ಮಂಗಳೂರು: ಸಂಗೀತ ತಜ್ಞ ಮತ್ತು ತರಬೇತುದಾರ ರೋಶನ್ ಫ್ರಾನ್ಸಿಸ್ ಮಾರ್ಟಿಸ್, ಕದ್ರಿ ಇವರಿಗೆ ಮಾಂಡ್ ಸೊಭಾಣ್ ಮತ್ತು ಸುಮೇಳ್ ಗಾಯನ ತಂಡ ನೀಡುವ 2022 ನೇ ಸಾಲಿನ ಅಂತರರಾಷ್ಟ್ರೀಯ ಸಂಗೀತ ದಿನದ ಸನ್ಮಾನಕ್ಕೆ ಆಯ್ಕೆ ಮಾಡಲಾಗಿದೆ. ಕಲಾಂಗಣದಲ್ಲಿ 02-10-2022 ರಂದು ನಡೆಯುವ ತಿಂಗಳ ವೇದಿಕೆ ಸರಣಿಯ 250ನೇ ಕಾರ್ಯಕ್ರಮದಲ್ಲಿ ಈ ಸನ್ಮಾನ ನೆರವೇರಲಿದೆ.

ಹಿಂದೂಸ್ತಾನಿ ಶಾಸ್ತ್ರೀಯ ಗಾಯನದಲ್ಲಿ ಸಂಗೀತ ವಿಶಾರದ ಪದವಿ ಪಡೆದಿರುವ ಮಾರ್ಟಿಸ್ 1994 ರಿಂದ ಸಂಗೀತ ಗುರುವಾಗಿ, ಲೇಖಕರಾಗಿ, ಪ್ರದರ್ಶನಗಳನ್ನು ನೀಡಿ ಈ ಕ್ಷೇತ್ರದಲ್ಲಿ ತನ್ನ ಛಾಪು ಮೂಡಿಸಿದ್ದಾರೆ. ಮಂಗಳೂರಿನ ಕದ್ರಿಯಲ್ಲಿ ‘ಸುರ್ ರಂಗ್’ ಎಂಬ ಸಂಗೀತ ಶಾಲೆ ಸ್ಥಾಪಿಸಿ, ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ. ಭಾರತೀಯ ವಿದ್ಯಾಭವನ, ಎನ್‌ಐಟಿಕೆ ಸುರತ್ಕಲ್, ಪಾದುವಾ ಮತ್ತು ಆಳ್ವಾಸ್ ಸಂಸ್ಥೆಗಳಲ್ಲಿ ತರಬೇತಿ ನೀಡಿದ್ದಾರೆ. ದೇಶ ವಿದೇಶಗಳಲ್ಲಿ ಸಂಗೀತ ಕಮ್ಮಟಗಳನ್ನು ನಡೆಸಿದ್ದಾರೆ. ಸಂಗೀತ ಮತ್ತು ಇತರೆ ಪ್ರದರ್ಶನ ಕಲೆಗಳ ಬಗ್ಗೆ ಪತ್ರಿಕೆಗಳಲ್ಲಿ ವಿಮರ್ಶಾತ್ಮಕ ಲೇಖನಗಳನ್ನು ಪ್ರಕಟಿಸಿದ್ದಾರೆ. ದಾಯ್ಜಿವರ್ಲ್ಡ್ ಟಿವಿಯ ‘ಜಿಗಿಬಿಗಿ ತಾರಾಂ’ ಮತ್ತು ‘ಡ್ಯುಯೆಟ್ ಸಿಂಗಿಂಗ್ ಸ್ಟಾರ್’ ಟಿವಿ ರಿಯಾಲಿಟಿ ಶೋ ಹಾಗೂ ಇತರೆ ಸರಕಾರಿ ಮತ್ತು ಖಾಸಗಿ ಸಂಸ್ಥೆಗಳ ಸಂಗೀತ ಸ್ಪರ್ಧೆಗಳಲ್ಲಿ ತೀರ್ಪುದಾರರಾಗಿ ಭಾಗವಹಿಸಿದ್ದಾರೆ.

ಸಂಗೀತ ಕ್ಷೇತ್ರಕ್ಕೆ ಅವರು ನೀಡಿದ ಬಹುಮೂಲ್ಯ ಕೊಡುಗೆಯನ್ನು ಪರಿಗಣಿಸಿ ಅವರನ್ನು ಈ ಸನ್ಮಾನಕ್ಕೆ ಆಯ್ಕೆ ಮಾಡಲಾಗಿದೆ. ಈ 250 ನೇ ಸರಣಿಯಲ್ಲಿ ಹೊಸದಾಗಿ ರಚಿಸಿದ ಹಾಡುಗಳ ‘ನವಿಂ ಮೊತ್ಯಾಂ’ ಸಂಗೀತ ರಸಮಂಜರಿ ನಡೆಯಲಿದೆ. ಸರ್ವರಿಗೂ ಮುಕ್ತ ಪ್ರವೇಶವಿದ್ದು ಕಾರ್ಯಕ್ರಮ ಸಂಜೆ 6.30 ಕ್ಕೆ ಆರಂಭವಾಗಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.