ಉಜಿರೆ: “ಮದ್ಯವರ್ಜನ ಶಿಬಿರ ಎಂದರೆ ಹೊಸ ಜೀವನದ ಪ್ರಾರಂಭ ಎಂದು ಅರ್ಥ. ಮದ್ಯಪಾನ ಮಾಡಿದಾಗ ಏನು ನಷ್ಟ ಆಗುತ್ತದೆ. ಕುಟುಂಬದಲ್ಲಿ ಏನು ಸಮಸ್ಯೆಯಾಗುತ್ತದೆ ಎಂಬುದು ಈ ಶಿಬಿರಕ್ಕೆ ಸೇರಿದ ಮೇಲೆ ಅರಿವಾಗುತ್ತದೆ. ಪಂಚೇಂದ್ರಿಯಗಳ ಮೇಲೆ ಹತೋಟಿ ಸಾಧಿಸುವುದೇ ಈ ಶಿಬಿರದ ಗುಟ್ಟು. ಇನ್ನು ಮುಂದೆ ಮದ್ಯಪಾನ ಮಾಡುವುದಿಲ್ಲ. ಯಾವುದೇ ದುಶ್ಚಟ, ದುರಾಭ್ಯಾಸಕ್ಕೆ ಬಲಿಯಾಗುವುದಿಲ್ಲ ಎಂಬ ತೀರ್ಮಾನವನ್ನು ಕೈಗೊಳ್ಳಬೇಕು. 

ದೃಢವಾದ ತೀರ್ಮಾನವನ್ನು ಕೈಗೊಳ್ಳುವುದೆಂದರೆ ನಮ್ಮ ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟುಕೊಂಡಂತೆ. ಆದುದರಿಂದ ಕಳೆದು ಹೋದ ದಿನಗಳನ್ನು ಮರೆತು ಮುಂದಿನ ದಿನಗಳಲ್ಲಿ ಒಳ್ಳೆಯದಾಗುತ್ತದೆ ಎಂದು ಅರಿತುಕೊಂಡು ಸಂಸಾರದಲ್ಲಿ ಪ್ರೀತಿ, ಆರೋಗ್ಯ, ನೆಮ್ಮದಿಯಿಂದ ಬಾಳಿರಿ, ಎಲ್ಲರಿಗೂ ಭಗವಂತೆ ಒಳ್ಳೆಯದು ಮಾಡಲಿ” ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಆಶೀರ್ವದಿಸಿದರು. ಅವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆದ 235ನೇ ವಿಶೇಷ ಮದ್ಯವರ್ಜನ ಶಿಬಿರಕ್ಕೆ ಆಗಮಿಸಿದ 53 ಮಂದಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಯೋಜನೆಯ ನಿವೃತ್ತ ಪ್ರಾದೇಶಿಕ ನಿರ್ದೇಶಕರಾದ  ಮಹಾವೀರ ಅಜ್ರಿಯವರು ಉಪಸ್ಥಿತರಿದ್ದರು.

ಈ ಶಿಬಿರದಲ್ಲಿ ಡಾ| ಮೋಹನದಾಸ ಗೌಡ, ಡಾ| ಬಾಲಕೃಷ್ಣ ಭಟ್, ಡಾ| ಶ್ರೀನಿವಾಸ್ ಭಟ್, ಸುಮನ ಪಿಂಟೋ., ವೈದ್ಯಾಧಿಕಾರಿಗಳಾಗಿ, ಸಲಹೆಗಾರರಾಗಿ ಸಹಕರಿಸಿದರು. ಎಂದಿನಂತೆ ಶಿಬಿರದಲ್ಲಿ ಯೋಗ, ಧ್ಯಾನ, ವ್ಯಾಯಾಮ, ಅನಿಸಿಕೆ, ಆತ್ಮಾವಲೋಕನ, ಗುಂಪು ಚರ್ಚೆ, ಸಲಹೆ, ಕುಟುಂಬದ ದಿನ., ಹೀಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಮನಪರಿವರ್ತನೆಗೆ ಅವಕಾಶ ಮಾಡಿಕೊಡಲಾಗಿದೆ. ಶಿಬಿರಕ್ಕೆ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿ. ಪಾೈಸ್, ಯೋಜನಾಧಿಕಾರಿ  ಮಾಧವ ಗೌಡ, ಶಿಬಿರಾಧಿಕಾರಿ  ಕುಮಾರ್ ಟಿ, ಆರೋಗ್ಯ ಸಹಾಯಕಿ ಫಿಲೋಮಿನಾ ಡಿ’ಸೋಜ ಸಹಕರಿಸಿರುತ್ತಾರೆ. ಮುಂದಿನ ವಿಶೇಷ ಶಿಬಿರವು ನ. 11ರಂದು ನಡೆಯಲಿದೆ ಎಂದು ವೇದಿಕೆಯ ಪ್ರಕಟಣೆ ತಿಳಿಸಿದೆ.