ಮಂಗಳೂರಿನ ಆರೋಹಣಂ ಸಂಗೀತ ಶಾಲೆಯ ದಶಮಾನೋತ್ಸವದ ಅಂಗವಾಗಿ, ಎರಡು ದಿನಗಳ ಸಂಗೀತ ಮಹೋತ್ಸವ 'ದಶಕ ಸಮರ್ಪಣಂ' ಕಾರ್ಯಕ್ರಮ ನ. 22 ಮತ್ತು 23 ರಂದು ನಗರದ ಕೊಡಿಯಾಲ್ ಬೈಲ್ ನ ಶಾರದಾ ವಿದ್ಯಾಲಯದ ಆಡಿಟೋರಿಯಂನಲ್ಲಿ ಜರುಗಲಿದೆ ಎಂದು ಸಂಗೀತ ಸಂಸ್ಥೆಯ ಉಪಾಧ್ಯಕ್ಷ ಮಂಜುನಾಥ್ ಭಟ್ ತಿಳಿಸಿದ್ದಾರೆ.

ಪ್ರೆಸ್ ಕ್ಲಬ್ ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಶಮಾನೋತ್ಸವದ ಅಂಗವಾಗಿ ಕಳೆದ ಒಂದು ವರ್ಷದ ಅವಧಿಯಲ್ಲಿ ಸಂಸ್ಥೆಯು ಒಂಬತ್ತು ಸರಣಿ ಕಾರ್ಯಕ್ರಮಗಳು, ಸಂಗೀತಾಸಕ್ತರಿಗಾಗಿ ಕಾರ್ಯಾಗಾರಗಳು ಹಾಗೂ ವಿದ್ಯಾರ್ಥಿಗಳ ಪ್ರದರ್ಶನಗಳನ್ನು ಯಶಸ್ವಿಯಾಗಿ ಆಯೋಜಿಸಿದೆ ಎಂದರು.
ನ.22 ಮಧ್ಯಾಹ್ನ 1.30ಕ್ಕೆ ಶಾರದಾ ವಿದ್ಯಾಲಯದ ಪ್ರಾಚಾರ್ಯರಾದ ದಯಾನಂದ ಕಟೀಲ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಬಳಿಕ ವಿದ್ಯಾರ್ಥಿಗಳ ಸಂಗೀತ ಪ್ರದರ್ಶನ, ಪಲ್ಲವಿ ಪರ್ವದ ಅಂಗವಾಗಿ ಹಿರಿಯ ವಿದ್ಯಾರ್ಥಿಗಳ 'ರಾಗಂ-ತಾನಂ -ಪಲ್ಲವಿ' ಪ್ರದರ್ಶನಗಳು ನಡೆಯಲಿವೆ. ಸಂಜೆ 6 ಗಂಟೆಗೆ 'ವೀಣಾ ವೇಣು' ವಯಲಿನ್- ವಿಶೇಷ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದರು.
ನ. 23 ರಂದು ಬೆಳಗ್ಗೆ 8.30ಕ್ಕೆ ವಿದ್ಯಾರ್ಥಿಗಳ ಗಾನ ಪ್ರದರ್ಶನಗಳಿಂದ ಕಾರ್ಯಕ್ರಮ ಆರಂಭಗೊಳ್ಳಲಿದ್ದು ನಂತರ 'ಸ್ವರಾರೋಹಣಂ' ಕಾರ್ಯಕ್ರಮವನ್ನು ಕಲೈಮಾಮಣಿ ಡಾ.ಆರ್. ಸುರ್ಯಪ್ರಕಾಶ್ ನಿರ್ದೇಶಿಸಲಿದ್ದಾರೆ. ಸಂಜೆ ಸಭಾಕಾರ್ಯಕ್ರಮದಲ್ಲಿ ಪದ್ಮಶ್ರೀ ಡಾ.ಗಿರೀಶ್ ಭಾರದ್ವಾಜ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅತಿಥಿಗಳಾಗಿ ಗಣೇಶ್ ನಾಯಕ್, ಮಂಜುನಾಥ್ ಭಟ್, ಆದಿತ್ಯ ಕಲ್ಲುರಾಯ ಭಾಗವಹಿಸಲಿದ್ದು, ಆರೋಹಣಂ ಸಂಗೀತ ಶಾಲೆಯ ನಿರ್ದೇಶಕರಾದ ಡಾ.ಅನೀಶ್ ವಿ. ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಸಂದರ್ಭದಲ್ಲಿ 'ಸ್ವರಾ-ಸಿಂಕ್' ಎಂಬ ಹೊಸ ದೇವರನಾಮ ಪ್ರೀ- ರೆಕಾರ್ಡೆಡ್ ಕೋರ್ಸ್ ನ ಅನಾವರಣ ಹಾಗೂ ಸಂಸ್ಥೆಯ ನೂತನ ವೆಬ್‌ಸೈಟ್ ಬಿಡುಗಡೆಗೊಳ್ಳಲಿದೆ. ಹಾಗೂ ಹತ್ತು ಮಂದಿ ಸಂಗೀತ ಸಾಧಕರಿಗೆ ಸನ್ಮಾನ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ
ಸಂಜೆ ಕಲೈಮಾಮಣಿ ಡಾ.ಆರ್.ಸುರ್ಯಪ್ರಕಾಶ್ ಇವರಿಂದ ಪ್ರಮುಖ ಕಚೇರಿ ನಡೆಯಲಿದೆ ಎಂದರು.
ಸಂಗೀತಾಭಿಮಾನಿಗಳು, ಪೋಷಕರು ಹಾಗೂ ಕಲಾಸಕ್ತರು ಈ ದ್ವಿದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ದಶಮಾನೋತ್ಸವದ ಸಂಭ್ರಮವನ್ನು ಹಂಚಿಕೊಳ್ಳುವಂತೆ ಆರೋಹಣ ಸಂಗೀತ ಶಾಲೆಯ ಅಧ್ಯಕ್ಷರಾದ ಬಿ.ಗಣೇಶ್ ನಾಯಕ್ ವಿನಂತಿಸಿದರು.
ಆರೋಹಣಂ ಸಂಗೀತ ಶಾಲೆಯ ಕಾರ್ಯದರ್ಶಿ ಚಿನ್ಮಯಿ ವಿ.ಭಟ್, ಜತೆ ಕಾರ್ಯದರ್ಶಿ ಸಹನಾ ಎಂ.ಭಟ್, ಸಲಹಾ ಸಮಿತಿಯ ಹವ್ಯಶ್ರೀ ಕೆ.ಟಿ. ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.