ಉಜಿರೆ: ವಿದ್ಯಾರ್ಥಿಗಳು ತಮ್ಮ ತಾಯಿ-ತಂದೆ ಹಾಗೂ ಗುರು-ಹಿರಿಯರಿಂದ ಮಾರ್ಗದರ್ಶನ ಮತ್ತು ಪ್ರೇರಣೆ ಪಡೆದು ದೃಢಸಂಕಲ್ಪ ಮತ್ತು ಪ್ರಬಲ ಇಚ್ಛಾಶಕ್ತಿಯೊಂದಿಗೆ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಹಿರಿಯ ವಿದ್ವಾಂಸ ಎನ್.ಆರ್. ದಾಮೋದರ ಶರ್ಮ ಬಾರ್ಕೂರು ಹೇಳಿದರು.

ಅವರು ಬುಧವಾರ ಉಜಿರೆಯಲ್ಲಿ  ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಚಟುವಟಿಕೆಗಳ ಉದ್ಘಾಟನಾ ಸಮಾರಮಭದಲ್ಲಿ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ರೂಪಿಸಿದ “ಚಿಗುರು” ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಸಮಾಜದ ಅಮೂಲ್ಯ ಮಾನವ ಸಂಪನ್ಮೂಲವಾಗಿದ್ದು, ಆತ್ಮವಿಶ್ವಾಸದ ಮೂಲಕ ಆದರ್ಶ ನಾಯಕತ್ವ ಗುಣದೊಂದಿಗೆ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು. ನಮ್ಮ ಸನಾತನಧರ್ಮ, ಆಧ್ಯಾತ್ಮ ಮತ್ತು ಸಂಸ್ಕøತಿಯ ಭದ್ರ ಬುನಾದಿಯಲ್ಲಿ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಎಲ್ಲಾ ಕಡೆಗಳಿಂದಲೂ ಉತ್ತಮ ವಿಚಾರಗಳನ್ನು ಸ್ವೀಕರಿಸಿ, ಸದಾ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಭವಿಷ್ಯದ ಬಗ್ಯೆ ಸುಂದರ ಕನಸನ್ನು ಕಂಡು ಸತತ ಅಧ್ಯಯನ ಹಾಗೂ ಪ್ರಯತ್ನದಿಂದ ವಿಶ್ವಮಾನವರಾಗಿ ಸಾರ್ಥಕ ಜೀವನ ನಡೆಸಬೇಕು ಎಂದು ಹೇಳಿ ಶುಭ ಹಾರೈಸಿದರು.

ವಿದ್ಯಾರ್ಥಿಸಂಘದ ಚಟುವಟಿಕೆಗಳನ್ನು ಉದ್ಘಾಟಿಸಿದ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ. ಎಸ್. ಸತೀಶ್ಚಂದ್ರ ಮಾತನಾಡಿ, ವಿದ್ಯಾರ್ಥಿಗಳು ಕಾಲೇಜಿನಲ್ಲಿ ಸಿಗುವ ಎಲ್ಲಾ ಅವಕಾಶಗಳ ಸದುಪಯೋಗ ಪಡೆದು ಜ್ಞಾನದೊಂದಿಗೆ ಸಾಮಾನ್ಯ ಜ್ಞಾನ, ಉತ್ತಮ ಹವ್ಯಾಸಗಳು ಹಾಗೂ ಸೃಜನಶೀಲ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಿ. ವಿಶ್ವನಾಥ್, ಕಾಲೇಜಿನ ಎಲ್ಲಾ ಸವಲತ್ತುಗಳ ಸದುಪಯೋಗ ಪಡೆದು ಸಮಾಜದ ಸಭ್ಯ ಸುಸಂಸ್ಕೃತ ನಾಗರಿಕರಾಗಿ ಸಾರ್ಥಕ ಜೀವನ ನಡೆಸಬೇಕು ಎಂದು ಹೇಳಿದರು.

ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಸಂಯೋಜಕ ಶ್ರೇಯಸ್ ಬಿ., ಸ್ವಾಗತಿಸಿದರು. ವಿದ್ಯಾರ್ಥಿ ಸಂಯೋಜಕ ಅಂತಿಮ ಬಿ.ಎ. ತರಗತಿಯ ಚಂದನ್ ಧನ್ಯವಾದವಿತ್ತರು.

ಧರಿತ್ರಿ ಭಿಡೆ ಮತ್ತು ಜಯಸೂರ್ಯ ಕಾರ್ಯಕ್ರಮ ನಿರ್ವಹಿಸಿದರು.