ಮಂಗಳೂರು, ಜೂ.29; ದೈಹಿಕ,ಮಾನಸಿಕ ಆರೋಗ್ಯಕ್ಕೆ ಯೋಗಾಭ್ಯಾಸ ಅಗತ್ಯವಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಲೋಕಾಯುಕ್ತ ಇಲಾಖೆಯ ಎಸ್.ಪಿ ನಟರಾಜ್ ಹೇಳಿದರು.


ಅವರು ಶನಿವಾರ ಪತ್ರಿಕಾಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ದೇವಿಕಾ ಯೋಗ ಕ್ಲಾಸ್ ಕೇಂದ್ರದ ನಿರ್ದೇಶಕಿ ದೇವಿಕಾ ಪುರುಷೋತ್ತಮ್ ಇವರ ನೇತ್ರತ್ವದಲ್ಲಿ ನಡೆದ ಪತ್ರಕರ್ತರ ಯೋಗ ತರಬೇತಿ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. 
ಯೋಗಾಭ್ಯಾಸ ಎಂದರೆ ಕೇವಲ ದೈಹಿಕ ಅಂಗಾಂಗಗಳನ್ನು ಬಳಸಿ ಆಸನಗಳನ್ನು ಮಾಡುವುದು ಮಾತ್ರವಲ್ಲ, ಯೋಗದಿಂದ ನಮ್ಮ ಮನಸ್ಸು ಹಾಗೂ ನಮ್ಮ ಚಟುವಟಿ ಕೆಗಳನ್ನು ಹೆಚ್ಚು ಉತ್ಸಾಹದಿಂದ ಮಾಡಲು ಸಹಕಾರಿ ಇದರಿಂದ ಯೋಗ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಪೂರಕವಾಗಿದೆ ಎಂದರು.
ದೇವಿಕಾ ಯೋಗ ತರಬೇತಿ ಕೇಂದ್ರದ ಶಿಕ್ಷಕಿ ದೇವಿಕಾ ಪುರುಷೋತ್ತಮ ಮಾತನಾ ಡುತ್ತಾ,ಯೋಗ ತರಬೇತಿ ನೀಡುವವರು ವ್ಯಕ್ತಿಯ ಮಾನಸಿಕ,ದೈಹಿಕ ಸ್ಥಿತಿಯನ್ನು ಅರಿತುಕೊಂಡು ಆತನಿಗೆ ಪೂರಕವಾದ ಯೋಗ ತರಬೇತಿ ನೀಡಿದಾಗ ಆತನ ದೇಹದ ಅಂಗಾಂಗಗಳಲ್ಲಿ ಶಕ್ತಿ ತುಂಬಲು ಸಾಧ್ಯ ಮತ್ತು ಮಾನಸಿಕ ಆರೋಗ್ಯ ವರ್ಧನೆಗೆ ಸಹಾಯವಾಗುತ್ತದೆ ಎಂದರು.

ಯೋಗ ಶಿಬಿರದ ಮೂಲಕ ಬಂದಿರುವ ಗುರು ದಕ್ಷಿಣೆಯನ್ನು ಸಾಮಾಜಿಕ ಕಾರ್ಯ ಚಟುವಟಿಕೆ ಗಳಿಗೆ ಬಳಸಲಾಗಿದೆ. ಮಂಗಳೂರು ಸೇರಿದಂತೆ ಜಿಲ್ಲೆಯ ವಿವಿಧ ಆಶ್ರಮಗಳಿಗೆ ಅಗತ್ಯ ಸಾಮಗ್ರಿಗಳನ್ನು ವಿತರಿಸಲಾಗಿದೆ ಎಂದು ಹೇಳಿದರು. ಐಎಂಎ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಕಾರ್ಯದರ್ಶಿ ಡಾ. ಅವಿನ್ ಆಳ್ವ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ,ಯೋಗದ ಮೂಲಕ ಮಾಡುವ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಪೂರಕವಾದ ಚಟುವಟಿಕೆ ವೈದ್ಯಕೀಯ ಚಿಕಿತ್ಸೆಯಲ್ಲೂ ರೋಗಿಯ ರೋಗ ಗುಣಮುಖವಾಗಲು ಸಹಕಾರಿ ಎಂದರು.

ಸಮಾರಂಭದಲ್ಲಿ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು.
ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ,ಪತ್ರಕರ್ತರ ಸಂಘದ ಕೋಶಾಧಿಕಾರಿ ಪುಷ್ಪರಾಜ್.ಬಿ.ಎನ್, ಉಪಾಧ್ಯಕ್ಷ ಆರಿಫ್ ಪಡುಬಿದ್ರೆ,ಪ್ರೆಸ್ ಕ್ಲಬ್ ಕಾರ್ಯಕಾರಿ ಸಮಿತಿ ಸದಸ್ಯ ದಯಾ ಕುಕ್ಕಾಜೆ, ಪತ್ರಕರ್ತರಾದ, ಗಿರಿಧರ ಶೆಟ್ಟಿ ಉಪಸ್ಥಿತರಿದ್ದರು. ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು. ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ ಕಾರ್ಯಕ್ರಮ ನಿರೂಪಿಸಿದರು.

ಪತ್ರಕರ್ತರಿಗೆ ಯೋಗ ಶಿಬಿರ ನಡೆಸಿದ ಯೋಗ ಶಿಕ್ಷಕಿ ದೇವಿಕಾ ಪುರುಷೋತ್ತಮ ಇದೇ ಸಂದರ್ಭದಲ್ಲಿ ಅನ್ನಪೂರ್ಣೇಶ್ವರಿ ಅಂಧ ಕಲಾವಿದರ ಸಂಘದ ಕಲಾವಿದರಿಗೆ ತಮಗೆ ನೀಡಿದ ಗೌರವಧನ, ಗುರು ಕಾಣಿಕೆಗಳನ್ನು ಹಾಗೂ ಜೀವನ ಅವಶ್ಯಕ ಸಾಮಗ್ರಿಗಳನ್ನು ಹಸ್ತಾಂತರಿಸಿ ಗೌರವಿಸಿದರು.