ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯು ವಿದ್ಯಾರ್ಥಿಗಳ, ಪ್ರವಾಸಿಗರ, ಧಾರ್ಮಿಕ ಯಾತ್ರಿಗಳ ನೆಲೆಯಾಗಿದ್ದು, ಇಲ್ಲಿ ನಡೆಯುತ್ತಿರುವ ಅನೈತಿಕ ಪೋಲೀಸ್‌ಗಿರಿಯಿಂದಾಗಿ ಜಿಲ್ಲೆಯು ಎಲ್ಲ ಬಗೆಯ ಒಣ ಬಣಗು ಎದುರಿಸುತ್ತಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ ಹೇಳಿದರು.

ಈ ವರುಷ ಎಫ್‌ಐಆರ್ ಆಗಿರುವ 12 ಅನೈತಿಕ ಪೋಲೀಸ್‌ಗಿರಿಗಳು ನಡೆದಿವೆ. ಇದು ಕೂಡ ಚುನಾವಣಾ ರಣ ತಂತ್ರವಾಗಿದ್ದು, ಜಿಲ್ಲೆಗೆ ಇದರಿಂದ ತುಂಬಾ ನಷ್ಟವಾಗಿದೆ. ಧಾರ್ಮಿಕ ವಿಭಜನೆ ಮೂಲಕ ಮತ ಗಳಿಸಲು ನೋಡುವ ಇವರು ಇತರೆಲ್ಲ ಸಮಸ್ಯೆಗಳನ್ನು ಮೂಲೆಗಿರಿಸುತ್ತಿದೆ ಎಂದು ಲುಕ್ಮಾನ್ ಬಂಟ್ವಾಳ ಹೇಳಿದರು.

ಈ ಅನೈತಿಕ ಪೋಲೀಸ್‌ಗಿರಿ ಯಿಂದಾಗಿ ಜಿಲ್ಲೆಗೆ ಹೊಸ ಉದ್ಯಮ ಬರುತ್ತಿಲ್ಲ. ಪ್ರವಾಸಿಗರು ಮತ್ತು ಯಾತ್ರಿಗಳು ಕೂಡ ಕಡಿಮೆ ಆಗುತ್ತಿದ್ದಾರೆ. ಇದರಿಂದಾಗಿ ಜಿಲ್ಲೆಯ ಯುವಕರು ಸಾಕಷ್ಟು ಉದ್ಯೋಗಾವಕಾಶಗಳನ್ನು ಕಳೆದುಕೊಂಡಿದ್ದಾರೆ. ಈ ದ್ವೇಷದ ರಾಜಕೀಯದಿಂದ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ತೊಂದರೆಗೆ ಸಿಲುಕಿದ್ದಾರೆ. ಪೋಲೀಸರು ಒತ್ತಡಕ್ಕೆ ಸಿಲುಕದೆ ಅನೈತಿಕ ಪೋಲೀಸ್‌ಗಿರಿ ನಡೆಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು.

ಅನೈತಿಕ ಪೋಲೀಸ್‌ಗಿರಿ ವಿರುದ್ಧ ಯುವ ಕಾಂಗ್ರೆಸ್ ನಿರಂತರ ಹೋರಾಟ ಮಾಡುತ್ತದೆ. ತೊಂದರೆಗೆ ಸಿಲುಕುವ ಯಾರು ಬೇಕಾದರೂ ನಮ್ಮನ್ನು ಸಂಪರ್ಕಿಸಿದರೆ ಅವರ ಬೆಂಬಲಕ್ಕೆ ನಾವು ನಿಲ್ಲುತ್ತೇವೆ. ಸರ್ವೋದಯ ಸಂಕಲ್ಪ ಕ್ಯಾಂಪ್‌ ಮೂಲಕ ಈ ಬಗೆಗೆ ಯುವಕರಿಗೆ ತರಬೇತಿ ನೀಡುತ್ತೇವೆ. ಆ ಮೂಲಕ ಶಾಂತಿ ಬಯಸುವ 90% ಜನರನ್ನು ನೆಮ್ಮದಿ ಯಲ್ಲಿರಿಸಲು ಯೂತ್ ಕಾಂಗ್ರೆಸ್ ಶ್ರಮಿಸುತ್ತದೆ  ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸರ್‌ಫ್ರಾಜ್ ನವಾಜ್, ಸೌಮ್ಯಲತಾ, ರಮಾನಂದ ಪೂಜಾರಿ, ನವೀದ್ ಮೊದಲಾದವರು ಉಪಸ್ಥಿತರಿದ್ದರು.