ಮಂಗಳೂರು: ಕಾಲೇಜು ವಿದ್ಯಾರ್ಥಿಗಳಲ್ಲಿ ತುಳು ಸಾಹಿತ್ಯ ಓದಿನ ಅಭಿರುಚಿ ಮೂಡಿಸುವ ಕೆಲಸ ಅಗತ್ಯವಾಗಿ ನಡೆಯಬೇಕಾಗಿದೆ ಎಂದು ಹಿರಿಯ ಲೇಖಕ ಹಾಗೂ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಮುದ್ದು ಮೂಡುಬೆಳ್ಳೆ ಅವರು ಹೇಳಿದರು. 

ಅವರು ಗುರುವಾರ ಉರ್ವಸ್ಟೋರ್ ತುಳು ಭವನದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಬಲ್ಮಠ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಹಯೋಗದಲ್ಲಿ ನಡೆದ 'ಅಕಾಡೆಮಿಡ್ ಒಂಜಿ ದಿನ: ಬಲೆ ತುಳು ಓದುಗ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತುಳು ಭಾಷೆ ಮಾತನಾಡುವವರು, ತುಳುನಾಡಿನಲ್ಲಿರುವವರು, ಭಾಷೆಯ ಅಭಿಮಾನ ಹೊಂದಿರುವವರು ತುಳುವರು, ತುಳುವಿನಲ್ಲಿ ಅಪಾರವಾದ ಜಾನಪದ ಸಾಹಿತ್ಯ ಇದೆ,  ಎದುರುಕತೆ, ಪಾಡ್ದನ, ಉರಲ್, ಜನಪದ ಕಥೆಗಳು ಇತ್ಯಾದಿ ಇದಕ್ಕೆ ನಿದರ್ಶನವಾಗಿದೆ.  ಸಾಹಿತ್ಯದ ಎಲ್ಲಾ ಪ್ರಕಾರಗಳ ಪುಸ್ತಕಗಳೂ ತುಳುವಿನಲ್ಲಿದೆ, ಅವುಗಳನ್ನು ಓದಿ ವಿದ್ಯಾರ್ಥಿಗಳು ತುಳು ಹಾಗೂ ತುಳುನಾಡಿನ ವಿಚಾರಗಳನ್ನು ತಿಳಿದುಕೊಳ್ಳಬಹುದು ಎಂದರು.

ಬಲ್ಮಠ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಗದೀಶ್ ಬಾಳ ಮಾತನಾಡಿ, ತುಳು ಶ್ರೀಮಂತ ಭಾಷೆ, ನಮ್ಮ ಭಾಷೆಯ ಬಗ್ಗೆ ನಮಗೆ ಅಭಿಮಾನ ಇರಬೇಕು, ಪುಸ್ತಕ ಮೂಲಕ ಭಾಷೆಯ ಬಗ್ಗೆ  ಅಭಿಮಾನ ಮೂಡಿಸಲು ಸಾಧ್ಯ ಎಂದರು. 

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸಿ ಮಾತನಾಡಿ, ತುಳುವಿನ ಐದು ಸಾವಿರಕ್ಕೂ ಅಧಿಕ ಪುಸ್ತಕಗಳು ಅಕಾಡೆಮಿಯ ಗ್ರಂಥಾಲಯದಲ್ಲಿದೆ. ಬೇರೆ ಬೇರೆ ವಿಷಯಗಳನ್ನೊಳಗೊಂಡ ಪುಸ್ತಕಗಳಿವೆ, ಈ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ತುಳು ಪುಸ್ತಕ ಪರಿಚಯ  ಮಾಡಿಸಲಾಗುತ್ತಿದೆ ಎಂದರು.

ಬಲ್ಮಠ ಸರ್ಕಾರಿ ಮಹಿಳಾ ಕಾಲೇಜಿನ ಉಪನ್ಯಾಸಕಿ ವಿಜಯಲಕ್ಷ್ಮಿ, ವಿದ್ಯಾರ್ಥಿ ಸಂಚಾಲಕಿ ಶ್ರೇಯಾ  ಗೌಡ, ರಂಗಕರ್ಮಿ ಜಗನ್ ಪವಾರ್  ಉಪಸ್ಥಿತರಿದ್ದರು.ತುಳು ಅಕಾಡೆಮಿ ಸದಸ್ಯ ಉದ್ಯಾವರ ನಾಗೇಶ್ ಕುಮಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.