ಮಂಗಳೂರು: ತುಳು ಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹೊರನಾಡಿನ ತುಳುವರು ಗಣನೀಯ ಕೊಡುಗೆ ನೀಡಿದ್ದಾರೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರು ಹೇಳಿದರು. ಅವರು ಭದ್ರಾವತಿಯ ಬಂಟರ ಭವನದಲ್ಲಿ ಶುಕ್ರವಾರ ಸಂಜೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ತುಳು ಕೂಟ ಭದ್ರಾವತಿ ಆಯೋಜಿಸಿದ ತುಳು ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು. 

ತುಳು ಭಾಷೆ ಹಾಗೂ ಸಂಸ್ಕೃತಿ  ಎಲ್ಲರನ್ನೂ ಜೊತೆಯಾಗಿ ಒಳಗೊಳ್ಳುವ ಗುಣಧರ್ಮವನ್ನು ಹೊಂದಿದೆ. ಈ ಕಾರಣದಿಂದಾಗಿ ಹೊರನಾಡಿನಲ್ಲಿ ತುಳುವರು ಸಾಮರಸ್ಯ ಹಾಗೂ ಶಾಂತಿಯ ರಾಯಭಾರಿಗಳಾಗಿದ್ದುಕೊಂಡು ತುಳುವನ್ನು ಉಳಿಸಿ ಬೆಳೆಸುವ ಮಹತ್ಕಾರ್ಯವನ್ನು ನಡೆಸಿಕೊಂಡು ಬರುತ್ತಿದ್ದಾರೆ ಎಂದು ತಾರಾನಾಥ್ ಗಟ್ಟಿ ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕರ್ನಾಟಕ ಸರಕಾರದ ಕೆ.ಆರ್.ಐ.ಡಿ.ಎಲ್ ಅಧ್ಯಕ್ಷ ಹಾಗೂ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ ಅವರು ಮಾತನಾಡಿ, ಭದ್ರಾವತಿಯ ಅಭಿವೃದ್ಧಿ ಹಾಗೂ ಬೆಳವಣಿಗೆಯಲ್ಲಿ ತುಳುವರ ಪರಿಶ್ರಮ ಅಪಾರವಾದದ್ದು ಎಂದು ಶ್ಲಾಘಿಸಿದರು. ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಿಸಬೇಕೆಂಬ ಪ್ರಸ್ತಾಪವನ್ನು ತಾನು ಬೆಂಬಲಿಸುವುದಾಗಿ ಅವರು ಹೇಳಿದರು. ಇದೇ ವೇಳೆ ಭದ್ರಾವತಿ ತುಳು ಸಂಘದ ಸಮಾಜಮುಖಿ ಕಾರ್ಯಕ್ರಮಕ್ಕೆ ತಾನು ಐದು ಲಕ್ಷ ರೂಪಾಯಿಗಳ ದೇಣಿಗೆ ನೀಡುವುದಾಗಿ ಶಾಸಕ ಬಿ.ಕೆ.ಸಂಗಮೇಶ್ವರ ಅವರು ಪ್ರಕಟಿಸಿದರು. 

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಅಖಿಲ ಭಾರತ ತುಳು  ಒಕ್ಕೂಟದ ಉಪಾಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಅವರನ್ನು ಸನ್ಮಾನಿಸಲಾಯಿತು. ಭದ್ರಾವತಿ ತುಳು ಕೂಟದ ಅಧ್ಯಕ್ಷ ಪಿ.ಸುಧಾಕರ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ನಾರಾಯಣ ಪೂಜಾರಿ, ಸುಬ್ಬಣ್ಣ ರೈ , ಡಾ.ವೈ.ಆನಂದ್ ಉಪಸ್ಥಿತರಿದ್ದರು.

ವಂದನೀಯ ಪ್ರಕಾಶ್ ಪಿಂಟೋ ಸ್ವಾಗತಿಸಿದರು,  ಶ್ಯಾಮರಾಯ ಆಚಾರ್ ಕಾರ್ಯಕ್ರಮ ನಿರ್ವಹಿಸಿದರು. ಪ್ರಧಾನ ಕಾರ್ಯದರ್ಶಿ ಡಾ. ಹರೀಶ್ ದೇಲಂತಬೆಟ್ಟು ವಂದಿಸಿದರು. ಸಮಾರಂಭದಲ್ಲಿ ತುಳು ಕೂಟದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರಧಾನಮಾಡಲಾಯಿತು, ತುಳು ಕೂಟದ ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.