ಮಂಗಳೂರು: ಮಂಗಳೂರು ಸುರತ್ಕಲ್ ನಲ್ಲಿರುವ ಅತ್ಯಂತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಕರ್ನಾಟಕ (ಎನ್‌ಐಟಿಕೆ)ದ 23ನೇ ಘಟಕೋತ್ಸವ ಸಮಾರಂಭವು ಅದ್ದೂರಿಯಾಗಿ ನಡೆದಿದೆ. ಈ ಕಾರ್ಯಕ್ರಮದಲ್ಲಿ 1,995 ವಿದ್ಯಾರ್ಥಿಗಳಿಗೆ ಪದವಿ ಪತ್ರಗಳನ್ನು ಮತ್ತು ದಾಖಲೆಯ 193 ಪಿಎಚ್‌ಡಿ ಪದವಿಗಳನ್ನೂ ವಿತರಣೆ ಮಾಡಲಾಯಿತು. ಈ ಸಮಾರಂಭವು ಇತ್ತೀಚಿನ ವರ್ಷಗಳಲ್ಲೇ ಅತಿ ಹೆಚ್ಚು ಸಂಖ್ಯೆಯ ಪದವೀಧರರು ಮತ್ತು ಕುಟುಂಬಗಳು ಭಾಗವಹಿಸಿದ ಕಾರ್ಯಕ್ರಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಸಮಾರಂಭದಲ್ಲಿ ಒಟ್ಟು 935 ಬಿ.ಟೆಕ್, 641 ಎಂ.ಟೆಕ್, 23 ಎಂ.ಟೆಕ್ (ರಿಸರ್ಚ್), 66 ಎಂಸಿಎ, 69 ಎಂಬಿಎ, 68 ಎಂ.ಎಸ್ಸಿ ಪದವಿ ವಿದ್ಯಾರ್ಥಿಗಳಿಗೆ ಪದವಿ ಪತ್ರಗಳನ್ನು ನೀಡಲಾಯಿತು.

ಕಾನ್ಫೆಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿ (ಸಿಐಐ) ಸೌತ್ ಇಂಡಿಯಾದ ಮಾಜಿ ಅಧ್ಯಕ್ಷರು, ವೋಲ್ವೋ ಗ್ರೂಪ್ ಇಂಡಿಯಾದ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಕಮಲ್ ಬಾಲಿ ಅವರು ಈ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಅವರು ಈ ಸಂದರ್ಭದಲ್ಲಿ, “ಜಗತ್ತು ಬಹಳ ವೇಗವಾಗಿ ಬದಲಾಗುತ್ತಿದೆ. ದೊಡ್ಡ ದೊಡ್ಡ ಶಕ್ತಿಗಳು ಸ್ಪರ್ಧೆಗೆ ಬಿದ್ದಿವೆ. ಜಾಗತೀಕರಣ ಪ್ರಾದೇಶಿಕತೆ ಕಡೆಗೆ ಹಿಂದಿರುಗುತ್ತಿದೆ. ಎಐ ಅನೇಕ ಕ್ಷೇತ್ರಗಳಲ್ಲಿ ಸಂಚಲನ ಮೂಡಿಸಿದೆ. ಇಂಥಾ ಹೊತ್ತಲ್ಲಿ ನಾವು ಆರ್ಥಿಕವಾಗಿ ಸಮರ್ಥ, ಪರಿಸರ ಸ್ನೇಹಿ, ಒಳಗೊಳ್ಳುವ ಮತ್ತು ನೈತಿಕತೆ ಹೊಂದಿರುವ ‘ಸಮಗ್ರ ಸುಸ್ಥಿರತೆ’ಯ ಬಗ್ಗೆ ಯೋಚಿಸಬೇಕು. ಪದವೀಧರರು ನಾವೀನ್ಯತೆ, ಉದ್ಯಮಶೀಲತೆ, ಗುಣಮಟ್ಟದಲ್ಲಿ ಶ್ರೇಷ್ಠತೆ ಹೊಂದಬೇಕು ಮತ್ತು ಭಾರತೀಯನಾಗಿರುವುದಕ್ಕೆ ಹೆಮ್ಮೆಪಡಬೇಕು. ಶೈಕ್ಷಣಿಕ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ನಿಜವಾದ ನಾಯಕರ ಅಗತ್ಯವಿದೆ. ಎನ್‌ಐಟಿಕೆ ಅಂಥಾ ನಾಯಕರನ್ನು ರೂಪಿಸುವ ಎಲ್ಲಾ ಸಾಮರ್ಥ್ಯವನ್ನು ಹೊಂದಿದೆ” ಎಂದರು.

ಎನ್‌ಐಟಿಕೆ ಸುರತ್ಕಲ್ ನ ನಿರ್ದೇಶಕರಾದ ಪ್ರೊ. ಬಿ. ರವಿ ಅವರು, ಸಂಸ್ಥೆಯ ಮೂಲಸೌಕರ್ಯ, ಶೈಕ್ಷಣಿಕ ಮತ್ತು ಸಂಶೋಧನಾ ಪ್ರಗತಿಯನ್ನು ಸಾರುತ್ತಲೇ, ಬೀಹೈವ್, ಬ್ಲೂಟೊಕೈ, ಡೆಲ್ಹಿವರಿ, ಪ್ರಾಕ್ಟೋ ಮತ್ತು ರೋಬೋಸಾಫ್ಟ್ ಮುಂತಾದ ಎನ್‌ಐಟಿಕೆ ಸ್ಟಾರ್ಟ್‌ಅಪ್‌ಗಳ ಯಶೋಗಾಥೆಯನ್ನು ಕೊಂಡಾಡಿದರು. “ಈ ವರ್ಷ ಎನ್‌ಐಟಿಕೆಗೆ ಮಹತ್ವದ ವರ್ಷವಾಗಿದ್ದು, ಸಂಸ್ಥೆಯು ನಾವೀನ್ಯತೆ ಮತ್ತು ಉದ್ಯಮಶೀಲತೆಯಲ್ಲಿ ಬಹಳ ವೇಗವಾಗಿ ಪ್ರಗತಿ ಸಾಧಿಸಿದೆ. ಹೊಸ ನೀತಿಗಳು, ತರಬೇತಿ ಕಾರ್ಯಕ್ರಮಗಳು, ಪೇಟೆಂಟ್‌ಗಳು, ತಂತ್ರಜ್ಞಾನ ಲೈಸೆನ್ಸ್ ಗಳು ಹೀಗೆ ಅನೇಕ ಸಾಧನೆಗಳು ಸಾಧ್ಯವಾಗಿವೆ” ಎಂದು ಹೇಳಿದರು. ಬಿಓಜಿ ಅಧ್ಯಕ್ಷ ಬಿ.ವಿ.ಆರ್. ಮೋಹನ್ ರೆಡ್ಡಿ ಮತ್ತು ಬಿಓಜಿ ಸದಸ್ಯರು, ಸೆನೇಟರ್‌ಗಳು, ಡೀನ್‌ಗಳು, ಎಚ್ಓಡಿಗಳು, ಅಧ್ಯಾಪಕರು ಮತ್ತು ಸಿಬ್ಬಂದಿಗಳಿಗೆ ಬೆಂಬಲ ನೀಡಿರುವುದಕ್ಕೆ ಧನ್ಯವಾದಗಳನ್ನು ಸಲ್ಲಿಸಿದರು.


10 ಬಿ.ಟೆಕ್ ಮತ್ತು 31 ಸ್ನಾತಕೋತ್ತರ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಗಾಗಿ ಚಿನ್ನದ ಪದಕಗಳು ಮತ್ತು ಪ್ರಮುಖ ಸಂಸ್ಥೆಗಳ ಪ್ರಾಯೋಜಿತ ಪದಕಗಳನ್ನು ಪಡೆದರು. 1,995ರಲ್ಲಿ 1,455 ಪದವೀಧರರು ಕಾರ್ಯಕ್ರಮದಲ್ಲಿ ವೈಯಕ್ತಿಕವಾಗಿ ಭಾಗವಹಿಸಿದರು. 1,885 ಪೋಷಕರು ಇದ್ದರು. ಹೀಗಾಗಿ ಪ್ರಧಾನ ವೇದಿಕೆಯಲ್ಲಿ ಎಲ್ಲಾ ಪದವಿ ಪತ್ರ ವಿತರಣೆ ಮಾಡುವುದು ಸವಾಲಾಗಿತ್ತು. ಅದಕ್ಕಾಗಿ ಎನ್‌ಐಟಿಕೆ ಇದೇ ಮೊದಲ ಬಾರಿಗೆ ನಾಲ್ಕು ಸಮಾನಾಂತರ ಮಿನಿ-ವೇದಿಕೆಗಳನ್ನು ರಚಿಸಿತ್ತು. ಡೀನ್‌ಗಳು ಮತ್ತು ಎಚ್ಓಡಿಗಳು ಏಕಕಾಲದಲ್ಲಿ ಪದವಿ ಪತ್ರ ವಿತರಣೆ ಮಾಜುವಂತೆ ವ್ಯವಸ್ಥೆ ಮಾಡಲಾಯಿತು. ಈ ಮಾದರಿಯಿಂದಾಗಿ ಒಂದು ಗಂಟೆಯೊಳಗೇ ಎಲ್ಲಾ ಪದವಿ ಪತ್ರಗಳನ್ನು ವಿತರಿಸಲಾಯಿತು ಮತ್ತು ನೆರೆದವರ ಮೆಚ್ಚುಗೆ ದೊರೆತಿತು.

ಎನ್‌ಐಟಿಕೆ ಅಲುಮ್ನಿ ಅಸೋಸಿಯೇಷನ್ ನ ಅಧ್ಯಕ್ಷರಾದ ನಿರಂಜನ್ ಮಹಾಬಲಪ್ಪ ಮಾತನಾಡಿ, “ಘಟಕೋತ್ಸವವನ್ನು ಅದ್ಭುತವಾಗಿ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ 2025 ಬ್ಯಾಚ್ ಅನ್ನು ಎನ್‌ಐಟಿಕೆ ಹಳೆ ವಿದ್ಯಾರ್ಥಿಗಳ ಕುಟುಂಬಕ್ಕೆ ಸ್ವಾಗತಿಸಲು ಹೆಮ್ಮೆ ಪಡುತ್ತೇನೆ” ಎಂದರು.