ಮಂಗಳೂರು: ಸ್ಥಳೀಯ ಕೊಲ್ಯ ಸಮೀಪದ ಕೋಟೆಕಾರ್ ಸ್ವಾಮಿ ಅಯ್ಯಪ್ಪ ಮಂದಿರದಲ್ಲಿ 50ನೇ ವಾರ್ಷಿಕೋತ್ಸವ ಹಾಗೂ ದೀಪೋತ್ಸವದ ಸಂದರ್ಭದಲ್ಲಿ ದ.ಕ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಸಹಯೋಗದಲ್ಲಿ ದಿನಾಂಕ ನವೆಂಬರ್ 30 ರಂದು ಬಹುಭಾಷಾ ಸಾಹಿತ್ಯ ಗೋಷ್ಠಿ ಹಾಗೂ ಕವಿಗೋಷ್ಠಿಗಳು ವಿಜೃಂಭಣೆಯಿಂದ ಜರಗಿದುವು.
ಸಂಚಾಲಕ ವೆಂಕಟೇಶ್ ಗಟ್ಟಿಯವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವು ಗುರುಸ್ವಾಮಿ ಲಿಂಗಪ್ಪ ಗಟ್ಟಿಯವರಿಂದ ಶಾಲು ಹೊದಿದುವ ಮೂಲಕ ಉದ್ಘಾಟನೆ ಗೊಂಡಿತು. ಅವರು ಮಾತನಾಡಿ ಸಾಹಿತ್ಯವು ಜನರ ಬುದ್ಧಿಯ ಬೆಳವಣಿಗೆಗೆ ಸಹಕಾರಿಯಾಗಿದ್ದು ಇಲ್ಲಿನ ಮಂದಿರದಲ್ಲಿ ಇಂತಹ ಕಾರ್ಯಕ್ರಮ ನಡೆಸಲು ಸದಾ ಅವಕಾಶವಿದೆ ಎಂದರು.
ಸಾಹಿತ್ಯ ಗೋಷ್ಠಿಯ ಮುಖಾಂತರ ಸಾಹಿತ್ಯದ ಬಗೆಗೆ ಉಪಾನ್ಯಾಸ ಏರ್ಪಡಿಸಲಾಗಿ ಮಂಗಳೂರು ಕ.ಸಾ.ಪ ಕಾರ್ಯಕಾರೀ ಬಳಗದ ಪ್ರಧಾನ ಕಾರ್ಯದರ್ಶಿ ಗಣೇಶ ಜೀ, ಮಂಗಳೂರಿನ ಕಣಚ್ಚೂರು ಹಾಗೂ ಮಂಗಳಾ ಆಸ್ಪತ್ರೆಯ ವೈದ್ಯ ಡಾ ಸುರೇಶ ನೆಗಳಗುಳಿ ಹಾಗೂ ಮಂಗಳೂರು ಚು.ಸಾ.ಪ ಅಧ್ಯಕ್ಷರು ಸಾಹಿತ್ಯದ ವಿವಿಧ ಮಜಲುಗಳನ್ನು ವಿಶ್ಲೇಷಿಸಿದರು.
ಈ ನಡುವೆ ವೆಂಕಟೇಶ್ ಗಟ್ಟಿಯವರನ್ನು ಜಿಲ್ಲಾ ಚುಸಾಪ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಸಭಾಧ್ಯಕ್ಷತೆ ವಹಿಸಿದ್ದ ಶ್ರೀ ಗೋಪಾಲಕೃಷ್ಣ ಶಾಸ್ತ್ರಿಯವರು ಚುಟುಕು ಸಾಹಿತ್ಯ ಬೆಳೆದು ಬಂದ ಹಾದಿಯನ್ನು ಸವಿವರವಾಗಿ ವಿಶ್ಲೇಷಿಸಿದರು.
ಅನಂತರ ಡಾ ಸುರೇಶ ನೆಗಳಗುಳಿಯವರ ಅದ್ಯಕ್ಷತೆಯಲ್ಲಿ ನಡೆದ ಬಹುಭಾಷಾ ಕವಿಗೋಷ್ಣಿಯಲ್ಲಿ ಕವಿಗಳಾದ ಮನ್ಸೂರ್ ಮುಲ್ಕಿ, ಶಿವಪ್ರಸಾದ್ ಕೊಕ್ಕಡ, ಅರ್ಚನಾ ಬಂಗೇರ, ಸುಮಂಗಲಾ ದಿನೇಶ್, ಸೌಮ್ಯಾ ಆರ್ ಶೆಟ್ಟಿ,ಎಸ್ ಕೆ ಕುಂಪಲ, ನಿಶಾನ್ ಅಂಚನ್, ಗಣೇಶ್ ಜೀ, ಗೋಪಾಲ ಕೃಷ್ಣ ಶಾಸ್ತ್ರಿ, ವೆಂಕಟೇಶ ಗಟ್ಟಿ, ಮತ್ತಿತರರು ಸ್ವರಚಿತ ಕವನ ವಾಚಿಸಿದರು.
ಕವಿಗೋಷ್ಠಿಯ ಮುಕ್ತಾಯದಲ್ಲಿ ಡಾ ನೆಗಳಗುಳಿಯವರು ಚುಟುಕಿನಿಂದ ಎಲ್ಲಾ ಸಾಹಿತ್ಯವು ಗಂಗಾಮೂಲದ ತರಹ ಉದಿಸಿ ಕಡಲಾಗುತ್ತದೆ ಎನ್ನುತ್ತಾ ಒಂದೇ ಭಾವದ ಹಲವು ಕಾವ್ಯ ಪ್ರಕಾರಗಳನ್ನು ವಾಚಿಸಿದರು.
ಅಯ್ಯಪ್ಪ ಮಂದಿರ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಶೆಟ್ಟಿಯವರು ಸ್ವಾಗತಿಸಿ ಅರ್ಚನಾ ಕುಂಪಲ ನಿರೂಪಿಸಿದ ಈ ಕಾರ್ಯಕ್ರಮದಲ್ಲಿ ಅಯ್ಯಪ್ಪ ಸೆವಾ ಸಮಿತಿ ಅಧ್ಯಕ್ಷ ಶ್ರೀಧರ ಶೆಟ್ಟಿ ಲಕ್ಷ್ಮಣ ಕಟ್ಟೀಮನಿ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು.
ವೆಂಕಟೇಶ ಗಟ್ಟಿಯವರ ಧನ್ಯವಾದ ಸಮರ್ಪಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.