾತಿ ಪಡೆದ ವಿಚಾರವನ್ನು ಡಾ|| ತುಕರಾಂ ಪೂಜಾರಿಯವರು ವಿದ್ಯಾರ್ಥಿಗಳಿಗೆ ವಿವರಿಸಿದರು.