ಮಂಗಳೂರು: ಕಾಲೇಜುಗಳಲ್ಲಿ ಮುಕ್ತ ವಾಚನಾಲಯ ಎನ್ನುವ ನೂತನ ಪರಿಕಲ್ಪನೆ ಅನುಕರಣಾರ್ಹ. ಪ್ರತಿನಿತ್ಯ ಗ್ರಂಥಾಲಯದ ಸದ್ಬಳಕೆ ಮಾಡುವುದರಿಂದ ವಿದ್ಯಾರ್ಥಿಗಳಿಗೆ  ಜ್ಞಾನದ ಜೊತೆಗೆ ಶಿಸ್ತು ಕೂಡಾ ಲಭ್ಯವಾಗುತ್ತದೆ ಎಂದು ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ ಹೇಳಿದರು.

ಅವರು ನಗರದ ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ, ಗ್ರಂಥಾಲಯ ಹಾಗೂ ಕನ್ನಡ ವಿಭಾಗ ಸಂಯುಕ್ತವಾಗಿ ಏರ್ಪಡಿಸಿದ ರಾಷ್ಟ್ರೀಯ ಗ್ರಂಥಾಲಯ ದಿನಾಚರಣೆ ಮತ್ತು  ಹೊಸದಾಗಿ ಪ್ರಾರಂಭಿಸಲಾದ ಮುಕ್ತ ವಾಚನಾಲಯವನ್ನು ಉದ್ಘಾಟಿಸಿ ಮಾತನಾಡಿದರು. 

ಇಂಟರ್ನೆಟ್ ಇಲ್ಲದ ಸಂದರ್ಭದಲ್ಲಿ ಎಲ್ಲರೂ ಹೆಚ್ಚಾಗಿ ಗ್ರಂಥಾಲಯವನ್ನು ಅವಲಂಬಿಸುತ್ತಿದ್ದುದರಿಂದ ನಮ್ಮ ಜ್ಞಾನ ಕೌಶಲ್ಯ ವೃದ್ಧಿಗೆ ಗ್ರಂಥಾಲಯ ಬಹಳ ಮುಖ್ಯ ಪಾತ್ರ ವಹಿಸುತ್ತಿತ್ತು. ನಾವು ಅತಿಯಾಗಿ ಪುಸ್ತಕವನ್ನು ಉಪಯೋಗಿಸಿಕೊಂಡಾಗ ನಮ್ಮ ಜ್ಞಾನ ಮತ್ತೊಂದು ಸ್ತರಕ್ಕೆ ಏರಲು ಸಾಧ್ಯ ಎಂದು ಅವರು ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ವಿಶ್ರಾಂತ ಪ್ರಾಧ್ಯಾಪಕ ಹಾಗೂ ಲೇಖಕ ಡಾ. ನರೇಂದ್ರ ರೈ ದೇರ್ಲ ಮಾತನಾಡಿ, ಇಂದಿನ ಡಿಜಿಟಲ್ ಯುಗದಲ್ಲಿ ಪುಸ್ತಕಗಳು ಹಾಗೂ ಓದಿನ ಮಹತ್ವ ಮತ್ತು ಅಗತ್ಯದ ಬಗ್ಗೆ ವಿವರಿಸುತ್ತಾ ಓದು ನಮ್ಮಲ್ಲಿ ಸೂಕ್ಷ್ಮತೆ, ಸಹನೆ, ಸೃಜನಶೀಲತೆ ಮತ್ತು ಬಹುತ್ವದ ಬಗ್ಗೆ ಅರಿವನ್ನು ಮೂಡಿಸುತ್ತದೆ. ಈ ಗುಣಗಳಿಲ್ಲದ ಯುವಜನತೆಯ ಭವಿಷ್ಯದ ಬಗ್ಗೆ ನಾವು ಭಯಪಡಬೇಕಿದೆ ಎಂದರು.

ವಿಶ್ವವಿದ್ಯಾನಿಲಯ ಕಾಲೇಜಿನ ಗ್ರಂಥಪಾಲಕಿ ಡಾ.ವನಜಾ ಅವರು ಗ್ರಂಥಾಲಯ  ವಿಜ್ಞಾನ ಪಿತಾಮಹ ಎಸ್.ಆರ್.ರಂಗನಾಥನ್ ಅವರ ಜೀವನ ಮತ್ತು ಸಾಧನೆಗಳ ಬಗ್ಗೆ ಮಾತನಾಡಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಜಯಕರ ಭಂಡಾರಿ ಎಂ. ಅವರು ನೂತನವಾಗಿ ಪ್ರಾರಂಭಿಸಲಾಗಿರುವ ಮುಕ್ತ ವಾಚನಾಲಯದ ಸದುಪಯೋಗ ಪಡೆಯಲು ವಿದ್ಯಾರ್ಥಿಗಳಿಗೆ ಸೂಚಿಸಿದರು. ವಿಶಾಲವಾದ ತೆರೆದ ಅಂಗಣದಲ್ಲಿ ಪ್ರಾರಂಭಿಸಲಾಗಿರುವ ಮುಕ್ತ ವಾಚನಾಲಯದಲ್ಲಿ ಸುಮಾರು 15 ವಿವಿಧ ಭಾಷೆಗಳ ದಿನಪತ್ರಿಕೆಗಳು, 25ಕ್ಕೂ ಹೆಚ್ಚು ನಿಯತಕಾಲಿಕೆಗಳು ಲಭ್ಯವಿದ್ದು ಇದನ್ನು ವಿದ್ಯಾರ್ಥಿಗಳು ಬಿಡುವಿನ ವೇಳೆಯಲ್ಲಿ ಬಳಸಬಹುದಾಗಿರುತ್ತದೆ ಎಂದು ಹೇಳಿದರು.

ಐಕ್ಯೂಎಸಿ ಸಂಯೋಜಕ ದೇವಿಪ್ರಸಾದ್, ಸಹ ಸಂಯೋಜಕಿ ಡಾ.ಜ್ಯೋತಿಪ್ರಿಯಾ, ಕಾಲೇಜಿನ ಗ್ರಂಥಪಾಲಕಿ ಕುಮಾರಿ ಉಮಾಎ.ಬಿ. ಮತ್ತು ಇತರ ಬೋಧಕರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ರಿಶಿಕಾ ಪ್ರಾರ್ಥಿಸಿದರು.  ಸೃಷ್ಟಿ ಸ್ವಾಗತಿಸಿ, ಭೀಮವ್ವ ವಂದಿಸಿದರು. ರಾಜೇಶ್ವರಿ ಕಾರ್ಯಕ್ರಮ ನಿರೂಪಿದರು.