ಮಂಗಳೂರು: ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯ, ಮಂಗಳೂರು ಇಲ್ಲಿನ ಕನ್ನಡ ವಿಭಾಗವು ಇದೇ ಸೋಮವಾರ ದಿನಾಂಕ 26ರಂದು, ’ಪ್ರಜಾತಂತ್ರ: ಜಗತ್ತು, ದೇಶ ಮತ್ತು ಪ್ರದೇಶ’’ಎಂಬ ವಿಷಯದ ಮೇಲೆ ಒಂದು ದಿನದ ರಾಷ್ಟ್ರೀಯ ವಿಚಾರ
ಸಂಕಿರಣವನ್ನು ಆಯೋಜಿಸುತ್ತಿದೆ. ಭಾಷೆ ಮತ್ತು ಸಂಸ್ಕೃತಿ ಅಧ್ಯಯನ ನಿಕೇತನದ ಸಹಯೋಗದಲ್ಲಿ ನಡೆಯುವ ಈ ವಿಚಾರ ಸಂಕಿರಣದ ಉದ್ಘಾಟನೆ ಸಾನ್ನಿಧ್ಯ ಸಭಾಂಗಣದಲ್ಲಿ ನಡೆಯಲಿದೆ.
ಸುರತ್ಕಲ್ಲಿನಲ್ಲಿರುವ ದ. ಕ. ನಿರ್ಮಿತಿ ಕೇಂದ್ರದ ಕಾರ್ಯನಿರ್ವಾಹಕರಾಗಿರುವ ಶ್ರೀ ರಾಜೇಂದ್ರ ಕಲ್ಬಾವಿಯವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಹೈದರಾಬಾದ್ ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕರಾಗಿರುವ ಪ್ರೊ. ಶಿವರಾಮ ಪಡಿಕ್ಕಲ್ ಅವರು ಆಶಯ ನುಡಿಯನ್ನು ನುಡಿಯಲಿದ್ದಾರೆ. ಅಲೋಶಿಯಸ್ ಪರಿಗಣಿತ ವಿವಿಯ ಕುಲಪತಿಗಳಾಗಿರುವ ರೆ. ಡಾ. ಪ್ರವೀಣ್ ಮಾರ್ಟಿಸ್ ಅವರು ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದ್ದಾರೆ.
ಬೆಳಿಗ್ಗೆ 11 ಗಂಟೆಗೆ ಗೋಷ್ಠಿ ಆರಂಭವಾಗಲಿದ್ದು ಮೂರು ಉಪನ್ಯಾಸಗಳಿವೆ. ಪುತ್ತೂರಿನ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರೊಫೆಸರ್ ಆಗಿರುವ ಐವನ್ ಫ್ರಾನ್ಸಿಸ್ ಲೋಬೋ ‘ಪ್ರಜಾತಂತ್ರದಲ್ಲಿ ಪ್ರಜೆಗಳು ಅಂದರೆ?’ ಎಂಬ ವಿಷಯದ ಬಗ್ಗೆ, ಮಂಗಳೂರು ವಿಶ್ವವಿದ್ಯಾನಿಲಯದ ವಿಶ್ರಾಂತ ರಾಜಕೀಯ ಶಾಸ್ತ್ರ ಪ್ರಾಧ್ಯಾಪಕರಾಗಿರುವ ಪ್ರೊ ರಾಜಾರಾಮ ತೋಳ್ಪಾಡಿಯವರು ‘ಪ್ರಜಾತಂತ್ರ: ಭಾರತದ ಕಥೆ’ ವಿಷಯದ ಬಗ್ಗೆ, ತುಮಕೂರು ವಿಶ್ವವಿದ್ಯಾನಿಲಯದ ಡಿವಿಜಿ ಕನ್ನಡ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ಅಧ್ಯಕ್ಷರಾಗಿರುವ ಪ್ರೊ ನಿತ್ಯಾನಂದ ಬಿ ಶೆಟ್ಟಿ ‘ಪ್ರಜಾತಾಂತ್ರಿಕ ಮೌಲ್ಯ: ಆಧುನಿಕ ಕನ್ನಡ ಸಾಹಿತ್ಯ’ ಎಂಬ ವಿಷಯದ ಬಗ್ಗೆ ಉಪನ್ಯಾಸವನ್ನು ನೀಡಲಿದ್ದಾರೆ.
ಮಧ್ಯಾಹ್ನ ಊಟದ ಬಳಿಕ ಉತ್ಸವ ಗೊನೆವಾರ ನಿರ್ದೇಶನದ ಪೋಟೋ ಸಿನೆಮಾ ಪ್ರದರ್ಶನ ನಡೆಯಲಿದೆ. ಬಳಿಕ ಸಿನೆಮಾದ ಕುರಿತಂತೆ ಸಂವಾದ ನಡೆಯಲಿದೆ. ಕನ್ನಡ, ರಾಜಕೀಯ ಶಾಸ್ತ್ರ ಮತ್ತು ಚರಿತ್ರೆಯ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಮತ್ತು ಸಾರ್ವಜನಿಕರು ಈ ವಿಚಾರಸಂಕಿರಣದಲ್ಲಿ ಭಾಗವಹಿಸಲಿದ್ದಾರೆ ಎಂಬುದಾಗಿ ಕನ್ನಡ ವಿಭಾಗದ ಮುಖ್ಯಸ್ಥರಾಗಿರುವ ಡಾ ಮಹಾಲಿಂಗ ಭಟ್ ಕೆ ಅವರು ತಿಳಿಸಿದ್ದಾರೆ.