ಮೂಡುಬಿದಿರೆ: ಆರೋಗ್ಯ ಕ್ಷೇತ್ರದಲ್ಲಿ ಮಾನಸಿಕ ರೋಗಗಳ ಚಿಕಿತ್ಸೆಯ ವೈದ್ಯರು ಹಾಗೂ ವ್ಯಸನಮುಕ್ತ ಕೇಂದ್ರಗಳ ಅಗತ್ಯ ಬಹಳಷ್ಟಿದೆ.  ನಮ್ಮ ದೇಶದಲ್ಲಿನ ಪ್ರತೀ ಜಿಲ್ಲೆಯಲ್ಲಿ  2 ಲಕ್ಷ ಜನ ಮದ್ಯವ್ಯಸನದ ಸಮಸ್ಯೆಯಿಂದ ನೇರವಾಗಿ ಅಥವಾ ಪರೋಕ್ಷವಾಗಿ ಬಳಲುತ್ತಿದ್ದಾರೆ. ಆದರೆ ಈ ಸಮಸ್ಯೆಯನ್ನು ಪರಿಹರಿಸಲು ಸೂಕ್ತ ವ್ಯವಸ್ಥೆ ನಮ್ಮಲ್ಲಿಲ್ಲ ಎಂದು ಉಡುಪಿಯ ಡಾ. ಎವಿ ಬಾಳಿಗಾ ಆಸ್ಪತ್ರೆಯ ನಿರ್ದೇಶಕ ಡಾ. ಪಿವಿ ಭಂಡಾರಿ ನುಡಿದರು. 

ಅವರು ಆಳ್ವಾಸ್ ಶಿಕ್ಷಣ ಸಂಸ್ಥೆಯಿಂದ ಮಿಜಾರಿನಲ್ಲಿ ನೂತನವಾಗಿ ನಿರ್ಮಾಣಗೊಂಡ ಬಹುಶಿಸ್ತೀಯ ಸಮಗ್ರ ಚಿಕಿತ್ಸೆಗಳನ್ನು ನೀಡುವ ‘ಆಳ್ವಾಸ್ ಪುನರ್ಜನ್ಮ’ ಮಾನಸಿಕ ಆರೋಗ್ಯ ಆಸ್ಪತ್ರೆಯನ್ನು  ಉದ್ಘಾಟಿಸಿ ಮಾತನಾಡಿದರು.   

ಕೋವಿಡ್ ನಂತರದ ದಿನಗಳಲ್ಲಿ ಜನರು  ಹೃದಯ ಸಮಸ್ಯೆಗೆ ಹೆಚ್ಚಿನ ಗಮನಕೊಡುತ್ತಿದ್ದು, ವಾಸ್ತವದಲ್ಲಿ ಮಾನಸಿಕ ರೋಗದಿಂದ ಬಳಲುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಈ ಸಮಸ್ಯೆ ಮಕ್ಕಳಿಂದ ಹಿಡಿದು ವೃದ್ಧಾಪ್ಯದವರನ್ನು ಕಾಡುತ್ತಿದೆ. ಮಾನಸಿಕ ರೋಗಗಳಿಗೆ ಚಿಕಿತ್ಸೆಯು ಎಲ್ಲರಿಗೂ ಸುಲಭವಾಗಿ ಕೈಗೆಟುಕುವ ದರದಲ್ಲಿ, ಹತ್ತಿರದಲ್ಲಿ ಲಭ್ಯವಿರಬೇಕು. ಈ ಕ್ಷೇತ್ರದಲ್ಲಿನ ವೃತ್ತಿಪರತೆ ಮಾತ್ರ ಚಿಕಿತ್ಸೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಬಲ್ಲದು. ಆಳ್ವಾಸ್  ಶಿಕ್ಷಣ ಸಂಸ್ಥೆಯಿಂದ ಅರಂಭಗೊಂಡಿರುವ ನೂತನ ಮಾನಸಿಕ ಆರೋಗ್ಯ ಆಸ್ಪತ್ರೆ, ವೈದ್ಯಕೀಯ ಸೇವೆಯ ನೆಲೆಯಲ್ಲಿ ಶ್ರೇಷ್ಠ ಕೊಡುಗೆಯನ್ನು ನೀಡುವ  ಆಸ್ಪತ್ರೆಯಾಗಿ ಮೂಡಿಬರಲಿ ಎಂದು ಹಾರೈಸಿದರು. 

ಒಟ್ಟಾಗಿ ಹೋರಾಡೋಣ: ಡಿಸೋಜಾ

ಮುಖ್ಯ ಅತಿಥಿಯ ನೆಲೆಯಲ್ಲಿ ಮಾತನಾಡಿದ ಮಂಗಳೂರಿನ ಮನೋವೈದ್ಯ ಸಲಹೆಗಾರರಾದ  ಡಾ. ಕ್ಯಾರೋಲಿನ್ ಡಿಸೋಜಾ, ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‍ಸ್ಟ್ಯೇನ್ಸಸ್(ಎನ್‍ಡಿಪಿಎಸ್) ಕಾಯಿದೆಯ ಅಡಿಯಲ್ಲಿ  ಬೆಂಗಳೂರಿನ ನಂತರ ಅತೀ ಹೆಚ್ಚು ಪ್ರಕರಣಗಳು ಮಂಗಳೂರಿನಲ್ಲಿ ದಾಖಲಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಇಂದು ಮದ್ಯಪಾನ, ಮಾದಕವಸ್ತುಗಳು, ಸಿಗರೇಟು, ಡ್ರಗ್ಸ್ ಮುಂತಾದವುಗಳು ಯುವಕ-ಯುವತಿಯರ ಬದುಕನ್ನು ಜರ್ಜರಿತಗೊಳಿಸುತ್ತಿವೆ. ನಾವು ಎಲ್ಲರೂ ಒಟ್ಟಾಗಿ ಹೋರಾಡಿದರೆ, ಯಾವುದೇ ವ್ಯಸನವೂ ನಮ್ಮೊಳಗೆ ತಾನಾಗಿ ಸೋಲುತ್ತದೆ ಎಂದರು. 

ಹೋರಾಟದ ಹಿನ್ನಲೆಯ ಆಳ್ವರು: ಪಾಯಿಸ್

ಬೆಳ್ತಂಗಡಿಯ  ಜನಜಾಗೃತಿ  ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಿಸ್ ಮಾತನಾಡಿ, 1992-1997ರವರೆಗೆ ಮದ್ಯವ್ಯಸನ ಹಾಗೂ ದುಶ್ಚಟಗಳಿಂದ  ಬೆಳ್ತಂಗಡಿ ಭಾಗದ ಜನರನ್ನು ಮುಕ್ತಗೊಳಿಸಲು ಡಾ ಎಂ ಮೋಹನ ಆಳ್ವರಾಧಿಯಾಗಿ ಹಲವರು ಪಟ್ಟ ಶ್ರಮ ಹಾಗೂ ಹೋರಾಟದಿಂದ ಜೆಹೆಚ್ ಪಟೇಲರ ಕಾಲದಲ್ಲಿ  ಬೆಳ್ತಂಗಡಿ ತಾಲೂಕು ಕರ್ನಾಟಕದ ಭೂಪಟದಲ್ಲಿ ಮೊಟ್ಟ ಮೊದಲ ಪಾನಮುಕ್ತ ತಾಲೂಕೆಂದು ಘೋಷಣೆಯಾಯಿತು.  ಇಂತಹ  ಮಧ್ಯಪಾನದ ಕುರಿತು ಜನಜಾಗೃತಿ ಹಾಗೂ ಹೋರಾಟದ ಹಿನ್ನಲೆಯಿಂದ ಬಂದಂತಹ ಡಾ ಎಂ ಮೋಹನ ಆಳ್ವರ  ನೇತೃತ್ವದಲ್ಲಿ ಮೂಡುಬಿದಿರೆ ಭಾಗದಲ್ಲಿ ಒಂದು ಸುಸಜ್ಜಿತ ಆಸ್ಪತ್ರೆಯಾಗುತ್ತಿರುವುದು ಸಂತೋಷದ ವಿಷಯ ಎಂದರು.    

ಮಧ್ಯಪಾನ ಮತ್ತು ಮಾದಕ ವಸ್ತುಗಳಿಂದ  ಮಾನಸಿಕ ರೋಗವೋ ಅಥವಾ ಮಾನಸಿಕ ರೋಗದಿಂದ ಮಧ್ಯಪಾನ ಹಾಗೂ ಮಾದಕ ವಸ್ತುಗಳ ದಾಸರಾಗುತ್ತಾರೆ ಎಂಬ ಚರ್ಚೆ ಜನಸಾಮಾನ್ಯರಲ್ಲಿದೆ.  ಆದರೆ ಇವೆರೆಡು ಒಂದೊಕ್ಕೊಂದು ಪೂರಕ. ಇದು ಮಾನಸಿಕ, ದೈಹಿಕ,  ಕೌಟುಂಬಿಕ, ಸಾಮಾಜಿಕ, ಔದ್ಯೋಗಿಕ ಹಾಗೂ ಮರಾಣಾಂತಿಕ ಸಮಸ್ಯೆಯಾಗಬಲ್ಲ ಕಾಯಿಲೆ.

ಕರ್ನಾಟಕದಲ್ಲಿ 11700 ವೈನ್‍ಶಾಪಗಳಿವೆ

ಕರ್ನಾಟಕ ರಾಜ್ಯದಲ್ಲಿ 11700 ವೈನ್‍ಶಾಪಗಳಿದ್ದು, ಸರಕಾರದ ವತಿಯಿಂದ ಒಂದೇ ಒಂದು ಅಧಿಕೃತ ವ್ಯಸನಮುಕ್ತರನ್ನಾಗಿಸುವ ಕೇಂದ್ರಗಳಿಲ್ಲ. ನಮ್ಮ ಪ್ರಸ್ತುತ ವ್ಯವಸ್ಥೆಯಲ್ಲಿ ಮಧ್ಯಪಾನ ಮಾಡಲು ಸವಲತ್ತುಗಳಿವೆ ಆದರೆ, ನೆಮ್ಮದಿಯಿಂದ ಬದುಕಲು ಅವಕಾಶ ಇಲ್ಲ. ಇದು ದುರಾದೃಷ್ಟ.  ಇಂತಹ ವ್ಯವಸ್ಥೆಯ ನಡುವೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ  ಬಹುಶಿಸ್ತೀಯ ಸಮಗ್ರ ಚಿಕಿತ್ಸೆಯ ಮಾನಸಿಕ ಆರೋಗ್ಯ ಕೇಂದ್ರ ಬರುತ್ತಿರುವುದು  ಶ್ಲಾಘನೀಯ ಎಂದರು.  

ಆಳ್ವಾಸ್ ಪುನರ್ಜನ್ಮದ ವಿಶೇಷತೆ:

ಆಳ್ವಾಸ್ ಪುನರ್ಜನ್ಮ ಸಮಗ್ರ ವೈದ್ಯಕೀಯ ಚಿಕಿತ್ಸೆಯ ದುಶ್ಚಟ ನಿವಾರಣಾ ಕೇಂದ್ರವನ್ನು ಮೇಲ್ದರ್ಜೆಗೇರಿಸಿ ನಿರ್ಮಿಸಲಾಗಿರುವ ನೂತನ 50 ಹಾಸಿಗೆಯ ಆಳ್ವಾಸ್ ಪುನರ್ಜನ್ಮ ಮಾನಸಿಕ ಆರೋಗ್ಯ ಆಸ್ಪತ್ರೆಯಲ್ಲಿ ಬಹುಶಿಸ್ತೀಯ ಸಮಗ್ರ ಚಿಕಿತ್ಸೆಗಳು ಲಭ್ಯವಿವೆ. ಅದರಲ್ಲೂ ಮುಖ್ಯವಾಗಿ ಮಹಿಳೆಯರಿಗೆ ಪ್ರತ್ಯೇಕ ವಿಭಾಗವಿರುವುದು ವಿಶೇಷ.  ಅಲೋಪಥಿ, ನ್ಯಾಚುರೋಪಥಿ, ಆಯುರ್ವೇದ, ಪಿಸಿಯೋತೆರೆಪಿ, ಮನೋವೈದ್ಯ ಶಾಸ್ತ್ರ ಹಾಗೂ ಯೋಗ ಧ್ಯಾನ, ಮಾನಸಿಕ ಹಾಗೂ ಸಾಮಾಜಿಕ ಶಿಕ್ಷಣದೊಂದಿಗೆ ಬಹುಶಿಸ್ತೀಯ ಸಮಗ್ರ ಚಿಕಿತ್ಸೆಯ ವಿಧಾನದೊಂದಿಗೆ ಕಾರ್ಯನಿರ್ವಹಿಸುವ ಆಸ್ಪತ್ರೆ ಇದಾಗಿದೆ.  

 ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಮಾತನಾಡಿ, ಸಮಾಜದ ಪರಿಕಲ್ಪನೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಕೆಲಸ ನಿರ್ವಹಿಸುತ್ತಿದ್ದು, ಈ ನೆಲೆಯಲ್ಲಿ ನೂತನವಾಗಿ ಆರಂಭಗೊಂಡ ಆಳ್ವಾಸ್ ಪುನರ್ಜನ್ಮ ಮಾನಸಿಕ ಆರೋಗ್ಯ ಆಸ್ಪತ್ರೆಯು ಈ ಧ್ಯೇಯೋದ್ದೇಶವನ್ನು  ಇನ್ನಷ್ಟು ಸಕಾರಗೊಳಿಸಲಿದೆ ಎಂದರು. 

 ಕಾರ್ಯಕ್ರಮದಲ್ಲಿ ಉದ್ಯಮಿ ಶ್ರೀಪತಿ ಭಟ್, ಚೌಟರ ಅರಮನೆಯ ಕುಲದೀಪ್ ಎಂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿಗಳಾದ  ವಿವೇಕ್ ಆಳ್ವ, ಡಾ ವಿನಯ ಆಳ್ವ, ಡಾ ಹನ, ಡಾ ಗ್ರೀಷ್ಮಾ ಹಾಗೂ ಇನ್ನಿತರರು ಇದ್ದರು.  ಆಳ್ವಾಸ್ ಸ್ವಾಯತ್ತ ಕಾಲೇಜಿನ ಪ್ರಾಚಾರ್ಯ ಡಾ ಕುರಿಯನ್ ಸ್ವಾಗತಿಸಿ, ಪುನರ್ಜನ್ಮದ ಆಪ್ತ ಸಮಾಲೋಚಕಿ ಸುಮನ್ ಪಿಂಟೋ ವಂದಿಸಿ, ಪ್ರೋ ವೇಣುಗೋಪಾಲ ಶೆಟ್ಟಿ ನಿರೂಪಿಸಿದರು.