ಮಂಗಳೂರು,ಜು.2: ಕರ್ನಾಟಕ ಯಕ್ಷಗಾನ ಅಕಾಡೆಮಿಯು ಯಕ್ಷಗಾನ (ತೆಂಕು, ಬಡಗು ಬಡಾಬಡಗು, ಯಕ್ಷಗಾನ ಗೊಂಬೆಯಾಟ), ಮೂಡಲಪಾಯ ಯಕ್ಷಗಾನ, ಕೇಳಿಕೆ, ಘಟ್ಟದಕೋರೆ ಮತ್ತು ತಾಳಮದ್ದಲೆ, ಇತ್ಯಾದಿ ಕಲಾಪ್ರಕಾರಗಳಲ್ಲಿ 2022 ಹಾಗೂ 2023ನೇ ಸಾಲಿನ ಕ್ಯಾಲೆಂಡರ್ ವರ್ಷದಲ್ಲಿ (ದಿನಾಂಕ:01.01.2022 ರಿಂದ 31.12.2022 ಹಾಗೂ ದಿನಾಂಕ:01.01.2023 ರಿಂದ 31.12.2023ರ ಒಳಗೆ) ಪ್ರಕಟಿಸಿರುವ ಪುಸ್ತಕಗಳನ್ನು ಬಹುಮಾನಕ್ಕೆ ಆಯ್ಕೆ ಮಾಡಲು ಲೇಖಕರಿಂದ, ಪ್ರಕಾಶಕರಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಯ್ಕೆಯಾದ ಪುಸ್ತಕಕ್ಕೆ ರೂ. 25,000 ಬಹುಮಾನ ನೀಡಲಾಗುತ್ತದೆ. ಯಕ್ಷಗಾನದ ವಿವಿಧ ಆಯಾಮಗಳ ಬಗ್ಗೆ ಸಂಗೀತ, ಆಹಾರ್ಯ, ಅಭಿನಯ, ಸಂಶೋಧನೆ, ವಿಮರ್ಶೆ, ಜೀವನಚರಿತ್ರೆ, ಪ್ರಸಂಗ ಪುಸ್ತಕ ಇತ್ಯಾದಿ ಪ್ರಕಾರಗಳನ್ನು ಒಳಗೊಂಡ ಪುಸ್ತಕಗಳನ್ನು ಆಯ್ಕೆಮಾಡಲಾಗುವುದು.

ಪುಸ್ತಕಗಳನ್ನು ಕಳುಹಿಸುವವರು ರಿಜಿಸ್ಟ್ರಾರ್, ಕರ್ನಾಟಕ ಯಕ್ಷಗಾನ ಅಕಾಡೆಮಿ, ಕನ್ನಡ ಭವನ, ಎರಡನೇ ಮಹಡಿ, ಚಾಲುಕ್ಯ ವಿಭಾಗ, ಜೆ.ಸಿ.ರಸ್ತೆ, ಬೆಂಗಳೂರು 560002, ಇವರಿಗೆ  ಜುಲೈ 25ರೊಳಗೆ ಅರ್ಜಿಯೊಂದಿಗೆ ಪುಸ್ತಕದ ನಾಲ್ಕು ಪ್ರತಿಗಳನ್ನು ಕಡ್ಡಾಯವಾಗಿ ಕಳುಹಿಸಬೇಕು. ಯಾವುದೇ ಕಾರಣಕ್ಕೂ ಪುಸ್ತಕಗಳನ್ನು ಹಿಂದಿರುಗಿಸಲಾಗುವುದಿಲ್ಲ.

ಅರ್ಜಿಯನ್ನು ಕಚೇರಿಯ ವೇಳೆಯಲ್ಲಿ ಅಕಾಡೆಮಿಯ ಆಯಾ ಜಿಲ್ಲೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 080-22113146 ಸಂಪರ್ಕಿಸುವಂತೆ ಕರ್ನಾಟಕ ಯಕ್ಷಗಾನ ಅಕಾಡೆಮಿಯ ರಿಜಿಸ್ಟ್ರಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.