ಮಂಗಳೂರು: 'ಕಲೆ, ಸಂಸ್ಕೃತಿ, ಸಾಹಿತ್ಯ - ಶಿಕ್ಷಣ ಇತ್ಯಾದಿ ಕ್ಷೇತ್ರಗಳ ಬೆಳವಣಿಗೆಗೆ ಸಾಮಾಜಿಕ ಮತ್ತು ಧಾರ್ಮಿಕ ರಂಗದಲ್ಲಿ ದುಡಿಯುವವರ ಕೊಡುಗೆ ಅಪಾರ. ತಮ್ಮ ನೆಲದ ಸಂಸ್ಕೃತಿಯ ಮೇಲಿನ ಪ್ರೀತಿಯೇ ಅಂಥವರ ಸಾಧನೆಗೆ ಸೋಪಾನವಾಗಿದೆ' ಎಂದು ಹಿರಿಯ ವಿದ್ವಾಂಸ ಮತ್ತು ಸಂಸ್ಕೃತಿ ಚಿಂತಕ ಡಾ.ಎಂ. ಪ್ರಭಾಕರ ಜೋಶಿ ಹೇಳಿದ್ದಾರೆ.

ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ - ಮಂಥನ ಮತ್ತು ಪ್ರದರ್ಶನ ವೇದಿಕೆಯು ಇತ್ತೀಚೆಗೆ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪುರಸ್ಕೃತರಾದ ಸಮಿತಿಯ ಮೂವರು ಸಾಧಕರಿಗೆ ನಗರದ ಬಲ್ಮಠ ಕುಡ್ಲ ಪೆವಿಲಿನ್ ಸಭಾಂಗಣದಲ್ಲಿ ಏರ್ಪಡಿಸಿದ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. ಶ್ರೀದೇವಿ ಶಿಕ್ಷಣ ಸಂಸ್ಥೆಗಳ ಆಡಳಿತ ನಿರ್ದೇಶಕ ಮತ್ತು ಹಿರಿಯ ಉದ್ಯಮಿ ಡಾ. ಎ. ಸದಾನಂದ ಶೆಟ್ಟಿ ಜ್ಯೋತಿ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿ ಬಳಿಕ ಶುಭ ಹಾರೈಸಿದರು.

ಸನ್ಮಾನ - ಗೌರವ:

ಬೆಂಗಳೂರಿನ ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯಿಂದ 2024 ನೇ ಸಾಲಿನ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪಡೆದ ಯಕ್ಷಾಂಗಣದ ಗೌರವ ಉಪಾಧ್ಯಕ್ಷ, ಉದ್ಯಮಿ ಕೆ. ಕೆ. ಶೆಟ್ಟಿ ಅಹ್ಮದ್ ನಗರ, ಸಂಚಾಲಕ ರವೀಂದ್ರ ಶೆಟ್ಟಿ ಉಳಿದೊಟ್ಟು, ಉಪಾಧ್ಯಕ್ಷ ಲ| ಎಂ. ಸುಂದರ ಶೆಟ್ಟಿ ಬೆಟ್ಟಂಪಾಡಿ ಅವರನ್ನು ಶಾಲು, ಹೂಹಾರ, ಸ್ಮರಣಿಕೆ ಮತ್ತು ಅಭಿನಂದನಾ ಫಲಕಗಳೊಂದಿಗೆ ಗಣ್ಯರು ಸನ್ಮಾನಿಸಿದರು. ಹಿರಿಯ ಲೆಕ್ಕ ಪರಿಶೋಧಕ ಎಸ್.ಎಸ್.ನಾಯಕ್ ಮತ್ತು ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಕಾರ್ಯಾಧ್ಯಕ್ಷ ದೇವಿ ಚರಣ್ ಶೆಟ್ಟಿ ಅತಿಥಿಗಳಾಗಿದ್ದರು. ರೋಟರಿ ಜಿಲ್ಲಾ ಗವರ್ನರ್ ವಿಕ್ರಂ ದತ್ತ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿ, ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿ ಮಾತನಾಡಿದರು. ಪದಾಧಿಕಾರಿಗಳಾದ ರವೀಂದ್ರ ರೈ ಕಲ್ಲಿಮಾರು, ನಿವೇದಿತಾ ಎನ್. ಶೆಟ್ಟಿ ಬೆಳ್ಳಿಪ್ಪಾಡಿ ಮತ್ತು ಸುಮಾ ಪ್ರಸಾದ್ ಸನ್ಮಾನ ಪತ್ರ ವಾಚಿಸಿದರು. ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸಮಿತಿಯ ಸುಧಾಕರ ರಾವ್ ಪೇಜಾವರ ವಂದಿಸಿದರು. ಪದಾಧಿಕಾರಿಗಳಾದ ಕರುಣಾಕರ ಶೆಟ್ಟಿ ಪಣಿಯೂರು, ಕೆ. ಲಕ್ಷ್ಮೀನಾರಾಯಣ ರೈ ಹರೇಕಳ, ವಿನುತಾ ಕಾಸರಗೋಡು ಉಪಸ್ಥಿತರಿದ್ದರು.