ಮೂಡುಬಿದಿರೆ: ಜಪಾನಿನ ಹಿಮೇಜಿಯಲ್ಲಿ ಶುಕ್ರವಾರ ನಡೆದ ಏಶಿಯನ್-ಆಫ್ರಿಕನ್ ಫೆಸಿಫಿಕ್ ಅಂತಾರಾಷ್ಟ್ರೀಯ ಪವರ್‌ಲಿಫ್ಟಿಂಗ್‌ನ 57 ಕೆ.ಜಿ ವಿಭಾಗದಲ್ಲಿ ಮೂಡುಬಿದಿರೆ ಕಡಂದಲೆಯ ನಮಿ ರೈ ಪಾರೇಖ್ ಮೊದಲ ಸ್ಥಾನ ಪಡೆದು ಚಿನ್ನದ ಪದಕ ಜಯಿಸಿದ್ದಾರೆ.

2019ರಲ್ಲಿ ರಷ್ಯಾದ ಮಾಸ್ಕೋದಲ್ಲಿ ನಡೆದ ಪವರ್‌ಲಿಫ್ಟಿಂಗ್‌ನ ಮೂರು ವಿಭಾಗಗಳಲ್ಲಿ ಚಾಂಪಿಯನ್ ಆಗಿ ವಿಶ್ವ ದಾಖಲೆಯನ್ನು ಮಾಡಿರುತ್ತಾರೆ. 2019ರಲ್ಲಿ ಪಂಜಾಬ್‌ನಲ್ಲಿ ನಡೆದ ರಾಷ್ಟ್ರೀಯ ಪವರ್‌ಲಿಫ್ಟಿಂಗ್‌ನಲ್ಲಿ ಎರಡು ನೂತನ ದಾಖಲೆ ನಿರ್ಮಿಸಿ, ಸ್ವರ್ಣ ಪದಕಗಳೊಂದಿಗೆ `ಅತ್ಯಂತ ಬಲಿಷ್ಠ ಮಹಿಳೆ ಪ್ರಶಸ್ತಿ'ಯನ್ನು ಪಡೆದಿದ್ದರು.

ಈಕೆ ಆಳ್ವಾಸ್ ಕ್ರೀಡಾ ದತ್ತು ಸ್ವೀಕಾರ ಯೋಜನೆಯಡಿ ವ್ಯಾಸಂಗ ಮಾಡಿದ ವಿದ್ಯಾರ್ಥಿನಿಯಾಗಿದ್ದರು.
ಛತ್ತಿಸ್‌ಗಢ್ ರಾಯ್‌ಪುರ್‌ನಲ್ಲಿ ನೆಲೆಸಿರುವ ಅವರು ಬೆಂಗಳೂರಿನ ಜೈನ ವಿಶ್ವವಿದ್ಯಾಲಯದ ಎಂಬಿಎ ಪದವೀಧರೆಯಾಗಿದ್ದು, ಉದ್ಯಮಿ ಸನ್ನಿ ಪಾರೇಖ್ ಅವರ ಪತ್ನಿ. ಮೂಡುಬಿದಿರೆ ಕಡಂದಲೆಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಸದಾಶಿವ ರೈ ವೇಣೂರು- ನಿವೃತ್ತ ಹಿಂದಿ ಶಿಕ್ಷಕಿ ಜಯಲಕ್ಷ್ಮಿ ಅವರ ಪುತ್ರಿ.