ಶಕ್ತಿನಗರ: ‘ರಾಜ್ಯಭಾಷೆ ಯಾವುದೇ ಒಂದು ರಾಜ್ಯಕ್ಕೆ ಸೀಮೀತವಾದರೆ ಕೊಂಕಣಿಯ ವಿಶೇಷತೆ ಏನೆಂದರೆ ಅದು ಇಡೀ ಕೊಂಕಣ ಪ್ರದೇಶಕ್ಕೆ ಅನ್ವಯಿಸುವ ಭಾಷೆ. ಸಾವಿರಾರು ಭಾಷೆ, ಉಪಭಾಷೆಗಳಿರುವ ಭಾರತದಲ್ಲಿ ಕೇವಲ 22 ಭಾಷೆಗಳಿಗೆ ಮಾತ್ರ ಅಧಿಕೃತ ಭಾಷೆಯ ಸ್ಥಾನಮಾನವಿದೆ. ಅದರಲ್ಲಿ ಕೊಂಕಣಿ ಒಂದು ಎಂಬ ಅಭಿಮಾನ ನಮ್ಮದು. ಹಲವಾರು ಕಠಿಣ ನಿಬಂಧನೆಗಳನ್ನು ದಾಟಿ, ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಲು ನಮ್ಮ ಹಿರಿಯರು ಶ್ರಮಿಸಿದ್ದಾರೆ. ಇಂದು ಕರ್ನಾಟಕದಲ್ಲಿ ಕೊಂಕಣಿ ಕಲಿಕೆಗೆ, ಸ್ನಾತಕೋತ್ತರ ಶಿಕ್ಷಣಕ್ಕೆ ಮತ್ತು ಸಂಶೋಧನೆಗೆ ಅವಕಾಶವಿದೆ. ಅದನ್ನು ಬಳಸಬೇಕು. ಹಾಗೂ ಇದು ತಂತ್ರಜ್ಞಾನ ಯುಗ. ಸಾಮಾಜಿಕ ಮಾಧ್ಯಮ ಹಾಗೂ ಅಂತರ್ಜಾಲದ ಪ್ರಭಾವಿ ಬಳಕೆಯ ಮುಖಾಂತರ ಕೊಂಕಣಿಯನ್ನು ವಿಶ್ವಸ್ತರಕ್ಕೆ ಕೊಂಡೊಯ್ಯಲು ಯುವಜನತೆ ಶ್ರಮಿಸಬೇಕು.ʼ ಎಂದು ಪ್ರೊ. ಅರುಣಾ ಕಾಮತ್ ಹೇಳಿದರು. ಅವರು 20.08.2025 ರಂದು ಶಕ್ತಿನಗರದ ಕಲಾಂಗಣದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಮಾಂಡ್ ಸೊಭಾಣ್ ಸಹಯೋಗದಲ್ಲಿ ಏರ್ಪಡಿಸಿದ 34 ನೇ ಕೊಂಕಣಿ ಮಾನ್ಯತಾ ದಿನಾಚರಣೆಯ ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. 

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ  ಜೋಕಿಂ ಸ್ಟ್ಯಾನಿ ಆಲ್ವಾರಿಸ್ರವರು ಸ್ವಾಗತಿಸಿ, ಪ್ರಸ್ತಾವಿಕ ನುಡಿಗಳನ್ನಾಡಿದರು. ಭಾರತದ ಮಾನ್ಯತೆ ಪಡೆದ ಅಧಿಕೃತ 22 ಭಾಷೆಗಳಲ್ಲಿ ಕೊಂಕಣಿಯೂ ಒಂದು. ನಮ್ಮ ಭಾಷೆಗೆ 1992 ಆಗಸ್ಟ್ 20 ರಂದು ದೊರೆತ ಮಾನ್ಯತೆಯನ್ನು ನಾವು ಕೊಂಕಣಿ ಮಾನ್ಯತಾ ದಿನಾಚರಣೆ ಹೆಸರಲ್ಲಿ ಸಂಭ್ರಮಿಸುತ್ತೇವೆ. ಯುವಜನರು ಇದರಿಂದ ಸ್ಪೂರ್ತಿ ಪಡೆದು ಕೊಂಕಣಿ ಕೀರ್ತಿಯನ್ನು ಇಡೀ ಜಗತ್ತಿಗೆ ವಿಸ್ತರಿಸಲು ಶ್ರಮಿಸಬೇಕು. ಭಾಷಾಭಿವೃದ್ಧಿಯ ಯಾವುದೇ ಹೊಸ ಯೋಚನೆಗಳಿಗೆ ಅಕಾಡೆಮಿ ಸಹಕಾರ ನೀಡಲಿದೆ.’’ ಎಂದರು.

ಈ ದಿನಾಚರಣೆಯನ್ನು ಮಹಾನಗರ ಪಾಲಿಕೆಯ ಮಾಜಿ ಕಾರ್ಪೊರೇಟರ್ ರಂಗನಾಥ ಕಿಣಿ ಕೊಂಕಣಿ ಬಾವುಟ ಏರಿಸುವ ಮೂಲಕ ಉದ್ಘಾಟಿಸಿದರು. ನಂತರ ಪ್ರೌಢಶಾಲೆ ಹಾಗೂ ಕಾಲೇಜು ವಿಭಾಗಗಳಲ್ಲಿ ವಿವಿಧ ವಿನೋದಾವಳಿ ಸ್ಪರ್ಧೆಗಳು ನಡೆದವು. 

ಪ್ರೌಢಶಾಲಾ ವಿಭಾಗದಲ್ಲಿ ಕ್ರೈಸ್ಟ್ ಕಿಂಗ್ ಆಂಗ್ಲ ಮಾಧ್ಯಮ ಶಾಲೆ ಕಾರ್ಕಳ ಪ್ರಥಮ, ಮೌಂಟ್ ಕಾರ್ಮೆಲ್ ಸೆಂಟ್ರಲ್ ಸ್ಕೂಲ್ ದ್ವೀತೀಯ ಮತ್ತು ಹೋಲಿ ಫ್ಯಾಮಿಲಿ ಆಂಗ್ಲ ಮಾಧ್ಯಮ ಶಾಲೆ ತೃತೀಯ ಸ್ಥಾನ ಪಡೆದರು. ಕಾರ್ಯಕ್ರಮ ನಿರ್ವಹಣೆಯಲ್ಲಿ ಕ್ರೈಸ್ಟ್ ಕಿಂಗ್ ಶಾಲೆಯ ಲೆನಿಶಾ ಮೆಂಡೊನ್ಸಾ ಮತ್ತು ಸಾನ್ವಿ ಮಾರ್ಟಿಸ್ ಪ್ರಥಮ, ಮೌಂಟ್ ಕಾರ್ಮೆಲ್ ಶಾಲೆಯ ಅಲೋಮ ಲೋಬೊ ದ್ವಿತೀಯ ಹಾಗೂ ಕೆನರಾ ಪ್ರೌಢ ಶಾಲೆಯ ಜೀವಿಕಾ ಕುಡ್ವಾ ತೃತೀಯ ಸ್ಥಾನ ಪಡೆದರು.

ಕಾಲೇಜು ವಿಭಾಗದಲ್ಲಿ ಸಂತ ಎಲೋಶಿಯಸ್ ಪಿಯು ಕಾಲೇಜು ಬಿ ತಂಡ ಪ್ರಥಮ, ಸಂತ ಎಲೋಶಿಯಸ್ ಪಿಯು ಕಾಲೇಜು ಎ ತಂಡ ದ್ವೀತೀಯ ಹಾಗೂ ಕಾರ್ಮೆಲ್ ಪಿಯು ಕಾಲೇಜು ಮೊಡಂಕಾಪು ತೃತೀಯ ಸ್ಥಾನ ಪಡೆದರು. ಕಾರ್ಯಕ್ರಮ ನಿರ್ವಹಣೆಯಲ್ಲಿ ಸಂತ ಎಲೋಶಿಯಸ್ ಪಿಯು ಕಾಲೇಜಿನ ಲಿಸ್ಟನ್ ಕಾರ್ಲ್ ಪ್ರಥಮ, ಸಂತ ಎಲೋಶಿಯಸ್ ಪಿಯು ಕಾಲೇಜಿನ ಆಡ್ಲಿನ್ ಸಿಕ್ವೇರಾ ಮತ್ತು ಕೆನರಾ ಸಂಧ್ಯಾ ಕಾಲೇಜಿನ ಪಂಚಮಿ ಭಟ್ ದ್ವೀತೀಯ ಮತ್ತು ಸಂತ ಎಲೋಶಿಯಸ್ ಪರಿಗಣಿತ ವಿವಿಯ ಸಾನ್ಸಿಯಾ ರೂತ್ ಡಿಕುನ್ಹಾ ತೃತೀಯ ಸ್ಥಾನ ಪಡೆದರು. ವಿಕಾಸ್ ಕಲಾಕುಲ್ ಬಹುಮಾನಿತರ ವಿವರ ವಾಚಿಸಿದರು.

ಇತ್ತೀಚೆಗೆ ಭರತನಾಟ್ಯದಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಕು. ರೆಮೊನ ಇವೆಟ್ ಪಿರೇರಾ ಇವರನ್ನು ಸನ್ಮಾನಿಸಲಾಯಿತು. ಸನ್ಮಾನ ಪತ್ರವನ್ನು ಅಕಾಡೆಮಿ ಸದಸ್ಯೆ ಶ್ರೀಮತಿ ಅಕ್ಷತಾ ನಾಯಕ್ ವಾಚಿಸಿದರು.

ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಶ್ರೀ ರೊಯ್ ಕ್ಯಾಸ್ತೆಲಿನೊರವರು ʻಚಾಲ್ತಿ ಕೊಂಕ್ಣಿʼ ಪುಸ್ತಕದ ಇ ಬುಕ್ ಆವೃತ್ತಿಯನ್ನು ಬಿಡುಗಡೆಗೊಳಿಸಿದರು. ಪುಸ್ತಕದ ಬಗ್ಗೆ ಕೇರನ್ ಮಾಡ್ತಾ ಮಾಹಿತಿ ನೀಡಿದರು. ಮಾಂಡ್ ಸೊಭಾಣ್ ಅಧ್ಯಕ್ಷರಾದ ಶ್ರೀ ಲುವಿ ಜೆ. ಪಿಂಟೊ ತೀರ್ಪುದಾರರನ್ನು ಹಾಗೂ ಇತ್ತೀಚೆಗೆ ಗುರು ಶ್ರೇಷ್ಟ ಗೌರವ ಪಡೆದ ಶಿಕ್ಷಕಿ ಹಾಗೂ ಅಕಾಡೆಮಿ ಸದಸ್ಯೆ ಶ್ರೀಮತಿ ಸಪ್ನಾ ಕ್ರಾಸ್ತಾ ಇವರನ್ನು ಗೌರವಿಸಿದರು.   ಅಕಾಡೆಮಿ ಸದಸ್ಯರಾದ ನವೀನ್ ಲೋಬೊ, ರೊನಿ ಕ್ರಾಸ್ತಾ, ದಯಾನಂದ ಮಡ್ಕೇಕರ್  ಉಪಸ್ಥಿತರಿದ್ದರು.

ರಿಜಿಸ್ಟ್ರಾರ್ ರಾಜೇಶ್ ಜಿ ಧನ್ಯವಾದ ಅರ್ಪಿಸಿದರು. ಉದ್ಘಾಟನಾ ಕಾರ್ಯವನ್ನು ಅಕಾಡೆಮಿ ಸದಸ್ಯ ಸಮರ್ಥ್ ಭಟ್ ಮತ್ತು ಸಮಾರೋಪ ಕಾರ್ಯಕ್ರಮವನ್ನು ವೆನಿಶಾ ಸಲ್ಡಾನ್ಹಾ ನಿರೂಪಿಸಿದರು.