ಮಂಗಳೂರು, ಜೂ. 29: ಅಸ್ಪೃಶ್ಯತೆ, ಅಸಮಾನತೆ ತಾಂಡವವಾಡುತ್ತಿದ್ದ ಸಂದರ್ಭದಲ್ಲಿ ದಲಿತರ ಉದ್ಧಾರಕ್ಕಾಗಿ ಶ್ರಮಿಸಿದ ಮಹಾತ್ಮ. ಅಲ್ಲದೇ, ದೀನ ದಲಿತರ ಉದ್ಧಾರವಾದರೆ ಮಾತ್ರ ದೇಶದ ಉದ್ಧಾರ ಎಂಬ ಧ್ಯೇಯವಾಕ್ಯದಂತೆ ನಡೆದುಕೊಂಡ ಚೇತನ ಕುದ್ಮುಲ್‌ ರಂಗರಾವ್‌ ಎಂದು ವಿವೇಕ ಚಿಂತನ ಸಮಿತಿ ಅಧ್ಯಕ್ಷ ಕಿರಣ್‌ ಕುಮಾರ್‌ ಕೊಡಿಯಾಲ್‌ಬೈಲ್‌ ಇವರು ಅಭಿಪ್ರಾಯಪಟ್ಟರು. ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಗ್ರಂಥಾಲಯ, ಆಂತರಿಕ ಗುಣಮಟ್ಟ ಖಾತರಿ ಕೋಶ ಹಾಗೂ ವಿವಿಧ ಸ್ನಾತಕೋತ್ತರ ವಿಭಾಗಗಳ ಸಹಯೋಗದಲ್ಲಿ ಆಯೋಜಿಸಿದ್ದ ಮಹಾತ್ಮ ಕುದ್ಮುಲ್‌ ರಂಗರಾವ್‌ ಅವರ 165ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದಲಿತರಿಗೆ ಕೇವಲ ವೃತ್ತಿ ಕೊಡಿಸುವುದರಿಂದ ಅವರ ಬದುಕಿನ ಸ್ಥಿತಿಗತಿ ಬದಲಾಗುವುದಿಲ್ಲ, ಬದಲಾಗಿ ಅವರಿಗೆ ಶಿಕ್ಷಣ ಕೊಡಿಸುವುದರಿಂದ ಮಾತ್ರವೇ ಬದುಕಿನ ಸ್ಥಿತಿಗತಿ ಬದಲಾಗಲು ಸಾಧ್ಯ ಎಂಬುದನ್ನು ಅರಿತು ಅದಕ್ಕೆ ಪೂರಕವಾಗಿ ಕೆಲಸ ಮಾಡಿದರು. ದಲಿತರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ನಿಟ್ಟಿನಲ್ಲಿ ವೃತ್ತಿಪರ ತರಬೇತಿ, ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆ, ವಿದ್ಯಾಭ್ಯಾಸಕ್ಕಾಗಿ ಶಾಲೆ ಹೀಗೆ ಇಡೀ ಸಮುದಾಯದ ಸಮಗ್ರ ಅಭಿವೃದ್ಧಿಗೆ ಶ್ರಮವಹಿಸಿದರು. ಆ ಮೂಲಕ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಾಮಾಜಿಕ ಹಾಗೂ ಶೈಕ್ಷಣಿಕ ಸುಧಾರಕ ಎಂಬ ಕೀರ್ತಿಗಳಿಸಿದವರು ಎಂದು ಕುದ್ಮುಲ್‌ ರಂಗರಾವ್‌ ಅವರ ಸಾಧನೆಗಳನ್ನು ಮೆಲಕು ಹಾಕಿದರು.

ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ, ಸಾಮಾಜಿಕ ಕ್ರಾಂತಿ ರಾಜ್ಯದ ಮಟ್ಟಿಗೆ ಹೊಸದೇನೂ ಅಲ್ಲದಿದ್ದರೂ, ಕರಾವಳಿ ಭಾಗದ ಮಟ್ಟಿಗೆ ಕುದ್ಮುಲ್‌ ರಂಗರಾವ್‌ ಅವರ ಕೊಡುಗೆ ಅವಿಸ್ಮರಣೀಯ. ವೈದಿಕ ಆಚರಣೆಗಳನ್ನು ಮೆಟ್ಟಿನಿಂತು ಸಾಮಾಜಿಕ, ಶೈಕ್ಷಣಿಕ ಕ್ರಾಂತಿ ಮಾಡಿದವರು.

ಮಾನವ ಜಾತಿ ಎಂದರೆ ಎಲ್ಲರೂ ಒಂದೇ ಎಂಬ ಸಂದೇಶ ಸಾರಿದವರು ಎಂದು ಶ್ಲಾಘಿಸಿದರು. ಪ್ರೊ. ಜಯವಂತ ನಾಯಕ್‌ ಪ್ರಾಸ್ಥಾವಿಕವಾಗಿ ಮಾತನಾಡಿದರು. ಡಾ. ಸಂಜಯ್‌ ಅಣ್ಣಾರಾವ್‌, ಗ್ರಂಥಪಾಲಕಿ ಡಾ. ವನಜಾ, ಡಾ. ನಾಗರತ್ನರಾವ್‌, ಡಾ. ನಾಗರತ್ನ ಕೆ. ಎ. ಸೇರಿದಂತೆ ವಿವಿಧ ಸ್ನಾತಕೋತ್ತರ ವಿಭಾಗಗಳ ಉಪನ್ಯಾಸಕರು ಉಪಸ್ಥಿತರಿದ್ದರು.