ಮೂಡುಬಿದಿರೆ: ಎ.ಜಿ. ಸೋನ್ಸ್ ಐ.ಟಿ.ಐ. ನಲ್ಲಿ ಕಳೆದ 35 ವರ್ಷಗಳಿಂದ ಎಲೆಕ್ಟ್ರಿಕಲ್ ವಿಭಾಗದಲ್ಲಿ ತರಬೇತುದಾರರಾಗಿ ಕರ್ತವ್ಯ ನಿರ್ವಹಿಸಿ ನ. 30ರಂದು ವಯೋಸಹಜ ನಿವೃತ್ತಿ ಹೊಂದಿರುವ ರಾಜೇಂದ್ರ ಕುಮಾರ್ ಕೆ. ಅವರನ್ನು ಸನ್ಮಾನಿಸಿ ಬೀಳ್ಕೊಡುವ ಕಾರ್ಯಕ್ರಮವು ಎ.ಜಿ. ಸೋನ್ಸ್ ಐ.ಟಿ.ಐ.ಯ ಸಭಾಂಗಣದಲ್ಲಿ ಜರಗಿತು.
ಈ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಹಾವೀರ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಕೆ. ಅಭಯಚಂದ್ರ ಜೈನ್ ಅವರು ನಿವೃತ್ತ ರಾಜೇಂದ್ರ ಕುಮಾರ್ ಅವರು ಸಂಸ್ಥೆಗೆ ತರಬೇತುದಾರರಾಗಿ ನೀಡಿರುವ ಸೇವೆಯನ್ನು ಸ್ಮರಿಸಿ, ತಾಂತ್ರಿಕ ಅಧ್ಯಯನ ವಿಭಾಗದಲ್ಲಿ ಐ.ಟಿ.ಐ. ಕೋರ್ಸ್ ಎಂಬುದು ಅತೀ ಚಿಕ್ಕ ಶಿಕ್ಷಣವಾದರೂ ಇಲ್ಲಿ ಕಲಿತವರಿಗೆ ಮುಂದಿನ ಜೀವನದಲ್ಲಿ ಉತ್ತಮ ತಾಂತ್ರಿಕ ಕೌಶಲ್ಯ ಮೆರೆಯಲು ಅವಕಾಶವಿದೆ ಎಂದರು.
ಶ್ರೀ ಮಹಾವೀರ ಕಾಲೇಜು ಆಡಳಿತ ಮಂಡಳಿಯ ಉಪಾಧ್ಯಕ್ಷ ಎಸ್. ಡಿ. ಸಂಪತ್ ಸಾಮ್ರಾಜ್ಯ, ಶ್ರೀ ಮಹಾವೀರ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ರಾಧಾಕೃಷ್ಣ ನಿವೃತ್ತರನ್ನು ಅಭಿನಂದಿಸಿ ಮಾತನಾಡಿದರು.
ನಿವೃತ್ತ ರಾಜೇಂದ್ರ ಕುಮಾರ್ ಕೆ. ಮತ್ತು ಸ್ವಪ್ನಾ ಬಿ.ಎಂ. ದಂಪತಿಗಳನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ರಾಜೇಂದ್ರ ಕುಮಾರ್ ಅವರ ಪುತ್ರಿ ಹಿತ, ಆಡಳಿತ ಮಂಡಳಿಯ ಸದಸ್ಯರಾದ ಕೆ.ಆರ್. ಪಂಡಿತ್, ಸಿ. ಎಚ್. ಅಬ್ದುಲ್ ಗಫೂರ್, ಪಿ. ರಾಮಪ್ರಸಾದ್ ಭಟ್, ವೆಂಕಟೇಶ ಕಾಮತ್ ಉಪಸ್ಥಿತರಿದ್ದರು.
ಶಿರ್ತಾಡಿಯ ಭುವನಜ್ಯೋತಿ ವಿದ್ಯಾಸಂಸ್ಥೆಯ ವತಿಯಿಂದ ನೀಡಲಾಗಿರುವ ವಿದ್ಯಾರ್ಥಿ ವೇತನವನ್ನು ಸಂಸ್ಥೆಯ 5 ಮಂದಿ ವಿದ್ಯಾರ್ಥಿಗಳಿಗೆ ಅಭಯಚಂದ್ರ ಜೈನ್ ಅವರು ವಿತರಿಸಿದರು. ಸಂಸ್ಥೆಯ ಪ್ರಾಂಶುಪಾಲ ಶ್ರೀಕಾಂತ ಹೊಳ್ಳ ಸ್ವಾಗತಿಸಿದರು. ಸುಶ್ಮಿತಾ ನಿವೃತ್ತ ರಾಜೇಂದ್ರ ಕುಮಾರ್ ಅವರನ್ನು ಪರಿಚಯಿಸಿದರು. ವಿದ್ಯಾರ್ಥಿಗಳಾದ ವಿನೀತ್, ಪ್ರಜ್ವಲ್, ನಿಹಾಲ್ ಪ್ರಾರ್ಥಿಸಿದರು. ಶಿವಪ್ರಸಾದ್ ಹೆಗ್ಡೆ ನಿರೂಪಿಸಿದ ಕಾರ್ಯಕ್ರಮದಲ್ಲಿ ರಾಮಚಂದ್ರ ಆಚಾರ್ಯ ವಂದಿಸಿದರು.